Mangaluru: ಬಂದರಿನಲ್ಲಿ ಐಪಿಎಲ್ ಮಾದರಿ ಗಲ್ಲಿ ಕ್ರಿಕೆಟ್!
100 ಮೀ. ಉದ್ದದ ರಸ್ತೆಯಲ್ಲೇ ಆಟ; ಪೊಲೀಸ್ ಟೀಮ್ ಸೇರಿ 7 ತಂಡ; ಐಪಿಎಲ್ ರೀತಿ ಬಿಡ್ಡಿಂಗ್
Team Udayavani, Jan 12, 2025, 1:14 PM IST
ಮಹಾನಗರ: ಮೈದಾನ ಇಲ್ಲದಿ ದ್ದರೆ ಸಣ್ಣ-ಪುಟ್ಟ ಜಾಗದಲ್ಲಿಯೇ ಕ್ರಿಕೆಟ್ ಆಟವಾಡು ವವರನ್ನು ನೋಡಿರುತ್ತೀರಿ… ಐದಾರು ಮಂದಿ ಗಲ್ಲಿಗಳಲ್ಲಿ ಆಡಿ ಖುಷಿ ಪಡುವುದೂ ಕಂಡಿರುತ್ತೀರಿ… ಈಗ ಹೀಗೆ ಗಲ್ಲಿಯಲ್ಲಿ ಆಟವಾಡುತ್ತಿದ್ದವರೇ ಐಪಿಎಲ್ ಮಾದರಿಯಲ್ಲಿ ‘ಗಲ್ಲಿ ಕ್ರಿಕೆಟ್ ಲೀಗ್’ ಸಂಘಟಿಸಿದ್ದಾರೆ!
100 ಮೀ. ಉದ್ದದ ಗಲ್ಲಿ ರಸ್ತೆಯನ್ನೇ ಕ್ರೀಡಾಂಗಣವನ್ನಾಗಿ ಮಾಡಿಕೊಂಡು ಐಪಿಎಲ್ ಮಾದರಿಯಲ್ಲಿ ಲೀಗ್ ಪಂದ್ಯವೊಂದು ನಗರದ ಸ್ಟೇಟ್‌ಬ್ಯಾಂಕ್ ಸಮೀಪದ ಬಂದರಿನ ಕಂದಕ್‌ನ ಗಲ್ಲಿ ರಸ್ತೆಯಲ್ಲಿ ಆಯೋಜನೆಗೊಂಡಿದೆ.
ಬಂದರು ಪ್ರದೇಶದಲ್ಲಿರುವ ಯುವಕರು ಕಂದಕದ ಅಡ್ಡ ರಸ್ತೆಯಲ್ಲಿ ಹಿಂದಿನಿಂದಲೂ ಕ್ರಿಕೆಟ್ ಆಟವಾಡುತ್ತಿದ್ದರು. ಶಾಲೆ-ಕಾಲೇಜಿನಿಂದ ಬಂದ ವಿದ್ಯಾರ್ಥಿಗಳು, ಕೆಲಸ ಮುಗಿಸಿ ಬಂದವರು ಸಂಜೆ ಕ್ರಿಕೆಟ್ ಆಡಲು ಹತ್ತಿರದಲ್ಲಿ ಜಾಗ ಇಲ್ಲದ ಕಾರಣದಿಂದ ಇಲ್ಲಿನ ಗಲ್ಲಿಯಲ್ಲೇ ಕ್ರಿಕೆಟ್ ಆಡುತ್ತಿದ್ದರು. ಹೀಗೆ ಆಟವಾಡುತ್ತ ಇದ್ದವರು ಈಗ ವಿವಿಧ ಸ್ತರದಲ್ಲಿ ಉದ್ಯೋಗದಲ್ಲಿದ್ದಾರೆ. ಕೊರೊನಾ ಕಾಲದಲ್ಲಿ ಇವರೆಲ್ಲ ಜತೆಗೂಡಿ ಹಿಂದಿನ ದಿನಗಳನ್ನು ನೆನಪಿಸಿ ಹುಟ್ಟುಹಾಕಿದ ಪ್ರಯೋಗವೇ ಗಲ್ಲಿ ಕ್ರಿಕೆಟ್. ಈ ವರ್ಷ ನಡೆಯುತ್ತಿರುವುದು ನಾಲ್ಕನೇ ವರ್ಷದ ಕೂಟ.
ಜ. 19ರ ವರೆಗೆ ಪಂದ್ಯಾಟ: ಜ. 10ರಂದು ಆರಂಭವಾದ ಗಲ್ಲಿ ಕ್ರಿಕೆಟ್ ಜ.19ರ ವರೆಗೆ ನಡೆಯಲಿದೆ. ಒಟ್ಟು 4 ಓವರ್ ಪಂದ್ಯಾಟ. ರಾತ್ರಿ 8.30ಕ್ಕೆ ಪಂದ್ಯ ಆರಂಭವಾಗುತ್ತದೆ. ರಾತ್ರಿ 10ರ ಸುಮಾರಿಗೆ ಮುಕ್ತಾಯವಾಗುತ್ತದೆ. 1 ದಿನಕ್ಕೆ 4 ಮ್ಯಾಚ್ ಮಾತ್ರ ಇರುತ್ತದೆ.
ಐಪಿಎಲ್ ರೀತಿಯಲ್ಲಿ ಬಿಡ್!
ಲೀಗ್ ಆಟಕ್ಕೆ ತಂಡ ಹಾಗೂ ಆಟಗಾರರ ಆಯ್ಕೆ ಎಲ್ಲವೂ ಐಪಿಎಲ್ ರೀತಿಯ ಬಿಡ್ ರೂಪದಲ್ಲಿಯೇ ನಡೆಯುತ್ತದೆ. ಹಣದ ಬದಲು ಆಟಗಾರರನ್ನು ‘ಪಾಯಿಂಟ್’ ಆಧಾರದಲ್ಲಿ ಆಯ್ಕೆ ಮಾಡಲಾಗುತ್ತದೆ. ಒಟ್ಟು 7 ಮಾಲಕರ, 7 ಆಟಗಾರರ, 7 ತಂಡವಿದೆ. ಆಟಗಾರರೆಲ್ಲ ಕಂದಕ ಪ್ರದೇಶದವರೆ. 7 ಕ್ಲಬ್ ಟೀಮ್ ಇರುವ ಜತೆಗೆ ಸ್ಥಳೀಯ ಪೊಲೀಸ್ ಠಾಣೆಯ ತಂಡ ಸೇರಿದಂತೆ 4 ಸೀನಿಯರ್ ಟೀಮ್ ಕೂಡ ಇಲ್ಲಿದೆ.
ರನ್ ಪಡೆಯುವುದೇ ಸವಾಲು!
ಕ್ರೀಸ್‌ನ ಎರಡೂ ಕಡೆ ಕಟ್ಟಡಗಳು ಇರುವ ಕಾರಣದಿಂದ ಎದುರು ನೇರವಾಗಿ ಹೊಡೆದರೆ ಮಾತ್ರ ಫೋರ್, ಸಿಕ್ಸ್! ಕಟ್ಟಡದ ನಿಗದಿತ ಜಾಗಕ್ಕೆ ಬಾಲ್ ತಾಗಿದರೆ 1 ರನ್ ಹಾಗೂ ಕ್ರೀಸ್‌ನ ಮುಂಭಾಗ ಲೈನ್ ದಾಟಿದರೆ ಓಟದ ರನ್ ಪಡೆಯಲು ಅವಕಾಶವಿದೆ. ಕ್ರಿಕೆಟ್ ನಡೆಯುವಾಗ ಕಟ್ಟಡದ ಅಂಗಡಿಯವರೆಲ್ಲ ಬಂದ್ ಮಾಡಿ ಸಹಕಾರ ನೀಡುತ್ತಾರೆ. ಸ್ಥಳೀಯರಿಗೆ ಪರ್ಯಾಯ ರಸ್ತೆ ವ್ಯವಸ್ಥೆ ಕಲ್ಪಿಸಲಾಗಿದೆ.
ಸೌಹಾರ್ದ ಕ್ರಿಕೆಟ್
ಊರಿನಲ್ಲಿ ಸೌಹಾರ್ದ ಮನೋಭೂಮಿಕೆ ಹೊಂದಿದ್ದ ಸರೋಜಿನಿ ಪುಂಡಲೀಕ ಕರ್ಕೇರ ಅವರ ಸ್ಮರಣಾರ್ಥವಾಗಿ ಕಂದಕ್ ಪ್ರದೇಶದ ಸಮಾನ ಮನಸ್ಕ ಯುವಕರು ಜತೆಗೂಡಿಕೊಂಡು ಗಲ್ಲಿ ಕ್ರಿಕೆಟ್‌ನ ಲೀಗ್ ಸಂಘಟಿ ಸಲಾಗಿದೆ. ಇಲ್ಲಿನ ಸಂಘಟಕರು, ಆಟಗಾರರು ಹಾಗೂ ಪ್ರೇಕ್ಷಕರಾಗಿ ಎಲ್ಲ ಜಾತಿ, ಧರ್ಮದವರಿದ್ದಾರೆ. ಸೌಹಾರ್ದ ವಾತಾವರಣ ನಮ್ಮ ಆದ್ಯತೆ.
-ಅಬ್ದುಲ್ ಲತೀಫ್, ಸ್ಥಳೀಯ ಕಾರ್ಪೋರೆಟರ್
ರಸ್ತೆಯೇ ಕ್ರಿಕೆಟ್ ಪಿಚ್!
ಇಲ್ಲಿ ಕಾಂಕ್ರೀಟ್ ರಸ್ತೆಯೇ ಕ್ರಿಕೆಟ್ ಪಿಚ್, ಅಡ್ಡರಸ್ತೆಯೇ ಕ್ರಿಕೆಟ್ ಗ್ರೌಂಡ್, ಎರಡೂ ಬದಿಯಲ್ಲಿ ಇರುವ ಕಟ್ಟಡಗಳೇ ವೀಕ್ಷಕ ಗ್ಯಾಲರಿ. ಹೊನಲು ಬೆಳಕಿನಲ್ಲಿ ಸಾಗುವ ಗಲ್ಲಿ ಕ್ರಿಕೆಟ್ ಟೂರ್ನ್ಮೆಂಟ್ ಕಣ್ತುಂಬಿಕೊಳ್ಳುವ ಪ್ರೇಕ್ಷಕರು ವಿವಿಧ ಕಡೆಗಳಿಂದ ಆಗಮಿಸುತ್ತಾರೆ.
-ದಿನೇಶ್ ಇರಾ