Advertisement

ಕೈಗಾರಿಕಾ ವಲಯಕ್ಕೂ ವ್ಯಾಪಿಸಿದ ಕರಿನೆರಳು

11:39 PM Mar 14, 2020 | Lakshmi GovindaRaj |

ಬೆಳಗಾವಿ: ಕಳೆದ ಹಲವಾರು ವರ್ಷಗಳಿಂದ ನೂರೆಂಟು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ಅದರಿಂದ ಹೊರಬರಲು ಪರಿತಪಿಸುತ್ತಿರುವ ಬೆನ್ನಲ್ಲೇ, ಕೈಗಾರಿಕಾ ಕ್ಷೇತ್ರದ ಮೇಲೆ ಈಗ ಕೊರೊನಾ ಕರಿನೆರಳು ಬಿದ್ದಿದ್ದು ಕೈಗಾರಿಕಾ ಕ್ಷೇತ್ರ ಕೋಟಿ-ಕೋಟಿ ನಷ್ಟ ಅನುಭವಿಸುತ್ತಿದೆ.

Advertisement

ಇದಕ್ಕೆ ಗಡಿ ಜಿಲ್ಲೆ ಬೆಳಗಾವಿಯೂ ಹೊರತಾಗಿಲ್ಲ. ಬೆಂಗಳೂರು ನಂತರ ಸರ್ಕಾರಕ್ಕೆ ಅತಿ ಹೆಚ್ಚು ಆದಾಯ ಕೊಡುವ ಬೆಳಗಾವಿ ಜಿಲ್ಲೆಯ ಕೈಗಾರಿಕೆಗಳು ಕೊರೊನಾ ಹೊಡೆತಕ್ಕೆ ತತ್ತರಿಸಿವೆ. ಹೊರ ದೇಶಗಳಿಂದ ಉತ್ಪಾದನಾ ಬೇಡಿಕೆ ಕಡಿಮೆ ಆಗಿರುವ ಪರಿಣಾಮ, ಸಣ್ಣ ಕೈಗಾರಿಕೆಗಳು ದಿಕ್ಕುತಪ್ಪಿವೆ. ಆರಂಭದಲ್ಲಿ ಕೈಗಾರಿಕೆಗಳಿಗೆ ಇದರ ಆತಂಕ ಅಷ್ಟಾಗಿ ಕಾಣದಿದ್ದರೂ ಈಗ ನಿಧಾನವಾಗಿ ಅದರ ಹೊಡೆತದ ಅನುಭವ ಆಗುತ್ತಿದೆ. ಷೇರು ಮಾರುಕಟ್ಟೆ ಪಾತಾಳ ಕಂಡಿರುವಂತೆ ಕೈಗಾರಿಕೆಗಳೂ ಅದೇ ಹಾದಿಯಲ್ಲಿ ನಡೆದಿವೆ ಎಂಬುದು ಉದ್ಯಮಿಗಳ ಆತಂಕ.

ಈಗ ಲಭ್ಯವಾಗಿರುವ ಅಂಕಿ-ಅಂಶಗಳ ಪ್ರಕಾರ ಬೆಂಗಳೂರು ನಗರ ಭಾಗದಲ್ಲಿ 1.37 ಲಕ್ಷಕ್ಕೂ ಅಧಿಕ ಕೈಗಾರಿಕೆಗಳಿದ್ದರೆ; ಬೆಂಗಳೂರು ನಂತರ ರಾಜ್ಯದಲ್ಲಿ ಅತೀ ಹೆಚ್ಚು ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳನ್ನು ಹೊಂದಿರುವ ಬೆಳಗಾವಿ ಜಿಲ್ಲೆಯಲ್ಲಿ 57 ಸಾವಿರಕ್ಕೂ ಅಧಿಕ ಕೈಗಾರಿಕೆಗಳಿವೆ. ಇದರಲ್ಲಿ ಸಾಕಷ್ಟು ಕೈಗಾರಿಕೆಗಳ ಮೇಲೆ ಕೊರೊನಾ ಪರಿಣಾಮ ಕಾಣಿಸಿಕೊಂಡಿದೆ.

ಬಂದ್‌ ಮಾಡಲಾದೀತೇ?: ಕೊರೊನಾ ಹಿನ್ನೆಲೆಯಲ್ಲಿ ಕೈಗಾರಿಕೆಗಳಿಗೆ ರಜೆ ಕೊಡಬೇಕು ಎಂದು ಸರ್ಕಾರ ಆದೇಶ ಮಾಡಬಹುದು. ಆದರೆ, ಕೈಗಾರಿಕೆಗಳನ್ನು ಮುಚ್ಚಿದರೆ ನಾವು ಸರ್ಕಾರಕ್ಕೆ ತೆರಿಗೆ ಕಟ್ಟುವುದು, ಹೆಸ್ಕಾಂಗೆ ವಿದ್ಯುತ್‌ ಬಿಲ್‌ ಹಾಗೂ ಬ್ಯಾಂಕ್‌ಗಳಿಗೆ ಬಡ್ಡಿ ಮತ್ತು ಅಸಲು ಪಾವತಿಸುವುದು ತಪ್ಪುವುದೇ ಎಂಬುದು ಉದ್ಯಮಿಗಳ ಪ್ರಶ್ನೆ.

ಬೆಳಗಾವಿಯಲ್ಲಿರುವ ಬಹುತೇಕ ಫೌಂಡ್ರಿಗಳು ಹೆಚ್ಚು ಸಾಮರ್ಥ್ಯದ ವಿದ್ಯುತ್‌ ಸಂಪರ್ಕ ಪಡೆದುಕೊಂಡಿವೆ. ವಿದ್ಯುತ್‌ ಬಳಕೆ ಮಾಡಲಿ ಅಥವಾ ಬಿಡಲಿ ಪ್ರತಿ ತಿಂಗಳು ಕನಿಷ್ಠ 50 ಸಾವಿರದಿಂದ ಒಂದು ಲಕ್ಷ ರೂ. ತುಂಬಲೇ ಬೇಕು. ಹೀಗಿರುವಾಗ ಈಗ ಬಂದಿರುವ ಕೊರೊನಾದಿಂದ ಉತ್ಪಾದನಾ ಬೇಡಿಕೆ ಕಡಿಮೆಯಾಗಿ ಪರಿಸ್ಥಿತಿ ಬಿಗಡಾಯಿಸಿದೆ. ಇದರ ಮಧ್ಯೆ ಬ್ಯಾಂಕ್‌ಗಳಿಂದ ಕಿರುಕುಳ ಜಾಸ್ತಿಯಾಗುತ್ತಿದೆ. ಇದರಿಂದ ದಿಕ್ಕು ತೋಚದಂತಾಗಿದೆ ಎನ್ನುತ್ತಾರೆ ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ರೋಹನ್‌ ಜುವಳಿ.

Advertisement

ಈಗ ಜಿಲ್ಲೆಯಲ್ಲಿ ಕೊರೊನಾ ಭೀತಿ ಅಷ್ಟು ಗಂಭೀರವಾಗಿಲ್ಲ. ಈಗ ಕಾರ್ಮಿಕರು ಕೆಲಸಕ್ಕೆ ಬರುತ್ತಿದ್ದಾರೆ. ಒಂದು ವೇಳೆ ಸರ್ಕಾರ ಕೈಗಾರಿಕೆಗಳನ್ನು ಮುಚ್ಚಬೇಕು ಎಂದು ನಿರ್ದೇಶನ ನೀಡಿದರೆ ಅದನ್ನು ಪಾಲಿಸಲೇಬೇಕು. ಈಗಾಗಲೇ ಕೈಗಾರಿಕೆಗಳು ಬಹಳ ಶೋಚನೀಯ ಸ್ಥಿತಿಯಲ್ಲಿವೆ. ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಹೀಗಾಗಿ ಬ್ಯಾಂಕ್‌ಗಳಿಂದ ಒಂದಿಷ್ಟು ರಿಲೀಫ್‌ ಕೊಡಿಸಲು ಮುಂದಾಗಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಎನ್ನುತ್ತಾರೆ ಜಿಲ್ಲೆಯ ಉದ್ಯಮಿಗಳು.

ಫೌಂಡ್ರಿ ಉದ್ಯಮದ ಮೇಲೆ ಅಷ್ಟೊಂದು ಪರಿಣಾಮ ಕಂಡಿಲ್ಲ. ಆದರೆ ಚೀನಾದಿಂದ ಬರುತ್ತಿದ್ದ ಕಂಟೇನರ್‌ ಕೊರತೆ ಉಂಟಾಗಿದೆ. ಒಂದು ಕಂಟೇನರ್‌ಗೆ ಈಗ 2 ಪಟ್ಟು ಹಣ ಕೊಡಬೇಕಾಗಿದೆ. ಇದಲ್ಲದೆ ಚೀನಾದಿಂದ ಕಚ್ಚಾ ವಸ್ತುಗಳನ್ನು ತರಿಸುತ್ತಿದ್ದ ಕೈಗಾರಿಕೆಗಳಿಗೆ ಕೊರೊನಾ ಪರಿಣಾಮ ಬೀರಿದೆ. ಸರ್ಕಾರ ಮಾಲ್‌ ಹಾಗೂ ಚಿತ್ರಮಂದಿರಗಳಂತೆ ಕೈಗಾರಿಕೆಗಳನ್ನು ಬಂದ್‌ ಮಾಡಬೇಕು ಎಂದು ಹೇಳಿದರೆ ಬಹಳ ಕೆಟ್ಟ ಪರಿಸ್ಥಿತಿ ಬರಲಿದೆ ಎನ್ನುತ್ತಾರೆ ಉದ್ಯಮಿ ರಾಜೇಂದ್ರ ಹರಕುಣಿ.

ಮೊದಲೇ ಉತ್ಪಾದನೆ ಹಾಗೂ ಮಾರಾಟದ ಪ್ರಮಾಣ ಕಡಿಮೆಯಾಗಿದೆ. ಕೇಂದ್ರ-ರಾಜ್ಯ ಸರ್ಕಾರಗಳಿಂದ ನಮಗೆ ನೆರವು ಬೇಕೇ ಬೇಕು. ಕೊರೊನಾ ಪರಿಣಾಮ ಕನಿಷ್ಠ ಆರು ತಿಂಗಳ ಕಾಲ ಕೈಗಾರಿಕೆಗಳಿಂದ ಬಡ್ಡಿ ವಸೂಲಾತಿ ಮಾಡಬಾರದು ಎಂದು ಆರ್‌ಬಿಐ ಮೂಲಕ ಎಲ್ಲಾ ಬ್ಯಾಂಕ್‌ಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ಕೊಡಿಸಬೇಕು. ಇದಕ್ಕೆ ರಾಜ್ಯ ಸರ್ಕಾರ ಕೇಂದ್ರದ ಮೇಲೆ ಒತ್ತಾಯ ಮಾಡಬೇಕು. ಅಂದರೆ ಮಾತ್ರ ನಾವು ಉಳಿಯುತ್ತೇವೆ.
-ರೋಹನ್‌ ಜವಳಿ, ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ

ಕೈಗಾರಿಕೆಗಳ ಮೇಲೆ ಕೊರೊನಾ ಪರಿಣಾಮ ಬೀರಿದೆ. ಈಗಾಗಲೇ ಈ ವೈರಸ್‌ದಿಂದ ಹೊರ ದೇಶಗಳು ತತ್ತರಿಸಿದ್ದು, ಇದರಿಂದ ಉತ್ಪಾದನೆ ಪ್ರಮಾಣ ಕಡಿಮೆಯಾಗಿ ಬೇಡಿಕೆಯೂ ಗಣನೀಯವಾಗಿ ಕುಸಿದಿದೆ. ಜಿಲ್ಲೆಯಲ್ಲಿ ಕೈಗಾರಿಕಾ ವಲಯದಲ್ಲಿ ಕೋಟಿಗಟ್ಟಲೇ ನಷ್ಟವಾಗಿದ್ದು ಸಣ್ಣ ಕೈಗಾರಿಕೆಗಳು ಬೇಡಿಕೆ ಇಲ್ಲದೆ ಬಹಳ ತೊಂದರೆಗೆ ಸಿಲುಕಿವೆ.
-ದೊಡ್ಡ ಬಸವರಾಜು, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ

* ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next