Kho Kho World Cup 2025: ಭಾರತದ ತಂಡಗಳು ಕ್ವಾರ್ಟರ್ ಫೈನಲ್‌ಗೆ
Team Udayavani, Jan 15, 2025, 11:25 PM IST
ಹೊಸದಿಲ್ಲಿ: ಇಲ್ಲಿ ನಡೆಯುತ್ತಿರುವ ಖೋ ಖೋ ವಿಶ್ವಕಪ್‌ನಲ್ಲಿ ಭಾರತದ ಪುರುಷರ ಮತ್ತು ಮಹಿಳಾ ತಂಡಗಳೆರಡೂ ಕ್ವಾರ್ಟರ್ ಫೈನಲ್‌ಗೆ ಏರಿವೆ. ಮಹಿಳಾ ವಿಭಾಗದಲ್ಲಿ ಮಂಗಳವಾರವಷ್ಟೇ ದಕ್ಷಿಣ ಕೊರಿಯಾ ವಿರುದ್ಧ ಗೆಲುವಿನ ದಾಖಲೆ ಬರೆದಿದ್ದ ಭಾರತ, ಬುಧವಾರ ಇರಾನ್ ವಿರುದ್ಧ 100-16 ರನ್ ಅಂತರದ ಇನ್ನೊಂದು ಭರ್ಜರಿ ಗೆಲುವು ಸಾಧಿಸಿ “ಎ’ ಗುಂಪಿನಲ್ಲಿ ಅಗ್ರಸ್ಥಾನಿಯಾಯಿತು. ಈ ಗುಂಪಿನಲ್ಲಿ ಕೇವಲ 4 ತಂಡಗಳಿವೆ. ಭಾರತ ತನ್ನ 3 ಪಂದ್ಯಗಳಲ್ಲಿ ಎರಡನ್ನು ಗೆದ್ದಾಗಿದೆ.
ಪುರುಷರ ವಿಭಾಗದಲ್ಲಿ ಭಾರತ ಸತತ 3ನೇ ಜಯ ಸಾಧಿಸಿತು. ಭರ್ಜರಿ ಆಟ ಮುಂದುವರಿಸಿದ ಭಾರತ ತಂಡ ಪೆರು ವಿರುದ್ಧ 70-38 ಅಂಕಗಳಿಂದ ಗೆಲುವು ಸಾಧಿಸಿ, “ಎ’ ವಿಭಾಗದಲ್ಲಿ ಅಗ್ರಸ್ಥಾನಿಯಾಯಿತು. ಭಾರತಕ್ಕೆ ಇನ್ನೊಂದು ಪಂದ್ಯ ಮಾತ್ರ ಬಾಕಿಯಿದೆ. ಪಂದ್ಯದ ಮೊದಲಾರ್ಧದಲ್ಲೇ ಭಾರತ ಗೆದ್ದಾಗಿತ್ತು. ಆ ಹೊತ್ತಿನಲ್ಲಿ ಪೆರು ಸಾಮಾನ್ಯ ಪ್ರದರ್ಶನ ನೀಡಿದ್ದರಿಂದ ಉಳಿದ ಅರ್ಧದಲ್ಲಿ ಅದು ತಿರುಗಿ ಬೀಳುವ ಯಾವ ಸಾಧ್ಯತೆಯೂ ಇರಲಿಲ್ಲ.