“ಮಾತೃ ಭಾಷೆಯಲ್ಲಿ ಕಲಿತ ವಿದ್ಯೆ ತಲೆಗೆ ಹತ್ತುತ್ತದೆ’ ಎಂಬ ಮಾತಿದೆ. ಆದರೆ ಈಗ ಎಲ್ಲೆಡೆ ಆಗುತ್ತಿರುವುದು ಮಾತ್ರ ಇದಕ್ಕೆ ತದ್ವಿರುದ್ಧ. ಇಂಗ್ಲಿಷ್ ಭಾಷೆಯ ಮೇಲಿನ ಮೋಹ, ಇತರರೊಂದಿಗೆ ನಮ್ಮನ್ನು ಹೋಲಿಕೆ, ಹೀಗೆ ಅನೇಕ ಕಾರಣಗಳಿಂದ ಪೋಷಕರು ಮಕ್ಕಳನ್ನು ಕನ್ನಡ ಶಾಲೆಗಳಿಗೆ ಸೇರಿಸಲು ಹಿಂಜರಿಯುತ್ತಿರುವುದನ್ನು ನಾವು ಕಾಣುತ್ತಿದ್ದೇವೆ.
ಕರ್ನಾಟಕದಲ್ಲಿ ಕನ್ನಡ ಸರ್ವಭೌಮವಾಗಬೇಕೆಂದರೆ ಅದು ಶಿಕ್ಷಣದಿಂದ ಮಾತ್ರ ಸಾಧ್ಯ. ಆದರೆ ಈಗ ಪ್ರತೀ ವರ್ಷ ಕನ್ನಡ ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುತ್ತಿವೆ. ಇಂಗ್ಲಿಷ್ ಭಾಷೆಯ ವ್ಯಾಪ್ತಿಯ ಪ್ರಭಾವದಿಂದಾಗಿ ಮಾತೃ ಭಾಷೆ ಮೇಲಿನ ಪ್ರೀತಿ, ಗೌರವ ಎಲ್ಲವೂ ಕಡಿಮೆಯಾಗುತ್ತಿದೆ.
ಪ್ರಸ್ತುತ ರಾಜ್ಯದಲ್ಲಿ ಸುಮಾರು 49,679 ಕನ್ನಡ ಶಾಲೆಗಳಿವೆ. ಆದರೆ ಆತಂಕದ ವಿಷಯವೇನೆಂದರೆ ಇದುವರೆಗೆ 13,800 ಶಾಲೆಗಳು ಮುಚ್ಚಿಹೋಗಿವೆ. ಇಷ್ಟೊಂದು ಪ್ರಮಾಣದಲ್ಲಿ ಶಾಲೆಗಳು ಮುಚ್ಚಿ ಹೋಗಿರುವುದಕ್ಕೆ ನೇರವಾಗಿ ಸರಕಾರವೇ ಹೊಣೆ ಎನ್ನಬಹುದು. ಶಾಲೆಯ ಕಟ್ಟಡದ ವ್ಯವಸ್ಥೆ, ಮೂಲಭೂತ ಸೌಕರ್ಯ, ಶೌಚಾಲಯ ವ್ಯವಸ್ಥೆ, ಶಿಕ್ಷಕರ ಕೊರತೆ ಈ ಎಲ್ಲವುಗಳ ಕೊರತೆಗಳ ಕಾರಣದಿಂದಾಗಿ ಹೆತ್ತವರು ಕನ್ನಡ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಲು ಮುಂದೆ ಬರುತ್ತಿಲ್ಲ.
ಈ ಕುರಿತು ಸರಕಾರ ಸೂಕ್ತ ಕ್ರಮ ತೆಗೆದುಕೊಳ್ಳಲೇಬೇಕಿದೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಸರಕಾರಿ ಶಾಲೆಗಳೇ ಇಲ್ಲದಾಗುವ ಪರಿಸ್ಥಿತಿ ಬಂದರೆ ಆಶ್ಚರ್ಯ ಪಡಬೇಕಿಲ್ಲ. ಇಷ್ಟಕ್ಕೂ ನಿಜಕ್ಕೂ ಸರಕಾರಕ್ಕೆ ಶಾಲೆಗಳಿಗೆ ಮಕ್ಕಳನ್ನು ಸೆಳೆಯಲು ಸಾಧ್ಯವಾಗುತ್ತಿಲ್ಲವೇ, ಅಥವಾ ಖಾಸಗಿ ಶಾಲೆಗಳ ಲಾಭಿಗೆ ಸರಕಾರ ಮಣಿದಿದೆಯೇ ಎಂಬ ಅನುಮಾನವೂ ಬರದೇ ಇರುವುದಿಲ್ಲ. ಜನರಿಗೂ ಅಷ್ಟೇ. ಸರಕಾರಿ ಕೆಲಸಬೇಕು, ಸರಕಾರಿ ಸಂಬಳ ಬೇಕು, ಆದರೆ ಸರಕಾರಿ ಶಾಲೆಗಳು ಮಾತ್ರ ಬೇಡ ಅನ್ನುವ ಮನಸ್ಥಿತಿ ಯಾವ ರೀತಿಯಲ್ಲಿ ಸರಿ ?
ಸರಕಾರಿ ಕೆಲಸದಲ್ಲಿರುವ ಪ್ರತೀ ನೌಕರರು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಸರಕಾರಿ ಶಾಲೆಗೇ ಸೇರಿಸಬೇಕು ಎಂಬ ನಿಯಮವನ್ನು ಕಡ್ಡಾಯ ಮಾಡಬೇಕು. ಅಲ್ಲದೇ, ಸರಕಾರಿ ಶಾಲೆಗಳಿಗೆ ಸೂಕ್ತ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಸರಕಾರಿ ಶಾಲೆಗಳಿಗೆ ಸರಕಾರವೇ ಪ್ರಾಶಸ್ತ್ಯ ನೀಡದಿದ್ದರೆ ಬೇರೆ ಯಾರು ತಾನೇ ನೀಡಲು ಸಾಧ್ಯ?
ಮಾತೃ ಭಾಷಾ ಶಿಕ್ಷಣಕ್ಕೆ ಪ್ರಾಥಮಿಕ ಹಂತದಿಂದಲೇ ಅವಕಾಶ ಕಲ್ಪಿಸಬೇಕು ಮತ್ತು ಕಡ್ಡಾಯಗೊಳಿಸಬೇಕು. ಇಂತಹ ಕೇವಲು ಕಠಿನ ನಿಯಮಗಳನ್ನು ಜಾರಿಗೆ ತಂದರೆ ಮಾತ್ರ ಸಾಧ್ಯ ಕನ್ನಡ ಶಾಲೆಗಳು ಉಳಿಯಲು ಸಾಧ್ಯ. ಹೀಗೆ ಕನ್ನಡ ಶಾಲೆಗಳು ಉಳಿದಾಗ ಮಾತ್ರವೇ ಭಾಷೆ ಉಳಿಯಲು ಸಾಧ್ಯ.
–
ಆಶಾ
ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು