ಕೊಪ್ಪಳ ಜಿಲ್ಲೆಗೆ ಕಳೆದ ಮೂರು ವರ್ಷದಿಂದ ಬರದ ಬಿಸಿ ಅಡರಿಕೊಂಡಿದೆ. ಹೀಗಿದ್ದರೂ ತಾಲೂಕಿನ ಕಾತರಕಿ-ಗುಡ್ಲಾನೂರು ಭಾಗದ ರೈತರು ತಮಗೆ ಸಿಗುವ ಅಲ್ಪ ನೀರಿನಲ್ಲೇ ತೋಟಗಾರಿಕೆ ಇಲಾಖೆಯ ನೆರವು ಪಡೆದು ಹೊಸ ತಂತ್ರಜಾnನ ಬಳಸಿ, ಬರದಲ್ಲೂ ಭರ್ಜರಿ ಬಾಳೆ ಬೆಳೆದು ಇತರೆ ರೈತರಿಗೆ ಮಾದರಿಯಾಗಿದ್ದಾರೆ.
ಕೊಪ್ಪಳ ಜಿಲ್ಲೆಯ ನೆಲ ತೋಟಗಾರಿಕೆ ಬೆಳೆಗೆ ಅತ್ಯಂತ ಸೂಕ್ತ ಸ್ಥಳ. ಹಾಗಾಗಿ ಈ ಭಾಗದ ರೈತರು ತೋಟಗಾರಿಕೆ ಬೆಳೆಯತ್ತ ಹೆಚ್ಚಿನ ಒತ್ತು ನೀಡಿ ಆರ್ಥಿಕ ಪ್ರಗತಿ ಸಾಧಿಸಿ, ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳಲು ಮುಂದಾಗುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಕೊಪ್ಪಳ ತಾಲೂಕಿನ ಕಾತರಕಿ-ಗುಡ್ಲಾನೂರ ಗ್ರಾಮದ ರೈತರಾದ ಶ್ರೀನಿವಾಸ ಹೊಳಿಯಪ್ಪನವರ್, ಕೊಟ್ರಯ್ಯ ಅಬ್ಬಿಗೇರಿಮಠ, ನಿಂಗಪ್ಪ ಹ್ಯಾಟಿ, ಪರಶನಗೌಡ ಹಿರೇಗೌಡರ್, ಈಶ್ವರಗೌಡ ಹಿರೇಗೌಡರ್, ಶಿವಲಿಂಗಮ್ಮ, ರೂಪಣ್ಣ ಅಗಡಿ, ನಾಗರಾಜ್ ಹುರಕಡ್ಲಿ, ಶಿವಾನಂದಯ್ಯ ಅಬ್ಬಿಗೇರಿಮಠ, ಅಕ್ಷತಾ ಸಿದ್ದಲಿಂಗಪ್ಪ ಉಳ್ಳಾಗಡ್ಡಿ – ಇವರುಗಳು ಬರದಲ್ಲೂ ಬಂಪರ್ ಬಾಳೆ ಬೆಳೆದು ಖುಷಿಯಾಗಿದ್ದಾರೆ.
ಈ ಮೊದಲು ಈ ರೈತರ ಜಮೀನಿನಲ್ಲಿ ಮೆಕ್ಕೆಜೋಳ, ಮೆಣಸಿನಕಾಯಿ, ಈರುಳ್ಳಿ ಸೇರಿದಂತೆ ಇತರೆ ಬೆಳೆ ಬೆಳೆಯುತ್ತಿದ್ದರೂ ಅದ್ಯಾವುದೂ ಲಾಭದಾಯಕ ಅನಿಸಿರಲಿಲ್ಲ. ಜೊತೆಗೆ ಪದೆ ಪದೇ ಜಿಲ್ಲೆಯಲ್ಲಿ ಬರ ಆವರಿಸುತ್ತಿತ್ತು. ಕೊಳವೆ ಬಾವಿ ಕೊರೆಸಿದರೂ ಬರದಿಂದ ಅಂತರ್ಜಲ ಕುಸಿದು ನೀರು ಇಲ್ಲದಂತಾಯಿತು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಈ ರೈತರು ಜಿಲ್ಲಾ ತೋಟಗಾರಿಕೆ ಇಲಾಖೆಯ ನೆರವು ಪಡೆದರು. ಲಭ್ಯವಿದ್ದ ಅಲ್ಪ ನೀರಿನಲ್ಲೇ ಪ್ರತಿಯೊಬ್ಬ ರೈತರೂ 2-3 ಎಕರೆಯಲ್ಲಿ ಬಾಳೆ ಬೆಳೆಯಲು ಶುರುಮಾಡಿದರು. ಪರಿಣಾಮ ಏನಾಗಿದೆ ಗೊತ್ತೆ? ಇಂದು ಒಂದು ಬಾಳೆ ತೋಟದಲ್ಲಿ 4 ಅಡಿಯಷ್ಟು ಉದ್ದದ 45 ರಿಂದ 50 ಕೆಜಿ ತೂಕದ ಗೊನೆಗಳು ನೇತಾಡುತ್ತಿವೆ.
ಇಲ್ಲಿನ ರೈತರು ಪ್ರತಿ ಹೆಕ್ಟೇರ್‌ಗೆ 3 ಸಾವಿರ ಸಸಿಗಳಂತೆ ನೆಟ್ಟಿದ್ದಾರೆ. ಅಂಗಾಂಶ ಕೃಷಿ ಬಾಳೆ ‘ಜಿ-ನೇನ್’ ತಳಿ ಬಳಸಿದ್ದಾರೆ. ಗಿಡಗಳಿಗೆ ಉತ್ತಮ ಕೊಟ್ಟಿಗೆ ಗೊಬ್ಬರ, ಕಾಲಕಾಲಕ್ಕೆ ಕಾಂಪೋಸ್ಟ್, ಪೊಟ್ಯಾಷ್, ಕಾಂಪ್ಲೆಕ್ಸ್ ಗೊಬ್ಬರ ನೀಡಿದ್ದಾರೆ. ಹನಿ ನೀರಾವರಿ ಪದ್ಧತಿ ಅಳವಡಿಸಿ, ಬೆಂಗಳೂರಿನ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಅಭಿವೃದ್ಧಿಪಡಿಸಿದ ‘ಬನಾನಾ ಸ್ಪೆಷಲ್’ ಲಘು ಪೋಷಕಾಂಶಗಳ ಪುಡಿಯನ್ನು ತಿಂಗಳಿಗೆ ಒಂದರಂತೆ 6 ಬಾರಿ ಕಾಂಡ ಮತ್ತು ಗೊನೆಗೆ ಸಿಂಪಡಿಸಿದ್ದಾರೆ. ಇದರಿಂದಾಗಿ ಲಘು ಪೋಷಕಾಂಶಗಳ ಕೊರತೆ ನೀಗಿ, ಉತ್ತಮ ಇಳುವರಿ ಬಂದಿದೆ. ಗಿಡಗಳಿಗೆ ರೋಗ ನಿರೋಧಕ ಶಕ್ತಿ ವೃದ್ಧಿಯಾಗಿದೆ. ಹನಿ ನೀರಾವರಿ ಮೂಲಕ ರಸಾವರಿ ಪದ್ಧತಿ ಅನುಸರಿಸಿ, ನೀರಿನಲ್ಲಿ ಕರಗುವ ಗೊಬ್ಬರವನ್ನು ಗಿಡಗಳಿಗೆ ಸಮೃದ್ಧಿಯಾಗಿ ನೀಡಿದ್ದಾರೆ.
ರೈತರು ಪ್ರತಿ ಹೆಕ್ಟೇರ್‌ಗೆ 1.5 ಲಕ್ಷ ರೂ. ವೆಚ್ಚ ಮಾಡಿದ್ದಾರೆ. ತೋಟಗಾರಿಕೆ ಇಲಾಖೆಯು ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಪ್ರತಿ ಹೆಕ್ಟೇರ್‌ಗೆ 1. 10 ಲಕ್ಷ ರೂ. ಸಬ್ಸಿಡಿ ನೀಡಿದೆ. ಹನಿ ನೀರಾವರಿಗೆ ಶೇ.90 ರಷ್ಟು ಸಬ್ಸಿಡಿ. ಗಿಡ ನೆಟ್ಟ 6 ತಿಂಗಳಿಗೆ ಗೊನೆ ಬಂದಿವೆ. 9-10 ತಿಂಗಳ ನಂತರ ಬಾಳೆ ಗೊನೆ ಕಟಾವಿಗೆ ಸಿದ್ಧವಾಗಿ ರೈತರಲ್ಲಿ ಹರ್ಷ ಮೂಡಿಸಿದೆ.
ಲಕ್ಷ ಲಕ್ಷ ಆದಾಯ ಕೈಗೆ
ಪ್ರತಿ ಬಾಳೆ ಗೊನೆ 25-30 ಕೆ.ಜಿ.ಯಷ್ಟು ತೂಕ ಬರುವುದು ಸಾಮಾನ್ಯ. ಆದರೆ, ಇಲ್ಲಿನ ರೈತರ ಬಾಳೆ ಗೊನೆ 40-50 ಕೆ.ಜಿ ತೂಗುತ್ತಿವೆ. ಸದ್ಯ ಪ್ರತಿ ಕೆಜಿ ಬಾಳೆಗೆ ಸರಾಸರಿ 12 ರಿಂದ 16 ರೂ. ಬೆಲೆ ಇದೆ. ಅಂದರೆ ಪ್ರತಿ ಹೆಕ್ಟೇರ್‌ಗೆ 9 ಲಕ್ಷ ರೂ. ಆದಾಯ ಗಳಿಸುತ್ತಿದ್ದಾರೆ. ಉತ್ತಮ ಗುಣಮಟ್ಟದ ಈ ಬಾಳೆ ಖರೀದಿಸಲು ಹಣ್ಣು ಖರೀದಿ ಗುತ್ತಿಗೆದಾರರು ಪೈಪೋಟಿ ನಡೆಸುತ್ತಿದ್ದಾರೆ.
“ನಮ್ಮ ಹೊಲದಲ್ಲಿ ಈ ಮೊದಲು ಮೆಕ್ಕೆಜೋಳ, ಮೆಣಸಿನಕಾಯಿ, ಈರುಳ್ಳಿ ಮುಂತಾದ ಬೆಳೆ ಹಾಕಿದ್ದೆವು. ಆದರೆ ಅದ್ಯಾವುದೂ ಅಷ್ಟೊಂದು ಆದಾಯ ತಂದಿರಲಿಲ್ಲ. ತೋಟಗಾರಿಕೆ ಇಲಾಖೆಯ ಸಲಹೆ ಹಾಗೂ ಮಾರ್ಗದರ್ಶನದಂತೆ ಇದೇ ಮೊದಲ ಬಾರಿಗೆ ಬಾಳೆ ಬೆಳೆದಿದ್ದೇವೆ ಎನ್ನುತ್ತಾರೆ ಭರ್ಜರಿ ಬಾಳೆ ಬೆಳೆದ ರೈತ ಸುಭಾಷ್ ಭೈರಣ್ಣವರ್.
ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಕೃಷ್ಣ ಉಕ್ಕುಂದ, ವಿಷಯ ತಜ್ಞ ವಾಮನ ಮೂರ್ತಿ, ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ ನಜೀರ್ ಅಹ್ಮದ್, ಸಹಾಯಕ ತೋಟಗಾರಿಕೆ ಅಧಿಕಾರಿ ವಿಜಯ ಮಹಾಂತೇಶ್, ತೋಟಗಾರಿಕೆ ಸಹಾಯಕ ಬಸವರಾಜ ರಾಂಪೂರ ಅವರು ರೈತರಿಗೆ ಸಮಗ್ರ ಮಾಹಿತಿ, ಮಾರ್ಗದರ್ಶನ ನೀಡಿದ್ದಾರೆ.
ಹೆಚ್ಚಿನ ಮಾಹಿತಿಗೆ – 9731742939
– ದತ್ತಪ್ಪ ಕಮ್ಮಾರ