Advertisement

Yugadi: ವರುಷದ ಆದಿ ಯುಗಾದಿ

02:55 PM Apr 24, 2024 | Team Udayavani |

ಭಾರತ ವೈವಿಧ್ಯಮಯ ಸಂಸ್ಕೃತಿ, ಹಬ್ಬಗಳ ನಾಡು. ಋತುಗಳಲ್ಲಿ ವಸಂತ ಶ್ರೇಷ್ಠವಿದ್ದಂತೆ ಹಬ್ಬಗಳ ಪೈಕಿ ಯುಗಾದಿ ಶ್ರೇಷ್ಠವಾಗಿದೆ.

Advertisement

ಯುಗಾದಿ ಎಂಬ ಪದದ ಅರ್ಥ ಯುಗದ ಆದಿ ಎಂಬುದಾಗಿದೆ. ಈ ದಿನದಂದು ಬ್ರಹ್ಮನು ಬ್ರಹ್ಮಾಂಡ ವನ್ನು ಸೃಷ್ಟಿಸಿದನು ಎಂಬುದು ಪ್ರತೀತಿ. ಪ್ರಕೃತಿಯು ಹಚ್ಚ ಹಸುರಿನಿಂದ ಅವರಿಸಿಕೊಂಡು ಎಲ್ಲೆಡೆ ಸಂತೋಷವನ್ನು ಹೊರಸೂಸುತ್ತಾ ವಸಂತಕಾಲದ ಆಗಮಾನದೊಂದಿಗೆ ಹೊಸ ಯುಗ ಅಥವಾ ಹೊಸ ವರ್ಷ ಆರಂಭಕ್ಕೆ ಸ್ವಾಗತ ಕೋರುವ ದಿನವೇ ಯುಗಾದಿಯಾಗಿದೆ.

ಈ ಹಬ್ಬವನ್ನು ಭಾರತ ಪರ್ವದಲ್ಲಿ ಬೇರೆ ಬೇರೆ ಹೆಸರಿನಿಂದ ಬೇರೆ ಬೇರೆ ರೀತಿಯಲ್ಲಿ ಆಚರಿಸುತ್ತಾರೆ.ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕ ಪ್ರದೇಶಗಳಲ್ಲಿ ಹೆಚ್ಚು ಜನಪ್ರಿಯವಾಗಿದೆ.

ಇಲ್ಲಿ ಮನೆಗಳಲ್ಲಿ ಯುಗಾದಿ ಹಬ್ಬದ ಸಿದ್ಧತೆಗಳು 1 ವಾರದ ಮುಂಚೆಯೇ ಪ್ರಾರಂಭವಾಗುತ್ತದೆ. ಪಾತ್ರೆ ಸಾಮಗ್ರಿ ಒಳಗೊಂಡಂತೆ ಮನೆಯನ್ನು ಸಂಪೂರ್ಣ ಶುಚಿಗೊಳಿಸಿ, ಅಲಂಕರಿಸಲಾಗುತ್ತದೆ.

ಮನೆಮನೆಯಲ್ಲೂ ಹಬ್ಬದ ದಿನದಂದು ಮುಂಜಾನೆ ಬೇವು ಮಿಶ್ರಿತ ನೀರಿನಿಂದ ಸ್ನಾನ ಮಾಡಿ ಹೊಸ ಬಟ್ಟೆ ಧರಿಸಿ ಉತ್ತಮ ಆರೋಗ್ಯ ಮತ್ತು ಸಮೃದ್ಧಿಗಾಗಿ ದೇವರನ್ನು ಪ್ರಾರ್ಥಿಸುತ್ತಾರೆ. ಇದಲ್ಲದೆ ಜನರು ಬೆಲ್ಲ ಮತ್ತು ಬೇವಿನ ಎಲೆಗಳನ್ನು ಸಮಾನ ಪ್ರಮಾಣದಲ್ಲಿ ಹಂಚುತ್ತಾರೆ. ಅಂದು ವಿಶೇಷವಾಗಿ ದೇವರು ಮತ್ತು ಕುಟುಂಬದ ಹಿರಿಯರಿಂದ ಆಶೀರ್ವಾದವನ್ನು ಪಡೆಯುತ್ತಾರೆ. ಬೇವು ಬೆಲ್ಲವು ಸುಖ-ದುಃಖ, ರಾತ್ರಿ ಹಗಲುಗಳ ಸಂಕೇತಗಳಾಗಿವೆ. ಮಾನವರ ಬದುಕಿನಲ್ಲಿ ಸುಖ ದುಃಖಗಳು ಅವಿಭಾಜ್ಯ ಅಂಗಗಳಾಗಿವೆ. ಇವೆಲ್ಲವುಗಳೊಂದಿಗೆ ಜೀವನದಲ್ಲಿ ಸಮತೋಲನ ಕಾಯ್ದುಕೊಂಡು ಮನುಷ್ಯ ಬದುಕಬೇಕು. ಜೀವನ ಕಷ್ಟ ಸುಖ ನೋವು ನಲಿವುಗಳ ಮಿಶ್ರಣವಾಗಿದೆ. ಇವೆರಡು ಒಟ್ಟಿಗೆ ಇರುವವು ಹೀಗಾಗಿ ಎರಡನ್ನೂ ಸಮದೃಷ್ಟಿಯಿಂದ ಸವಿಯುವುದನ್ನು ಕಲಿಯಲೆಂದೇ ಯುಗಾದಿಯಂದು ಬೇವುಬೆಲ್ಲವನ್ನು ಹಂಚುವರು. ಒಟ್ಟಾರೆಯಾಗಿ ಯುಗಾದಿಯು ಪೂರ್ಣ ಸಂತೋಷ ಸಡಗರದಿಂದ ಮತ್ತು

Advertisement

ಧಾರ್ಮಿಕ ಮನೋಭಾವದಿಂದ ಆಚರಿಸಲಾಗುವ ಹಬ್ಬವಾಗಿದೆ.

ವೇದಗಳ ಕಾಲದಿಂದಲೂ ಯುಗಾದಿಯ ಆಚಣೆಯಿದೆ. ಎಲ್ಲ ಶಾಸ್ತ್ರ, ಗ್ರಂಥಗಳಲ್ಲಿ ಯುಗಾದಿಯ ಕುರಿತು ಉಲ್ಲೇಖಗಳಿವೆ. ಶ್ರೀ ರಾಮನು ರಾವಣನನ್ನು ಸಂಹರಿಸಿ ಬಂದಾಗ ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಪಟ್ಟಾಭಿಷೇಕವಾದ ದಿನ. ಅಲ್ಲದೆ ಮಹಾಭಾರತದಲ್ಲಿ ಬರುವ ಚೀದಿರಾಜ್ಯದ ಅರಸು ವಸುವಿನ ಉಗ್ರ ತಪಸ್ಸಿಗೆ ಮೆಚ್ಚಿದ ಇಂದ್ರನು ವೈಜಯಂತಿ ಮಾತೆಯನ್ನು ಅವನಿಗೆ ಕೊಟ್ಟು, ಚಿನ್ನದ ಕಲಶವುಳ್ಳ ಚಕ್ರಾಧಿಪತ್ಯದ ಧ್ವಜವನ್ನು ರಾಜನ ತಲೆ ಮೇಲೆ ಇಟ್ಟಿರುವ ದಿನ ಇದಾಗಿದೆ ಎಂದು ಹೇಳಲಾಗುತ್ತದೆ.

ಇತಿಹಾಸದ ಪುಟಗಳಲ್ಲಿ ವರಹಮಿರರಾಚಾರ್ಯರು ವರ್ಷ ಆರಂಭವನ್ನು ಚೈತ್ರ ಮಾಸವೆಂದು ಹೇಳಿರುವರು. ಪಂಚಾಂಗ ಮತ್ತು ಶಾಸ್ತ್ರದ ಪ್ರಕಾರ ಶುಭದಿನ ಹಾಗೂ ಅತ್ಯಂತ ಶುಭ ಮುಹೂರ್ತದ ದಿನಗಳೆಂದರೆ ಯುಗಾದಿ, ವಿಜಯ ದಶಮಿ ಮತ್ತು ಬಲಿಪಾಡ್ಯಮಿ. ಅದರಲ್ಲಿ ಯುಗಾದಿ ಅತೀ ಶ್ರೇಷ್ಠ ಶುಭದಿನವಾದ ಯುಗಾದಿ ಮಂಗಳ ಕಾರ್ಯವನ್ನು ಮಾಡಲು ಯೋಗ್ಯ ದಿನವೆಂದು ಹೇಳುವರು. ಇದಕ್ಕಿಂತ ಉತ್ತಮ ಸಮಯವಿಲ್ಲ ಎಂದು ಜನರು ನಂಬುತ್ತಾರೆ. ಆದ್ದರಿಂದ ಮನೆ, ವಾಹನ ಅಥವಾ ಅಂಗಡಿ ಖರೀದಿಸುವಂತಹ ಹೊಸ ಉದ್ಯಮಗಳನ್ನು ಪ್ರಾರಂಭಿಸಲು ಈ ದಿನವನ್ನು ಪರಿಗಣಿಸುತ್ತಾರೆ.

ಈ ರೀತಿಯಾಗಿ ಯುಗಾದಿಯು ನಾಡಿಗೆ ಮಾತ್ರವಲ್ಲದೆ, ಇಡೀ ವಿಶ್ವಕ್ಕೆ ಉಜ್ವಲವನ್ನು, ಜನತೆಗೆ ಸುಖ ಶಾಂತಿಯನ್ನು ನೀಡುವ ವಜ್ರ ಸಮಾನ ಸಮಯವಾಗಿದೆ. ಹೀಗೆ ಯುಗಾದಿಯು ಭಕ್ತರಿಗಾಗಿ, ವಿಶಾಲ ಹೃದಯದ ಶಿವಶರಣೆರಿಗಾಗಿ, ಮುಕ್ತಿ ಬಯಸುವ ಆರಾಧಕರಿಗಾಗಿ “ಶಿವನು ಭಕ್ತರಿಗೆ ಓಗೊಟ್ಟು ಅವರ ಭಕ್ತಿಯ ಫಲವನ್ನು ನೀಡಲು ಧರೆಗೆ ಬಂದಿದ್ದಾನೆ’ ಎಂಬ ಪರಮ ಸಂದೇಶವನ್ನು ನೀಡುವ ಮಹಾನ್‌ ಪರ್ವ ಇದಾಗಿದೆ.

ಈ ಯುಗಾದಿ ಎಲ್ಲರಿಗೂ ವರ್ಷವಿಡಿ ಸಂತೋಷ, ಆರೋಗ್ಯ, ಸಂಪತ್ತು  ಮತ್ತು ಅದೃಷ್ಟವನ್ನು ತರಲಿ. ಹೊಸ ಚೈತನ್ಯ, ಹೊಸ ಆರಂಭ, ಹೊಸ  ಸಮೃದ್ಧಿಯನ್ನು ತರುವ ಜತೆಗೆ ಹೊಸ ಉಲ್ಲಾಸವನ್ನು ನೀಡಲಿ. ಎಲ್ಲರೂ  ಯುಗಾದಿಯ ನಿಜ ಅರ್ಥ ತಿಳಿದು ಆಚರಿಸೋಣ.

-ಶಿಲ್ಪಾ ಪವಾರ

ವಿಜಯಪುರ

Advertisement

Udayavani is now on Telegram. Click here to join our channel and stay updated with the latest news.

Next