ಮೆಲ್ಬೋರ್ನ್: ಯುವ ಆಲ್ ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಅವರ ಆಕರ್ಷಕ ಶತಕ ಮತ್ತು ವಾಷಿಂಗ್ಟನ್ ಸುಂದರ್ ರ ಅರ್ಧಶತಕದ ನೆರವಿನಿಂದ ಮೆಲ್ಬೋರ್ನ್ ಟೆಸ್ಟ್ ನಲ್ಲಿ ಟೀಂ ಇಂಡಿಯಾ ಫಾಲೋ ಆನ್ ಅವಮಾನದಿಂದ ಪಾರಾಗಿದೆ. ಇದೇ ಸರಣಿಯಲ್ಲಿ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ನಿತೀಶ್ ಕುಮಾರ್ ರೆಡ್ಡಿ ಅವರು ಚೊಚ್ಚಲ ಶತಕ ಬಾರಿಸಿ ಮಿಂಚಿದರು.
ಐದು ವಿಕೆಟ್ ಗೆ 164 ರನ್ ಗಳಿಸಿದ್ದಲ್ಲಿಂದ ಮೂರನೇ ದಿನದಾಟ ಆರಂಭಿಸಿದ ಭಾರತ ಆರಂಭದಲ್ಲಿ ರಿಷಭ್ ಪಂತ್ ವಿಕೆಟ್ ಕಳೆದುಕೊಂಡಿತು. 28 ರನ್ ಗಳಿಸಿದ್ದ ಪಂತ್ ಅನಗತ್ಯ ಶಾಟ್ ಗೆ ಕೈ ಹಾಕಿ ವಿಕೆಟ್ ಒಪ್ಪಿಸಿದರು. ಜಡೇಜಾ ಕೂಡಾ 17 ರನ್ ಗೆ ಔಟಾದರು. ಬಳಿಕ ಜೊತೆಯಾದ ವಾಷಿಂಗ್ಟನ್ ಸುಂದರ್ ಮತ್ತು ನಿತೀಶ್ ಕುಮಾರ್ ಎಂಟನೇ ವಿಕೆಟ್ ಗೆ 127 ರನ್ ಜೊತೆಯಾಟವಾಡಿದರು.
162 ಎಸೆತ ಎದುರಿಸಿದ ಸುಂದರ್ 50 ರನ್ ಮಾಡಿದರು. ಚೊಚ್ಚಲ ಶತಕ ಬಾರಿಸಿದ ನಿತೀಶ್ ಕುಮಾರ್ ರೆಡ್ಡಿ ಐಕಾನಿಕ್ ಸೆಲೆಬ್ರೇಶನ್ ಮೂಲಕ ಮಿಂಚಿದರು. 10 ಬೌಂಡರಿ ಮತ್ತು ಒಂದು ಸಿಕ್ಸರ್ ಮೂಲಕ ಅಜೇಯ 105 ರನ್ ಗಳಿಸಿದ್ದಾರೆ.
ಬಾಡ್ ಲೈಟ್ ಕಾರಣದಿಂದ ಪಂದ್ಯ ನಿಂತಿದ್ದು ಈ ವೇಳೆ ಭಾರತ ತಂಡವು 9 ವಿಕೆಟ್ ನಷ್ಟಕ್ಕೆ 358 ರನ್ ಮಾಡಿದೆ. ಇನ್ನೂ 116 ರನ್ ಹಿನ್ನಡೆಯಲ್ಲಿದೆ. ಮೊದಲ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ 474 ರನ್ ಗಳಿಸಿತ್ತು.
ಪಂದ್ಯದ ವೇಳೆ ಸ್ಟೇಡಿಯಂನಲ್ಲಿದ್ದ ನಿತೀಶ್ ಕುಮಾರ್ ತಂದೆ ಮುತ್ಯಾಲ ರೆಡ್ಡಿ ನೇರ ಪ್ರಸಾರದೊಂದಿಗೆ ಮಾತನಾಡಿ, “ನಮ್ಮ ಕುಟುಂಬಕ್ಕೆ ಇದು ವಿಶೇಷ ದಿನವಾಗಿದೆ. ನಮ್ಮ ಜೀವನದಲ್ಲಿ ಈ ದಿನವನ್ನು ನಾವು ಮರೆಯಲು ಸಾಧ್ಯವಿಲ್ಲ. ನಿತೀಶ್ 14-15 ವರ್ಷ ವಯಸ್ಸಿನಿಂದಲೂ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಈಗ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪ್ರದರ್ಶನ ನೀಡುತ್ತಿದ್ದಾನೆ. ಇದು ತುಂಬಾ ವಿಶೇಷವಾದ ಭಾವನೆಯಾಗಿದೆ” ಎಂದರು.