Advertisement
ಸುಮಾರು 4,800 ಪುಟಗಳ 12 ಸಂಪುಟಗಳನ್ನೊಳಗೊಂಡ ದೋಷಾರೋಪಟ್ಟಿಯಲ್ಲಿ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಪ್ರಕರಣದ ಇತರೆ ಆರೋಪಿಗಳಿಗೆ ಸಹಕಾರ ನೀಡಿದ್ದಾರೆ ಎಂದು ಉಲ್ಲೇಖೀಸಿರುವ ಸಿಸಿಬಿ ಪೊಲೀಸರು, ಜನಾರ್ದನರೆಡ್ಡಿ ಸೇರಿ ಐವರು ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಸಕ್ಷಮ ಪ್ರಾಧಿಕಾರಕ್ಕೆ ಮನವಿ ಮಾಡಲಾಗಿದ್ದು, ಈ ಸಂಬಂಧ ಸರ್ಕಾರ ಕೂಡ ಅಧಿಕೃತವಾಗಿ ಆದೇಶ ಹೊರಡಿಸಿದೆ ಎಂದು ತಿಳಿಸಿದ್ದಾರೆ.
Related Articles
Advertisement
ಅಶ್ರಫ್ಅಲಿಗೆ ಸೇರಿದ ಒಂದು ಕೋಟಿ ರೂ. ಮೌಲ್ಯದ ಬಾಗಲೂರು ಗ್ರಾಮದ ಎರಡು ಎಕರೆ ಜಮೀನು, ಚಿಕ್ಕRತಾತಮಂಗಲದಲ್ಲಿರುವ ಒಂದು ಸೈಟ್ ಸೇರಿ ಒಟ್ಟು 60 ಕೋಟಿ ರೂ.ಮೌಲ್ಯದ ಆಸ್ತಿಗಳನ್ನು ಕೆಪಿಐಡಿ ಕಾಯ್ದೆ ಅನ್ವಯ ಮುಟ್ಟುಗೋಲು ಹಾಕಿಕೊಳ್ಳುವಂತೆ ಸಕ್ಷಮ ಪ್ರಾಧಿಕಾರದ ಬೆಂಗಳೂರು ಉತ್ತರ ಉಪ ವಿಭಾಗದ ಸಹಾಯಕ ಆಯುಕ್ತ ನಾಗರಾಜು ಅವರಿಗೆ ವರದಿ ಸಲ್ಲಿಸಲಾಗಿತ್ತು.
ಈ ಸಂಬಂಧ ಸರ್ಕಾರ ಕೂಡ ಮುಟ್ಟುಗೋಲು ಹಾಕಿಕೊಳ್ಳಲು ಜ.31ರಂದೆ ಸೂಚಿಸಿತ್ತು ಎಂದು ದೋಷಾರೋಪಪಟ್ಟಿಯಲ್ಲಿ ಉಲ್ಲೇಖೀಸಲಾಗಿದೆ. ಅಷ್ಟೇ ಅಲ್ಲದೆ, ಆ್ಯಂಬಿಡೆಂಟ್ ಸಂಸ್ಥೆಯ ಸದಸ್ಯರು ಹಾಗೂ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳಿಗೆ ಸಂಬಂಧಪಟ್ಟ ಒಟ್ಟು 37 ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಿದ್ದು, 3.45 ಕೋಟಿ ರೂ. ಹಣವನ್ನು ಡಿ.ಡಿ. ರೂಪದಲ್ಲಿ ನ್ಯಾಯಾಲಯದ ಖಾತೆಗೆ ಜಮೆ ಮಾಡಲಾಗಿದೆ ಎಂದು ಸಿಸಿಬಿ ತಿಳಿಸಿದೆ.
120 ಕೋಟಿ ರೂ. ಹೂಡಿಕೆ: ಪ್ರಕರಣದ ಇದುವರೆಗಿನ ತನಿಖೆಯಲ್ಲಿ ವಂಚನೆ ಕಂಪನಿಯಲ್ಲಿ 10,564 ಮಂದಿ ಸುಮಾರು 120 ಕೋಟಿ ರೂ. ಹೂಡಿಕೆ ಮಾಡಿರುವುದು ಕಂಡು ಬಂದಿದೆ. ಈ ಮಧ್ಯೆ ಸಿಸಿಬಿ ಕೇಂದ್ರ ಕಚೇರಿಯಲ್ಲಿ 4,800 ಮಂದಿ ಹೂಡಿಕೆದಾರರು ತಮ್ಮ ಹೆಸರನ್ನು ನೊಂದಾಯಿಸಿದೆ. 82.10 ಕೋಟಿ ರೂ. ಸಂಸ್ಥೆಯಲ್ಲಿ ಹೂಡಿಕೆ ಮಾಡಿದ್ದು, ಇದುವರೆಗೂ ಸಂಸ್ಥೆ ವಾಪಸ್ ನೀಡಿಲ್ಲ.
ಮತ್ತಷ್ಟು ಆಸ್ತಿ ಮುಟ್ಟುಗೋಲು ಸಾಧ್ಯತೆ: ಪ್ರಕರಣದ ತನಿಖೆ ಮುಂದುವರಿದಿದ್ದು, ಆರೋಪಿಗಳ ಮತ್ತು ಅವರ ಸಂಬಂಧಿಕರ ಹಾಗೂ ಆರೋಪಿತರು ಹೂಡಿಕೆ ಮಾಡಿರುವ ಆಸ್ತಿಗಳನ್ನು ಪತ್ತೆ ಹಚ್ಚಿ, ಅವುಗಳನ್ನು ಸಹ ಮುಟ್ಟುಗೋಲು ಹಾಕಿಕೊಳ್ಳುವ ಕಾರ್ಯ ಪ್ರಗತಿಯಲ್ಲಿದೆ. ಜತೆಗೆ ವಂಚನೆಗೊಳಗಾಗಿರುವ ಹೂಡಿಕೆದಾರರ ಹೆಸರು ನೊಂದಣಿ ಕಾರ್ಯ ಮುಂದುವರಿದೆ ಎಂದು ಸಿಸಿಬಿ ಮೂಲಗಳು ತಿಳಿಸಿದೆ.
ನಿರೀಕ್ಷಣಾ ಜಾಮೀನು: ಪ್ರಕರಣದಲ್ಲಿ ಆರೋಪಿಗಳಾದ ಇರ್ಫಾನ್ ಮಿರ್ಜಾ, ಗಾಲಿ ಜನಾರ್ದನರೆಡ್ಡಿ, ಮೆಹಫೂಜ್ ಅಲಿಖಾನ್, ಬಳ್ಳಾರಿ ರಮೇಶ್, ಇನಾಯತ್ ಉಲ್ಲಾ ವಹಾಬ್ ಮತ್ತು ಅಶ್ರಫ್ ಅಲಿಯನ್ನು ಪ್ರಕರಣದಲ್ಲಿ ಬಂಧಿಸಿದ್ದು, ಆರೋಪಿಗಳಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆಯಲಾಗಿತ್ತು. ಸದ್ಯ ಈ ಆರೋಪಿಗಳು ಜಾಮೀನು ಪಡೆದುಕೊಂಡಿದ್ದಾರೆ. ಇನ್ನುಳಿದಂತೆ ಸೈಯದ್ ಫರೀದ್ ಅಹಮದ್ ಹಾಗೂ ಸೈಯದ್ ಆಫಾಕ್ ಅಹಮದ್ ಪ್ರಕರಣ ಸಿಸಿಬಿಗೆ ವರ್ಗಾವಣೆಯಾಗುವ ಮೊದಲೇ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದರು.
ಪ್ರಕರಣದ ಹಿನ್ನೆಲೆ: ದೇವರಜೀವನಹಳ್ಳಿಯಲ್ಲಿ 2016ರಲ್ಲಿ ಆ್ಯಂಬಿಡೆಂಟ್ ಕಂಪನಿ ಆರಂಭವಾಗಿದ್ದು, ಕಂಪನಿ ನಿರ್ದೇಶಕರಾದ ಸೈಯದ್ ಫರೀದ್ ಅಹಮದ್, ಸೈಯದ್ ಅಫಾಕ್ ಅಹಮದ್ ಮತ್ತು ಇರ್ಫಾನ್ ಮಿರ್ಜಾ ಅಧಿಕ ಬಡ್ಡಿ ದರದ ಆಮಿಷವೊಡ್ಡಿ ಸಾವಿರಾರು ಜನರಿಗೆ ನೂರಾರು ಕೋಟಿ ವಂಚನೆ ಮಾಡಿದ್ದರು. ಈ ಸಂಬಂಧ ಡಿ.ಜೆ.ಹಳ್ಳಿ ಸೇರಿ ಇತರ ಠಾಣೆಗಳಲ್ಲಿ ಆರು ಪ್ರಕರಣಗಳು ದಾಖಲಾಗಿತ್ತು.
ಅಲ್ಲದೆ, ಆ್ಯಂಬಿಡೆಂಟ್ ಕಂಪನಿ ವಿರುದ್ಧ ಜಾರಿ ನಿರ್ದೇಶನಾಲಯದಲ್ಲಿ ಪ್ರಕರಣ ದಾಖಲಾಗಿತ್ತು. ಈ ತನಿಖೆಯಲ್ಲಿ ನೆರವು ನೀಡುವುದಾಗಿ ನಂಬಿಸಿ ಆ್ಯಂಬಿಡೆಂಟ್ ಕಂಪನಿ ಮಾಲೀಕ ಫರೀದ್‌ನಿಂದ ಜನಾರ್ದನ ರೆಡ್ಡಿ ಕೋಟ್ಯಂತರ ರೂ. ಪಡೆದಿದ್ದರು ಎಂದು ಹೇಳಲಾಗಿತ್ತು. ಈ ಮಧ್ಯೆ ಕೆಲ ಹೂಡಿಕೆದಾರರು ನಗರ ಪೊಲೀಸ್ ಆಯುಕ್ತರನ್ನು ಭೇಟಿಯಾಗಿ ವಂಚನೆ ಕಂಪನಿಯಿಂದ ಹಣ ಕೊಡಿಸುವಂತೆ ಮನವಿ ಮಾಡಿದ್ದು, ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಲಾಗಿತ್ತು.