Advertisement
ಈ ವಿಶ್ವಕಪ್ ತಂಡಗಳ ಸಂಖ್ಯೆ 9ಕ್ಕೆ ಏರಿತ್ತು. ಅಂದರೆ ಹಿಂದಿನ 3 ಪಂದ್ಯಾವಳಿಗಿಂತ ಒಂದು ತಂಡ ಹೆಚ್ಚು. ಕ್ರಿಕೆಟ್ ಬಹಿಷ್ಕಾರದಿಂದ ಮುಕ್ತಗೊಂಡ ದಕ್ಷಿಣ ಆಫ್ರಿಕಾ ಮೊದಲ ಸಲ ಈ ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ಆಡಲಿಳಿಯಿತು. ಮತ್ತೆ ನೆದರ್ಲೆಂಡ್ಸ್‌ಗೆ ಸೋಲುಣಿಸಿ 1990ರ ಐಸಿಸಿ ಟ್ರೋಫಿ ಗೆದ್ದ ಜಿಂಬಾಬ್ವೆ 9ನೇ ತಂಡವಾಗಿತ್ತು. ಈ ಕೂಟದ ಪ್ರಾಯೋಜಕತ್ವ ವಹಿಸಿದ್ದು ಬೆನ್ಸನ್ ಆ್ಯಂಡ್ ಹೆಜಸ್ ಕಂಪೆನಿ.
ಪಂದ್ಯಾವಳಿಯ ಮಾದರಿಯಲ್ಲೂ ದೊಡ್ಡ ಬದಲಾವಣೆ ಆಗಿತ್ತು. ಹಿಂದಿನ 3 ಕೂಟಗಳು ಲೀಗ್ ಮಾದರಿಯಲ್ಲಿ ನಡೆದರೆ, ಇಲ್ಲಿ ಮೊದಲ ಸಲ ರೌಂಡ್ ರಾಬಿನ್ ಲೀಗ್ ಮಾದರಿಯನ್ನು ಅಳವಡಿಸಲಾಯಿತು. ಅಂದರೆ, ತಂಡವೊಂದು ಉಳಿದೆಲ್ಲ ತಂಡಗಳ ವಿರುದ್ಧ ಆಡುವ ವಿಧಾನವಿದು. ಅಗ್ರ 4 ಸ್ಥಾನ ಪಡೆದ ತಂಡಗಳಿಗೆ ಸೆಮಿಫೈನಲ್ ಅವಕಾಶ. ಇಲ್ಲಿಯೂ ಅಷ್ಟೇ, ಕಳೆದ ಸಲದಂತೆ ಆತಿಥೇಯ ತಂಡಗಳಿಗೆ ಅದೃಷ್ಟ ಕೈಕೊಟ್ಟಿತು. ಆಸೀಸ್ ಲೀಗ್ ಗಡಿ ದಾಟಲಿಲ್ಲ, ಕಿವೀಸ್ ಫೈನಲ್ ತಲುಪಲಿಲ್ಲ. ಉಪಾಂತ್ಯ ತಲುಪಿದ ಉಳಿದ 3 ತಂಡಗಳೆಂದರೆ ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ಥಾನ.
Related Articles
ಹಾಂ… ವಿಚಿತ್ರ ಮಳೆ ನಿಯಮವೊಂದನ್ನು ಈ ವಿಶ್ವಕಪ್ ಮೂಲಕ ಅಳವಡಿಸಲಾಯಿತು. ಇದಕ್ಕೆ ಬಲಿಯಾದ ಮೊದಲ ತಂಡ ದಕ್ಷಿಣ ಆಫ್ರಿಕಾ. ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಸುಸ್ಥಿತಿಯಲ್ಲಿದ್ದ ದಕ್ಷಿಣ ಆಫ್ರಿಕಾಕ್ಕೆ ಈ ಡಕ್‌ವರ್ತ್ -ಲೂಯಿಸ್ ನಿಯಮ ವಿಲನ್ ಆಗಿ ಪರಿಣಮಿಸಿತು. ಮಳೆ ನಿಂತು ಪಂದ್ಯ ಮೊದಲ್ಗೊಂಡಾಗ ಒಂದು ಎಸೆತಕ್ಕೆ 22 ರನ್ ಗಳಿಸಬೇಕಾದ ಸವಾಲು ದಕ್ಷಿಣ ಆಫ್ರಿಕಾಕ್ಕೆ ಎದುರಾಗಿತ್ತು. ಮೊದಲ ವಿಶ್ವಕಪ್ ಪ್ರವೇಶದಲ್ಲೇ ಅಮೋಘ ಪ್ರದರ್ಶನ ನೀಡಿ, ಇಂಗ್ಲೆಂಡನ್ನು ಸೋಲಿಸುವ ಹಂತಕ್ಕೆ ಬಂದಿದ್ದ ಹರಿಣಗಳ ಪಡೆ ಮಳೆ ನಿಯಮಕ್ಕೆ ಸಿಲುಕಿ ನಿರ್ಗಮಿಸುವಾಗ ಕ್ರಿಕೆಟ್ ಪ್ರೇಮಿಗಳ ಕಣ್ಣಾಲಿ ತೇವಗೊಂಡದ್ದು ಸುಳ್ಳಲ್ಲ.
Advertisement
ಪಾಕಿಸ್ಥಾನ ಚಾಂಪಿಯನ್ಇನ್ನೊಂದು ಸೆಮಿಫೈನಲ್‌ನಲ್ಲಿ ಪಾಕಿಸ್ಥಾನ ಆತಿಥೇಯ ನ್ಯೂಜಿಲ್ಯಾಂಡ್‌ಗೆ 4 ವಿಕೆಟ್‌ಗಳ ಸೋಲುಣಿಸಿತು. ಮೆಲ್ಬರ್ನ್ ಫೈನಲ್‌ನಲ್ಲೂ ಇಮ್ರಾನ್ ಖಾನ್ ಪಡೆಗೆ ಅದೃಷ್ಟ ಒಲಿಯಿತು. ಅದು ಇಂಗ್ಲೆಂಡನ್ನು 22 ರನ್ನುಗಳ ಕೆಡವಿ ಮೊದಲ ಸಲ ಕ್ರಿಕೆಟ್ ಸಾರ್ವಭೌಮನೆನಿಸಿತು. ಇದೇ ಪಾಕ್ ಪಡೆ ಲೀಗ್‌ನಲ್ಲಿ ಇಂಗ್ಲೆಂಡ್ ವಿರುದ್ಧ 74 ರನ್ನಿಗೆ ಆಲೌಟ್ ಆಗಿ ಸೋಲಿನ ಭೀತಿಯಲ್ಲಿತ್ತು. ಆದರೆ ಇಂಗ್ಲೆಂಡ್ ಚೇಸಿಂಗ್ ವೇಳೆ ಅಡಿಲೇಡ್‌ನಲ್ಲಿ ಮಳೆ ಸುರಿಯಿತು. ಪಂದ್ಯ ರದ್ದುಗೊಂಡಿತು. ಅಂಕವನ್ನು ಹಂಚಲಾಯಿತು. ಈ ಅಂಕದ ಲಾಭದಿಂದ ಪಾಕ್ ನಾಕೌಟ್ ಪ್ರವೇಶ ಪಡೆಯಿತೆಂಬುದನ್ನು ಮರೆಯುವಂತಿಲ್ಲ.
ನ್ಯೂಜಿಲ್ಯಾಂಡ್ ಸ್ಪಿನ್ನರ್ ದೀಪಕ್ ಪಟೇಲ್ ಬೌಲಿಂಗ್ ಆರಂಭಿಸಿದ್ದು, ಆರಂಭಕಾರ ಮಾರ್ಕ್ ಗ್ರೇಟ್‌ಬ್ಯಾಚ್ ಮೊದಲ 15 ಓವರ್‌ಗಳ ಫೀಲ್ಡಿಂಗ್ ಲಾಭವೆತ್ತಿ ದೊಡ್ಡ ಹೊಡೆತಗಳಿಗೆ ಮುಂದಾದದ್ದು ಕೂಡ ಈ ಪಂದ್ಯಾವಳಿಯ ವಿಶೇಷವಾಗಿತ್ತು. ಇನ್ನು ಭಾರತದ ಕತೆ. ಅಜರು ದ್ದೀನ್ ಬಳಗ ಪಾಕಿಸ್ಥಾನ ಮತ್ತು ಜಿಂಬಾಬ್ವೆಯನ್ನಷ್ಟೇ ಮಣಿಸಲು ಯಶಸ್ವಿಯಾಗಿತ್ತು. ವಿಶ್ವಕಪ್‌ನಲ್ಲಿ ಭಾರತ-ಪಾಕ್ ನಡುವಿನ ಮೊದಲ ಮುಖಾಮುಖೀ ಇದಾಗಿತ್ತು. ಶ್ರೀಲಂಕಾ ವಿರುದ್ಧದ ಪಂದ್ಯ ಮಳೆಯಿಂದ ರದ್ದುಗೊಂಡಿತು.