Advertisement

Non-veg Recipes: ಆಹಾ.! ಬೇಯಿಸಿದ ಮೊಟ್ಟೆಯಿಂದ ಒಮ್ಮೆ ಈ ರೀತಿ ಕರಿ ಮಾಡಿ ನೋಡಿ….

06:14 PM Dec 03, 2024 | ಶ್ರೀರಾಮ್ ನಾಯಕ್ |

ನಾನ್‌ ವೆಜ್‌ ಪ್ರಿಯರು ಮೊಟ್ಟೆಯಿಂದ ಮಾಡುವ ರೆಸಿಪಿ ತುಂಬಾನೇ ಇಷ್ಟ ಪಡುತ್ತಾರೆ. ಮೊಟ್ಟೆಯಿಂದ ನಾನಾ ರೆಸಿಪಿ ಮಾಡಬಹುದು ಅಷ್ಟೇ ಅಲ್ಲ ಇದು ಆರೋಗ್ಯಕ್ಕೂ ಉತ್ತಮ ದಿನಕ್ಕೊಂದು ಮೊಟ್ಟೆ ತಿಂದರೆ ಬಾಯಿ ರುಚಿಯೂ ತೀರಿತು, ದೇಹಕ್ಕೆ ಶಕ್ತಿ ಪೂರೈಕೆಯೂ ಆಯಿತು ಎಂಬಂತೆ ಮೊಟ್ಟೆಯಲ್ಲಿ ಏನೆಲ್ಲಾ ಇದೆ ಎನ್ನುವುದಕ್ಕಿಂತ, ಏನಿಲ್ಲ ಎಂದು ಕೇಳುವುದು ಹೆಚ್ಚು ಸರಿ. ಮಿಟಮಿನ್‌ ಎ, ಬಿ, ಡಿ, ಇ ಗಳ ಜತೆಗೆ ಕಬ್ಬಿಣ, ಕ್ಯಾಲ್ಸಿಯಂ, ಪೊಟ್ಯಾಷಿಯಂ ಉತ್ತಮ ಮಟ್ಟದ ಪ್ರೊಟೀನ್‌ ಅಂಶಗಳನ್ನು ಮತ್ತಿತರ ಹಲವು ಆರೋಗ್ಯ ಸಂಬಂಧ ಅಗತ್ಯಗಳನ್ನು ಇದು ಸುಲಭವಾಗಿ ಪೂರೈಸುತ್ತದೆ. ಅಷ್ಟು ಮಾತ್ರವಲ್ಲದೆ ಮಕ್ಕಳ ಎಲುಬು, ಮೆದುಳು, ಕಣ್ಣಿನ ದೃಷ್ಟಿಶಕ್ತಿ ಮೊದಲಾದವುಗಳ ಬೆಳವಣಿಗೆಗೂ ಸಹಾಯ ಮಾಡುತ್ತದೆ.

Advertisement

ಇನ್ನು ರೆಸಿಪಿ ವಿಚಾರಕ್ಕೆ ಬಂದರೆ ಮೊಟ್ಟೆಯಿಂದ ಎಗ್‌ಬುರ್ಜಿ,ಎಗ್‌ ಆಮ್ಲೆಟ್‌,ಎಗ್‌ ರೋಸ್ಟ್‌, ಎಗ್‌ ಬೊಂಡಾ…ಹೀಗೆ ಇನ್ನೂ ಹಲವಾರು ಬಗೆಯ ಅಡುಗೆ ತಯಾರಿಸಬಹುದಾಗಿದೆ. ಇದರ ಜೊತೆಗೆ ನಾವಿಂದು ಮೊಟ್ಟೆಯಿಂದ ತಯಾರಿಸಬಹುದಾದ “ಹೈದರಾಬಾದಿ ಎಗ್ ಮಲೈ ಕರಿ” ಹೇಗೆ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತೇವೆ.

ಹೈದರಾಬಾದಿ ಎಗ್ ಮಲೈ ಕರಿ (Hyderabadi Egg Malai Curry)
ಬೇಕಾಗುವ ಸಾಮಗ್ರಿಗಳು
ಬೇಯಿಸಿದ ಮೊಟ್ಟೆ-8, ತೆಂಗಿನೆಣ್ಣೆ-3ಚಮಚ, ಚಕ್ಕೆ,ಲವಂಗ, ಏಲಕ್ಕಿ, ಜೀರಿಗೆ ಪುಡಿ-1ಚಮಚ, ಗರಂ ಮಸಾಲ-2ಚಮಚ, ಅರಿಶಿನ ಪುಡಿ-ಅರ್ಧ ಚಮಚ, ಕೊತ್ತಂಬರಿ ಪುಡಿ-1ಚಮಚ, ಮೊಸರು-1ಕಪ್‌, ಸಕ್ಕರೆ-1ಚಮಚ, ಫ್ರೆಶ್‌ ಕ್ರೀಮ್-1/4ಕಪ್‌, ಈರುಳ್ಳಿ-2(ಸಣ್ಣಗೆ ಹೆಚ್ಚಿದ್ದು) , ಹಸಿಮೆಣಸು-6, ಶುಂಠಿ-ಸ್ವಲ್ಪ, ಬೆಳ್ಳುಳ್ಳಿ-5ಎಸಳು, ಕೊತ್ತಂಬರಿ ಸೊಪ್ಪು-1ಕಪ್‌(ಸಣ್ಣಗೆ ಹೆಚ್ಚಿದ್ದು), ಪುದೀನಾ ಸೊಪ್ಪು-1ಕಪ್‌(ಸಣ್ಣಗೆ ಹೆಚ್ಚಿದ್ದು), ಉಪ್ಪು-ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ
ಮೊದಲಿಗೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಹಸಿಮೆಣಸು, ಶುಂಠಿ,ಬೆಳ್ಳುಳ್ಳಿ,ಕೊತ್ತಂಬರಿ ಸೊಪ್ಪು,ಪುದೀನಾ ಸೊಪ್ಪು ಇವೆಲ್ಲವನ್ನು ಒಂದು ಮಿಕ್ಸಿಜಾರಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.ನಂತರ ಒಂದು ಪ್ಯಾನ್‌ ಗೆ 3ಚಮಚದಷ್ಟು ತೆಂಗಿನೆಣ್ಣೆ ಹಾಕಿ ತದನಂತರ ಚಕ್ಕೆ,ಲವಂಗ,ಏಲಕ್ಕಿ ಮತ್ತು ಜೀರಿಗೆ ಸೇರಿಸಿ ಸ್ವಲ್ಪ ಹೊತ್ತು ಫ್ರೈ ಮಾಡಿ ನಂತರ ರುಬ್ಬಿಟ್ಟ ಮಸಾಲೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಸುಮಾರು 10ನಿಮಿಷಗಳ ಕಾಲ ಬೇಯಿಸಿರಿ. ನಂತರ ಅರಿಶಿನ ಪುಡಿ, ಕೊತ್ತಂಬರಿ ಪುಡಿ, ಗರಂ ಮಸಾಲ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿ. ತದನಂತರ ಒಂದು ಕಪ್‌ನಷ್ಟು ಮೊಸರನ್ನು ಹಾಕಿ ಸರಿಯಾಗಿ ಮಿಕ್ಸ್‌ ಮಾಡಿ ಸುಮಾರು 5ನಿಮಿಷಗಳ ಕಾಲ ಬೇಯಿಸಿರಿ. ಆ ಬಳಿಕ ಒಂದು ಚಮಚದಷ್ಟು ಸಕ್ಕರೆ ಹಾಕಿ ಸ್ವಲ್ಪ ನೀರನ್ನು ಸೇರಿಸಿರಿ. ನಂತರ ಬೇಯಿಸಿದ ಮೊಟ್ಟೆಯನ್ನು ಅರ್ಧ ಭಾಗಕ್ಕೆ ಕಟ್‌ ಮಾಡಿ ಈ ಮಸಾಲೆಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ತದನಂತರ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿ 5 ನಿಮಿಷಗಳವರೆಗೆ ಬೇಯಿಸಿರಿ.


ನಂತರ ಫ್ರೆಶ್‌ ಕ್ರೀಮ್ ಯನ್ನು ಹಾಕಿ ಪುನಃ ಚೆನ್ನಾಗಿ ಮಿಶ್ರಣ ಮಾಡಿದರೆ ಹೈದರಾಬಾದಿ ಎಗ್‌ ಮಲೈ ಕರಿ ಅನ್ನ ಹಾಗೂ ರೋಟಿ ಜೊತೆ ತಿನ್ನಲು ಬಲುರುಚಿ.

-ಶ್ರೀರಾಮ್ ಜಿ ನಾಯಕ್

Advertisement
Advertisement

Udayavani is now on Telegram. Click here to join our channel and stay updated with the latest news.

Next