Advertisement

ಪೇಪಾರ್ಕಿಂಗ್‌ ವ್ಯವಸ್ಥೆ ರದ್ಧತಿಗೆ ನಿರ್ಧಾರ 

03:23 PM Jun 28, 2018 | Team Udayavani |

ಬೆಳ್ತಂಗಡಿ : ನಗರದಲ್ಲಿ ಸುಗಮ ಸಂಚಾರದ ದೃಷ್ಟಿ ಯಿಂದ ಪೇಪಾರ್ಕಿಂಗ್‌ ವ್ಯವಸ್ಥೆಯನ್ನು ಜಾರಿಗೊಳಿಸಿದ್ದು, ಪ್ರಸ್ತುತ ಇದರಿಂದ ಕೆಲವರು ಅಧ್ಯಕ್ಷರ ವೈಯಕ್ತಿಕ ನಿಂದನೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಪೇಪಾರ್ಕಿಂಗ್‌ ವ್ಯವಸ್ಥೆಯನ್ನು ರದ್ದುಗೊಳಿಸಲು ಉದ್ದೇಶಿಸಲಾಗಿದೆ ಎಂದು ಬೆಳ್ತಂಗಡಿ ಪಟ್ಟಣ ಪಂಚಾಯತ್‌ ಅಧ್ಯಕ್ಷ ಮುಗುಳಿ ನಾರಾಯಣ ರಾವ್‌ ಹೇಳಿದರು.

Advertisement

ಅವರು ಬುಧವಾರ ಪಂ.ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿದ್ದರು. ನಗರವನ್ನು ಸ್ವಚ್ಚ ಹಾಗೂ ಸುಂದರ ನಗರವನ್ನಾಗಿ ಮಾಡುವ ದೃಷ್ಟಿಯಿಂದ ಪ್ರಾಯೋಗಿಕವಾಗಿ ಶುಲ್ಕ ಪಾವತಿಸಿ ಪಾರ್ಕಿಂಗ್‌ಗೆ ಅವಕಾಶ ನೀಡಲಾಗಿತ್ತು. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿ ಅಧ್ಯಕ್ಷರ ಕುಟುಂಬಕ್ಕೂ ಬೈಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಪ್ರಾಯೋಗಿಕ ತೀರ್ಮಾನವನ್ನು ಕೈಬಿಡಲಾಗುತ್ತದೆ ಎಂದು ಅಧ್ಯಕ್ಷರು ತಿಳಿಸಿದರು. 

ಪಂ. ವ್ಯಾಪ್ತಿಯ ನಿವೇಶನರಹಿತರಿಗೆ ಮೀಸಲಿಟ್ಟ ಜಾಗ ಹಂಚಿಕೆಯನ್ನು ಶೀಘ್ರ ಮಾಡಬೇಕು ಎಂದು ಉಪಾಧ್ಯಕ್ಷ ಜಗದೀಶ್‌ ಆಗ್ರಹಿಸಿದರು. ಅರಣ್ಯ ಇಲಾಖೆಯ ತಕರಾರು, ನೀತಿ ಸಂಹಿತೆಯಿಂದಾಗಿ ನಿವೇಶನ ಹಂಚಿಕೆ ವಿಳಂಬವಾಗಿದೆ. ಪ್ರಸ್ತುತ ಅದು ಸರಿಯಾಗಿದ್ದು, ಕಲ್ಲಗುಡ್ಡೆ ನಿವೇಶನದಲ್ಲಿ ಕಲ್ಲು ತೆಗೆಯುವ ಕಾರ್ಯ ನಡೆದ ತತ್‌ಕ್ಷಣ ನಿವೇಶನ ಹಂಚಿಕೆ ನಡೆಯಲಿದೆ ಎಂದು ಅಧ್ಯಕ್ಷರು ಉತ್ತರಿಸಿದರು.

ಸುದೆಮುಗೇರು: ವೀಡಿಯೋ ವೈರಲ್‌
ಸುದೆಮುಗೇರು ಪ್ರದೇಶದಲ್ಲಿ ಕಲುಷಿತ ನೀರು ಸರಬರಾಜು ಆಗುತ್ತಿದೆ ಎಂಬ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಈ ಕುರಿತು ಸ್ಪಷ್ಟನೆ ನೀಡುವಂತೆ ಸದಸ್ಯರು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ಕುಡಿಯುವ ನೀರಿನಲ್ಲಿ ಯಾವುದೇ ದೋಷವಿಲ್ಲ. ಶುದ್ಧೀಕರಿಸಿದ ನೀರನ್ನೇ ಸರಬರಾಜು ಮಾಡಲಾಗುತ್ತಿದೆ. ಶುದ್ದೀಕರಣ ಘಟಕದಲ್ಲಿ ನೀರಿಗೆ ಕೆಲವೊಂದು ಶುದ್ಧೀಕರಣ ವಸ್ತುಗಳನ್ನೂ ಬಳಸಲಾಗುತ್ತಿದೆ. ಈಗಾಗಲೇ ಎರಡೆರಡು ಪ್ರಯೋಗಾಲಯಗಳಲ್ಲಿ ನೀರನ್ನು ಪರೀಕ್ಷಿಸಲಾಗಿದ್ದು, ಯಾವುದೇ ದೋಷಗಳು ಕಂಡುಬಂದಿಲ್ಲ. ಸಾಂಕ್ರಾಮಿಕ ರೋಗ ಬರದ ಹಾಗೆ ಮಳೆ ನೀರು ನಿಲ್ಲದಂತೆ ಚರಂಡಿ ಸ್ವಚ್ಚತಾ ಕಾರ್ಯ ನಡೆಯುತ್ತಿದೆ ಎಂದರು.

ಸಭೆಯಲ್ಲಿ ಮಾರ್ಚ್‌, ಎಪ್ರಿಲ್‌, ಮೇ ತಿಂಗಳ ಜಮಾ ಖರ್ಚುಗಳನ್ನು ಮಂಜೂರುಗೊಳಿಸಲಾಯಿತು. ಮಳೆಗಾಲ ಪ್ರಾರಂಭವಾಗುವಾಗ ಕೆಲವೊಂದು ತುರ್ತು ಕಾಮಗಾರಿ ಮಾಡಿದ್ದು, ಅದನ್ನು ಮಂಜೂರಾತಿ ಮಾಡಲಾಯಿತು. ಕೆಲ್ಲಗುತ್ತು ಚರಂಡಿ ವಿಸ್ತರಣೆ, ಕೆರಳಕೋಡಿಯಲ್ಲಿ ಕುಸಿದ ಮಣ್ಣು ತೆರವು, ಬಂಟರ ಭವನದ ಎದುರಿನ ಚರಂಡಿಗೆ ಪೈಪ್‌ ಅಳವಡಿಸುವುದು, ವಿವಿಧ ಸ್ಥಳಗಳಲ್ಲಿ ವಿದ್ಯುತ್‌ ಕಂಬಗಳ ಅಳವಡಿಕೆ ಮೊದಲಾದ ವಿಚಾರಗಳ ಕುರಿತು ಚರ್ಚೆ ನಡೆಯಿತು.

Advertisement

ಮುಖ್ಯಾಧಿಕಾರಿಗಳ ಅನಾರೋಗ್ಯದ ಹಿನ್ನೆಲೆಯಲ್ಲಿ ಸಿಬಂದಿಗೆ ವೇತನ ವಿಳಂಬವಾಗಿದ್ದು, ಈ ಸಮಸ್ಯೆಯನ್ನು ತತ್‌ಕ್ಷಣ ಪರಿಹರಿಸಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು. ಸಭೆಯಲ್ಲಿ ಸ್ಥಾಯೀ ಸಮಿತಿ ಅಧ್ಯಕ್ಷೆ ಮಮತಾ ವಿ. ಶೆಟ್ಟಿ, ಎಂಜಿನಿಯರ್‌ ಮಹಾವೀರ ಅರಿಗ, ಶಹರಿ ರೋಜ್‌ಗಾರ್‌ ಯೋಜನೆಯ ಯೋಜನಾಧಿಕಾರಿ ವೆಂಕಟರಮಣ ಶರ್ಮ ಮೊದಲಾದವರು ಉಪಸ್ಥಿತರಿದ್ದರು. 

ಅಭಿವೃದ್ಧಿಯಲ್ಲಿ ರಾಜಕೀಯ ಬೇಡ
ಸಭೆಗೆ ಆಗಮಿಸಿದ್ದ ವಿ.ಪ. ಸದಸ್ಯ ಕೆ. ಹರಿಶ್‌ಕುಮಾರ್‌ ಮಾತನಾಡಿ, ನಗರದ ಅಭಿವೃದ್ಧಿ ದೃಷ್ಟಿಯಿಂದ ಎಲ್ಲರೂ ರಾಜಕೀಯ ಮರೆತು ಕೆಲಸ ಮಾಡಬೇಕು. ನಮ್ಮ ರಾಜಕೀಯ ಚುನಾವಣೆಗೆ ಮಾತ್ರ ಸೀಮಿತವಾದಾಗ ಮಾತ್ರ ಸಾರ್ವಜನಿಕರು ಹೆಚ್ಚಿನ ಅಭಿವೃದ್ಧಿ ನಿರೀಕ್ಷಿಸ ಬಹುದು. ಪ್ರಸ್ತುತ ಹೆಚ್ಚಿನ ಅಭಿವೃದ್ಧಿ ನಡೆದಿದ್ದು, ಅದು ನಿರಂತರವಾಗಲಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next