Advertisement

Kollur; ಉಪಚುನಾವಣೆಯ ಸೋಲು ಗೆಲುವು ದೇವರ ಫಲಾಫಲ: ಡಿಸಿಎಂ ಡಿ. ಕೆ. ಶಿವಕುಮಾರ್

03:31 PM Nov 21, 2024 | Team Udayavani |

ಕೊಲ್ಲೂರು (ಉಡುಪಿ): ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಶು ಕದಾಚನ. ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ನಾವು ನಮ್ಮ ಪ್ರಯತ್ನವನ್ನು ಮಾಡಿದ್ದೇವೆ. ಆದರೆ, ಫಲಾಫಲ ಭಗವಂತನದ್ದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.

Advertisement

ಉಡುಪಿಯ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಗುರುವಾರ (ನ.21) ಪೂಜೆ ಸಲ್ಲಿಸಿದ ನಂತರ ಶಿವಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಜ್ಯದ ಉಪಚುನಾವಣೆ ಫಲಿತಾಂಶದ ವಿಚಾರವಾಗಿ, “ಎಲ್ಲಾ ಕಡೆಯೂ ದೇವರು ನಮಗೆ ಒಳ್ಳೆಯದು ಮಾಡುತ್ತಾನೆ ಎನ್ನುವ ಭರವಸೆಯನ್ನು ಇಟ್ಟಿದ್ದೇವೆ” ಎಂದು ಹೇಳಿದರು.

ರಾಜ್ಯದಲ್ಲಿ ಮೂರು ಪಕ್ಷಗಳು ತಲಾ ಒಂದೊಂದು ಸ್ಥಾನ ಗೆಲ್ಲುತ್ತವೇ ಎನ್ನುವ ಸಮೀಕ್ಷೆಗಳ ಬಗ್ಗೆ ಕೇಳಿದಾಗ, “ಕರ್ನಾಟಕ ವಿಧಾನಸಭೆ ಹಾಗೂ ಹರಿಯಾಣದ ಚುನಾವಣೆ ಬಗ್ಗೆ ಸಮೀಕ್ಷೆಗಳು ಏನು ಹೇಳಿದ್ದವು? ನನಗೆ ಯಾವುದೇ ಸಮೀಕ್ಷೆಗಳ ಮೇಲೆ ನಂಬಿಕೆಯಿಲ್ಲ. ಸಮೀಕ್ಷೆಗಳನ್ನು ಕಟ್ಟಿಕೊಂಡು ರಾಜಕೀಯ ಮಾಡಲು ಆಗುವುದಿಲ್ಲ. ಯಾರು ಜನರ ಹೃದಯ ಹಾಗೂ ವಿಶ್ವಾಸ ಪಡೆದಿರುತ್ತಾರೋ ಅವರಿಗೆ ಜನ ಗೌಪ್ಯ ಮತದಾನದ ಮೂಲಕ ಬೆಂಬಲ ನೀಡುತ್ತಾರೆ” ಎಂದರು.

Advertisement

ಕೊಲ್ಲೂರು ದೇವಸ್ಥಾನ ಆಡಳಿತ ಮಂಡಳಿಯಲ್ಲಿ ಮೂಲ ಕಾಂಗ್ರೆಸ್ಸಿಗರಿಗೆ ಮಣೆ ಹಾಕದೆ ವಲಸಿಗರಿಗೆ ಮಣೆ ಹಾಕಲಾಗಿದೆ ಎನ್ನುವ ಆರೋಪದ ಬಗ್ಗೆ ಕೇಳಿದಾಗ “ಚುನಾವಣೆ ವೇಳೆ ಇಲ್ಲಿಗೆ ಬಂದಾಗ ಈ ಬಗ್ಗೆ ಕೆಲವರಿಗೆ ಮಾತು ಕೊಟ್ಟಿದ್ದೆವು. ಸಲ್ಪ ದಿನ ಅವರು ಆಡಳಿತ ಮಾಡಲಿ ಬಿಡಿ” ಎಂದು ಹೇಳಿದರು.

ಬಡವರಿಗೆ ಅನ್ಯಾಯವಾಗಲು ಬಿಡುವುದಿಲ್ಲ

ಬಿಪಿಎಲ್ ಕಾರ್ಡ್ ಗೊಂದಲದ ಬಗ್ಗೆ ಮಾತನಾಡಿದ ಅವರು “ಯಾವುದೇ ಕಾರಣಕ್ಕೂ ಬಿಪಿಎಲ್ ಅರ್ಹರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಅರ್ಹರ ಕಾರ್ಡ್ ಗಳು ರದ್ದಾಗಿದ್ದರೆ ಈ ಬಗ್ಗೆ ಪಟ್ಟಿ ಕೊಡಬೇಕು ಎಂದು ಸಂಬಂಧಪಟ್ಟ ಸಚಿವರಿಗೆ ಸೂಚನೆ ನೀಡಲಾಗಿದೆ. ವಂಚಿತರಿಗೆ ಮರು ಅರ್ಜಿ ಹಾಕಲು ಅವಕಾಶ ಕಲ್ಪಿಸಿ ಕೊಡಬೇಕು ಎಂದು ಸೂಚನೆ ನೀಡಿದ್ದೇವೆ. ರಾಜ್ಯ, ತಾಲ್ಲೂಕು, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಗಳು ಇದರ ಬಗ್ಗೆ ಪರಿಶೀಲನೆ ಮಾಡಲಿವೆ. ಒಬ್ಬನೇ ಒಬ್ಬ ಬಡವನಿಗೂ ತೊಂದರೆ ಆಗಲು ಬಿಡುವುದಿಲ್ಲ ಎಂದು ಸರ್ಕಾರದ ಪ್ರತಿನಿಧಿಯಾಗಿ, ಪಕ್ಷದ ಅಧ್ಯಕ್ಷನಾಗಿ ನಾನು ಭರವಸೆ ನೀಡುತ್ತೇನೆ. ಯಾರೂ ಭಯ ಪಡುವ ಅಗತ್ಯವಿಲ್ಲ. ವಿರೋಧ ಪಕ್ಷಗಳು ಮಾತನಾಡಬೇಕು ಎಂದು ಸುಮ್ಮನೆ ಮಾತನಾಡುತ್ತಿವೆ” ಎಂದರು.

ಸಕ್ರಿಯ ನಕ್ಸಲರಿಗೆ ಶರಣಾಗತಿಯಾಗಲು ಸೂಚನೆ ನೀಡಲಾಗಿದೆಯೇ ಎಂದು ಕೇಳಿದಾಗ, “ಪೊಲೀಸ್ ಇಲಾಖೆ ಹಾಗೂ ಗೃಹ ಸಚಿವರಿಗೆ ಸಂಬಂಧಪಟ್ಟ ವಿಚಾರವಾಗಿರುವ ಕಾರಣ ಅವರು ಇದರ ಬಗ್ಗೆ ಕೆಲಸ ಮಾಡುತ್ತಾರೆ. ನಾನು ನನಗೆ ಸಂಬಂಧ ಪಟ್ಟ ವಿಚಾರದಲ್ಲಿ ಕೆಲಸ ಮಾಡುತ್ತೇನೆ” ಎಂದು ಹೇಳಿದರು.

ನಬಾರ್ಡ್ ಸಾಲ ಕಡಿತ; ಕೇಂದ್ರಕ್ಕೆ ಮನವಿ

ಕೇಂದ್ರ ಸರ್ಕಾರದ ನಬಾರ್ಡ್ ಸಂಸ್ಥೆ ಸಾಲ ಕಡಿತ ಮಾಡಿರುವ ವಿಚಾರದ ಬಗ್ಗೆ ಮಾತನಾಡಿ, “ಈ ಬಗ್ಗೆ ಮುಖ್ಯಮಂತ್ರಿಗಳು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ನಬಾರ್ಡ್ ಸಾಲ ಕಡಿತ ವಿಚಾರದಲ್ಲಿ ಅನ್ಯಾಯವಾಗಿದೆ ಎಂದು ಮನವಿ ಸಲ್ಲಿಸಿದ್ದಾರೆ” ಎಂದರು.

ಗ್ಯಾರಂಟಿ ನಿಲ್ಲಿಸಲಾಗುತ್ತದೆ ಎನ್ನುವ ವಿರೋಧ ಪಕ್ಷಗಳ ಆರೋಪದ ಬಗ್ಗೆ ಕೇಳಿದಾಗ, “ಗ್ಯಾರಂಟಿಗಳು ಮುಂದಿನ ಮೂರುವರೆ ವರ್ಷಗಳು ಇರುತ್ತವೆ. ನಂತರವೂ ನಾವೇ ಅಧಿಕಾರಕ್ಕೆ ಬಂದು ಐದು ವರ್ಷಗಳು ಮುಂದುವರೆಸುತ್ತೇವೆ” ಎಂದರು.

Advertisement

Udayavani is now on Telegram. Click here to join our channel and stay updated with the latest news.

Next