Advertisement

Ken-Betwa River linking project: ಅಂಬೇಡ್ಕರ್‌ ಜಲಸಂರಕ್ಷಕ: ಪ್ರಧಾನಿ ಮೋದಿ ಶ್ಲಾಘನೆ

12:30 AM Dec 26, 2024 | Team Udayavani |

ಖಜುರಾಹೋ: “ದೇಶದಲ್ಲಿ ಜಲ ಸಂಪನ್ಮೂಲಗಳನ್ನು ಗಟ್ಟಿಗೊಳಿಸುವಲ್ಲಿ ಮತ್ತು ಅವುಗಳನ್ನು ಸೂಕ್ತವಾಗಿ ನಿರ್ವಹಿಸುವಲ್ಲಿ ಡಾ| ಬಿ.ಆರ್‌.ಅಂಬೇಡ್ಕರ್‌ ಅವರ ಕೊಡುಗೆ ಅನನ್ಯವಾದುದು’ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದ್ದಾರೆ.

Advertisement

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಹೇಳಿಕೆಯಿಂದ ವಿವಾದ ಸೃಷ್ಟಿಯಾಗಿರುವ ಬೆನ್ನಲ್ಲೇ ಪ್ರಧಾನಿ ದೇಶಕ್ಕೆ ಅಂಬೇಡ್ಕರ್‌ ಕೊಡುಗೆಯನ್ನು ಶ್ಲಾಘಿಸಿದ್ದಾರೆ.

ರಾಜಸ್ಥಾನದ ಖಜುರಾಹೋಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಅವರು ಕೆನ್‌-ಬೆತ್ವಾ ನದಿ ಜೋಡಣೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

“ಜಲಸಂಪನ್ಮೂಲಗಳನ್ನು ಸರಿಯಾಗಿ ನಿರ್ವಹಣೆ ಮಾಡಿರುವ ದೇಶಗಳ ಸಾಲಿನಲ್ಲಿ ಭಾರತ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಆದರೆ ಕಾಂಗ್ರೆಸ್‌ನ ಅಧಿಕಾರದಲ್ಲಿದ್ದ ಕಾರಣ ಈ ಯೋಜನೆ 40 ವರ್ಷಗಳ ವಿಳಂಬವಾಗಿತ್ತು’ ಎಂದು ಹೇಳಿದ್ದಾರೆ.

ಅಂಬೇಡ್ಕರ್‌ ಕೊಡುಗೆ ಮರೆಯಲಾಗದ್ದು: “ದೇಶದ ಜಲ ಸಂಪನ್ಮೂಲಗಳನ್ನು ಗಟ್ಟಿಗೊಳಿಸುವ ಹಾಗೂ ಅವುಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸುವಲ್ಲಿ ಅಂಬೇಡ್ಕರ್‌ ಅವರ ದೂರದೃಷ್ಟಿಯು ಪ್ರಮುಖ ಕೊಡುಗೆ ನೀಡಿದೆ. ನದಿ ಕಣಿವೆ ಯೋಜನೆಗಳನ್ನು ರೂಪಿಸುವ ಹಾಗೂ ಕೇಂದ್ರ ಜಲ ಆಯೋಗವನ್ನು ಸ್ಥಾಪಿಸುವಲ್ಲಿ ಅಂಬೇಡ್ಕರ್‌ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ’ ಎಂದು ಅವರು ಹೇಳಿದರು.

Advertisement

ಕಾಂಗ್ರೆಸ್‌ ವಿರುದ್ಧ ವಾಗ್ಧಾಳಿ: ಜಲ ಸಂರಕ್ಷಣೆ 21ನೇ ಶತಮಾನದ ಬಹುದೊಡ್ಡ ಸವಾಲು. ಸೂಕ್ತವಾದ ಜಲ ನಿರ್ವಹಣೆ ಹಾಗೂ ಜಲಮೂಲಗಳನ್ನು ಸರಿಯಾಗಿ ಸಂರಕ್ಷಣೆ ಮಾಡುವ ದೇಶ ಮಾತ್ರ ಈ ಶತಮಾನದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯ. ಆದರೆ ಕಾಂಗ್ರೆಸ್‌ ಈ ಬಗ್ಗೆ ಗಮನ ಹರಿಸಿಲ್ಲ. ಜಲ ಸಂರಕ್ಷಕನಾಗಿ ಅಂಬೇಡ್ಕರ್‌ ಅವರು ನೀಡಿದ ಕೊಡುಗೆಯನ್ನೂ ಗಮನಿಸಿಲ್ಲ. ಅಧಿಕಾರವನ್ನು ಜನ್ಮಸಿದ್ಧ ಹಕ್ಕು ಎಂದು ಭಾವಿಸುವ ಕಾಂಗ್ರೆಸ್‌, ಅದನ್ನು ಸರಿಯಾಗಿ ನಿರ್ವ ಹಿಸುವಲ್ಲಿ ಎಡವಿದೆ. ಜನರಿಗೆ ಅನುಕೂಲವಾಗದ ರೀತಿಯಲ್ಲಿ ಯೋಜನೆಗಳನ್ನು ಘೋಷಿಸುವುದರಲ್ಲಿ ಕಾಂಗ್ರೆಸ್‌ ನಾಯಕರು ನಿಸ್ಸೀಮರು. ಕಾಂಗ್ರೆಸ್‌ ಅಧಿಕಾರದಲ್ಲಿದ್ದ ಕಾರಣದಿಂದಲೇ ಈ ಯೋಜನೆಗಳು 30ರಿಂದ 40 ವರ್ಷಗಳ ಕಾಲ ವಿಳಂಬವಾಗಿದೆ ಎಂದು ವಾಗ್ಧಾಳಿ ನಡೆಸಿದ್ದಾರೆ.

ಹುಲಿ ಸಂರಕ್ಷಿತ ಪ್ರದೇಶಕ್ಕೆ ತೊಡಕು: ಕಾಂಗ್ರೆಸ್‌
ಮಧ್ಯಪ್ರದೇಶದ ಪನ್ನ ಹುಲಿ ಸಂರಕ್ಷಿತ ಪ್ರದೇಶಕ್ಕೆ ಕೆನ್‌-ಬೆತ್ವಾ ಯೋಜನೆ ಬಹುದೊಡ್ಡ ತೊಂದರೆ ತಂದೊಡ್ಡಲಿದೆ. ಕಾಮಗಾರಿ ಆರಂಭವಾದರೆ ಹುಲಿಗಳ ಆವಾಸಸ್ಥಾನ ನಶಿಸುವುದರ ಜತೆಗೆ 23 ಲಕ್ಷಕ್ಕೂ ಅಧಿಕ ಮರಗಳು ಧರಾಶಾಯಿ ಆಗಬೇಕಾಗುತ್ತದೆ. ಈ ಮೂಲಕ ಪರಿಸರ ಸಂರಕ್ಷಣೆ ವಿಚಾರದಲ್ಲಿ ತಮ್ಮ ನುಡಿ ಮತ್ತು ನಡೆ ಬೇರೆ ಎಂಬುದನ್ನು ಪ್ರಧಾನಿ ಮೋದಿ ಮತ್ತೊಮ್ಮೆ ನಿರೂಪಿಸಿದ್ದಾರೆ ಹೀಗೆಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌ ಟ್ವೀಟ್‌ ಮಾಡಿ, ಆಕ್ಷೇಪಿಸಿದ್ದಾರೆ.

44,605 ಕೋಟಿ ರೂ. ಯೋಜನೆಗೆ ಅಡಿಗಲ್ಲು
ಮಧ್ಯಪ್ರದೇಶಕ್ಕೆ ಭೇಟಿ ನೀಡಿದ ಮೋದಿ ಅವರು 44,605 ಕೋಟಿ ರೂ. ಮೌಲ್ಯದ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದರು. ಈ ನದಿ ಜೋಡಣೆಯಿಂದ 2,000 ಗ್ರಾಮಗಳು ಕುಡಿಯುವ ನೀರಿನ ಸೌಲಭ್ಯ ಪಡೆದುಕೊಳ್ಳ ಲಿವೆ. ಇದೇ ವೇಳೆ ಓಂಕಾರೇಶ್ವರ ಫ್ಲೋಟಿಂಗ್‌ ಸೋಲಾರ್‌ ಯೋಜನೆಗೂ ಪ್ರಧಾನಿ ಚಾಲನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next