Advertisement

Mangaluru: ಲಕ್ಷಾಂತರ ವಿದ್ಯಾರ್ಥಿಗಳಿಗೆ ಕೆಪಿಟಿ ದಾರಿದೀಪ: ಸಚಿವ ಡಾ| ಎಂ.ಸಿ. ಸುಧಾಕರ್‌

11:00 PM Jan 07, 2025 | Team Udayavani |

ಮಂಗಳೂರು: ಕದ್ರಿ ಹಿಲ್ಸ್‌ನ ಕರ್ನಾಟಕ ಸರಕಾರಿ ಪಾಲಿಟೆಕ್ನಿಕ್‌ (ಕೆಪಿಟಿ) ಸಂಸ್ಥೆಯ ವತಿಯಿಂದ ರಾಜ್ಯಮಟ್ಟದ 45ನೇ ಅಂತರ್‌ ಪಾಲಿಟೆಕ್ನಿಕ್‌ ಕ್ರೀಡಾಕೂಟ ಹಾಗೂ ಅಮೃತ ಮಹೋತ್ಸವ ಸಂಭ್ರಮಾಚರಣೆ ಮಂಗಳಾ ಕ್ರೀಡಾಂಗಣದಲ್ಲಿ ಮಂಗಳವಾರ ನಡೆಯಿತು.

Advertisement

ರಾಜ್ಯ ಉನ್ನತ ಶಿಕ್ಷಣ ಸಚಿವ ಡಾ| ಎಂ.ಸಿ. ಸುಧಾಕರ್‌ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ, 1946ರಲ್ಲಿ ಆರಂಭಗೊಂಡು ಅಮೃತ ಮಹೋತ್ಸವ ಸಂಭ್ರಮದಲ್ಲಿರುವ ಕರ್ನಾಟಕ ಸರಕಾರಿ ಪಾಲಿಟೆಕ್ನಿಕ್‌ ರಾಜ್ಯದ ಹಳೆಯ ಪಾಲಿಟೆಕ್ನಿಕ್‌ ಆಗಿ ಗುರುತಿಸಿಕೊಂಡಿದೆ. ಎಐಸಿಟಿಇ ಯಿಂದ ಸ್ವಾಯತ್ತತೆ ಪಡೆದ ಪ್ರಥಮ ಸರಕಾರಿ ಪಾಲಿಟೆಕ್ನಿಕ್‌ ಎಂಬುವುದು ಹೆಮ್ಮೆಯ ಸಂಗತಿ. ಲಕ್ಷಾಂತರ ವಿದ್ಯಾರ್ಥಿಗಳಿಗೆ ಈ ಸಂಸ್ಥೆ ದಾರಿದೀಪವಾಗಿದೆ. ರಾಜ್ಯದ ವಿವಿಧ ಪಾಲಿಟೆಕ್ನಿಕ್‌ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿ ರಾಜ್ಯಮಟ್ಟದ ಕ್ರೀಡಾಕೂಟ ಆಯೋಜನೆ ಮಾಡುವ ಮೂಲಕ ವಿದ್ಯಾರ್ಥಿಗಳ ಪ್ರತಿಭೆ ಹೊರತರಲು ವೇದಿಕೆ ಕಲ್ಪಿಸಿದೆ ಎಂದು ಹೇಳಿದರು.

ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಆಸಕ್ತಿ, ಕ್ರೀಡಾಸ್ಫೂರ್ತಿಯಿಂದ ಭಾಗವಹಿಸಬೇಕು. ಕ್ರೀಡೆಯಲ್ಲಿ ಸೋಲು-ಗೆಲುವು ಸಹಜ. ಗೆದ್ದವರು ಇನ್ನಷ್ಟು ಸಾಧನೆಗೈದು, ಸೋತವರು ತಮ್ಮ ಪ್ರಯತ್ನವನ್ನು ಮುಂದುವರಿಸಬೇಕು. ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಡಿ. ವೇದವ್ಯಾಸ ಕಾಮತ್‌ ಮಾತನಾಡಿ, ವಿವಿಧ ಜಿಲ್ಲೆಯ ಕ್ರೀಡಾಪಟುಗಳನ್ನು ಒಟ್ಟುಗೂಡಿಸಿ ಕ್ರೀಡಾಕೂಟ ಆಯೋಜನೆ ಮಾಡಿದ್ದು ಹೆಮ್ಮೆ. ಸಾಧನೆಗೆ ಶಕ್ತಿಕೊಡುವ ಕೆಲಸವನ್ನು ಕೆಪಿಟಿ ಸಂಸ್ಥೆಯ ವತಿಯಿಂದ ಮಾಡಲಾಗುತ್ತಿದೆ. ಹಲವು ವರ್ಷಗಳ ಇತಿಹಾಸ ಹೊಂದಿದ ಸಂಸ್ಥೆ ಇದಾಗಿದ್ದು ಶಿಕ್ಷಣ ಸಂಸ್ಥೆಯ ಉನ್ನತಿಗೆ ಇನ್ನಷ್ಟು ಶಕ್ತಿ ನೀಡುವ ಕೆಲಸ ಆಗಬೇಕಿದೆ ಎಂದು ತಿಳಿಸಿದರು.

ಶಾಸಕ ಡಾ| ವೈ. ಭರತ್‌ ಶೆಟ್ಟಿ, ವಿಧಾನಪರಿಷತ್‌ ಸದಸ್ಯರಾದ ಮಂಜುನಾಥ ಭಂಡಾರಿ, ಐವನ್‌ ಡಿ’ಸೋಜಾ, ಮೇಯರ್‌ ಮನೋಜ್‌ ಕುಮಾರ್‌, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕೆ., ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟಾನ್ಲಿ ಅಲ್ವಾರಿಸ್‌, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ, ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಡಿ.ಎಸ್‌. ಗಟ್ಟಿ, ಮಂಗಳೂರು ವಿ.ವಿ. ಕುಲಪತಿ ಡಾ| ಪಿ.ಎಲ್‌. ಧರ್ಮ, ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕ ಪ್ರಸನ್ನ ಎಚ್‌., ಜಂಟಿ ನಿರ್ದೇಶಕರಾದ ಸುರೇಶ್‌ ಕುಮಾರ್‌ ಕೆ.ಎಂ., ಶೇಖರ್‌, ಶ್ರೀಕಾಂತ್‌ ಜಿ., ಕೆಪಿಟಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ದೇವಾನಂದ್‌ ಎಂ.ಸಿ. ಸಹಿತ ಮತ್ತಿತರರು ಇದ್ದರು.

Advertisement

ಕೆಪಿಟಿ ಪ್ರಾಂಶುಪಾಲರಾದ ಹರೀಶ್‌ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಗಿರೀಶ್‌ ಬಾಬು ವಂದಿಸಿದರು. ಮಂಜುಳಾ ಶೆಟ್ಟಿ ನಿರೂಪಿಸಿದರು.

ಕೆಪಿಟಿ ಹಳೆ ವಿದ್ಯಾರ್ಥಿ ಸಂಘದ ಕೊಡುಗೆಯಾಗಿ ಕರ್ನಾಟಕ ಸರಕಾರಿ ಪಾಲಿಟೆಕ್ನಿಕ್‌ (ಕೆಪಿಟಿ)ನಲ್ಲಿ ಅಮೃತ ಮಹೋತ್ಸವ ಭವನಕ್ಕೆ ಶಿಲಾನ್ಯಾಸ ನಡೆಯಿತು. ಮಂಗಳೂರಿನ ಗುಂಡಳಿಕೆಯಲ್ಲಿ ನೂತನವಾಗಿ ನಿರ್ಮಿಸಿದ ವಿದ್ಯಾರ್ಥಿ ನಿಲಯದ ಉದ್ಘಾಟನೆ, ಶೈಕ್ಷಣಿಯ ಸ್ವಾಯತ್ತತೆಯ ಉದ್ಘಾಟನೆ ನೆರವೇರಿತು. “ಅಮೃತಯಾನ’ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು.

986 ವಿದ್ಯಾರ್ಥಿಗಳು ಭಾಗಿ
ಕ್ರೀಡಾಕೂಟದಲ್ಲಿ ರಾಜ್ಯದ 73 ಪಾಲಿಟೆಕ್ನಿಕ್‌ ಕಾಲೇಜುಗಳ 986 ವಿದ್ಯಾರ್ಥಿಗಳು, 214 ಸಿಬಂದಿ ಭಾಗವಹಿಸಿದ್ದರು. ಜ. 7ರಿಂದ ಎರಡು ದಿನಗಳವರೆಗೆ ಪುರುಷ ಮತ್ತು ಮಹಿಳಾ ವಿಭಾಗಗಳಲ್ಲಿ 18 ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗಿದೆ. ಜ. 8 ಕ್ರೀಡಾಕೂಟದ ಸಮಾರೋಪ ಸಮಾರಂಭ ನಡೆಯಲಿದ್ದು, ವಿಜೇತ ಸ್ಪರ್ಧಾಳುಗಳಿಗೆ ಪ್ರಮಾಣಪತ್ರ ಮತ್ತು ಬಹುಮಾನ ವಿತರಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next