ಆನಂದಪುರ: ಕಾಡಾನೆಗಳು ರಾತ್ರಿ ರೈತರ ಅಡಿಕೆ ತೋಟಕ್ಕೆ ನುಗ್ಗಿ ಮರಗಳನ್ನು ಮುರಿದು ಹಾಕಿದ ಘಟನೆ ಸಮೀಪದ ಆಚಾಪುರ ಗ್ರಾಮ ಪಂಚಾಯತ್ ನ ತಂಗಳವಾಡಿ ಗ್ರಾಮದಲ್ಲಿ ಡಿ.19ರ ಸೋಮವಾರ ನಡೆದಿದೆ.
ಕಳೆದ 2-3 ದಿನಗಳಿಂದ ಗಿಳಾಲಗುಂಡಿ, ಕೆರೆಹಿತ್ಲು, ಗಿಳಾಲ ಗುಂಡಿ ಭಾಗದಲ್ಲಿ ಆನೆಗಳು ಕಾಣಿಸಿಕೊಂಡಿದ್ದು, ಈ ಭಾಗದ ರೈತರಲ್ಲಿ ಆತಂಕ ಉಂಟಾಗಿದೆ.
ತಂಗಳುವಾಡಿ ಗ್ರಾಮದ ಸಂಗಪ್ಪ ಗೌಡ್ರು ಎಂಬವರ ಅಡಿಕೆ ತೋಟಕ್ಕೆ ನುಗ್ಗಿದ ಆನೆಗಳು 15ಕ್ಕೂ ಹೆಚ್ಚು ಅಡಿಕೆ ಮರಗಳಿಗೆ ಹಾನಿಯುಂಟು ಮಾಡಿವೆ. ರಾಮಚಂದ್ರ, ಮೋಹನ್ ಎಂಬ ರೈತರ ಅಡಿಕೆ ಮತ್ತು ಬಾಳೆ ತೋಟ, ಶುಂಠಿ ಹೊಲಕ್ಕೆ ಆನೆಗಳು ನುಗ್ಗಿ ಬೆಳೆ ಹಾಳು ಮಾಡಿವೆ.
ಈ ಭಾಗದಲ್ಲಿ ಕಾಡಾನೆಯಿಂದ ರೈತರ ಬೆಳೆಗಳನ್ನು ಉಳಿಸಿಕೊಳ್ಳುವುದು ಕಷ್ಟವಾಗಿದೆ. ಆನೆ ದಾಳಿಯಿಂದ ರೈತರಿಗಾದ ನಷ್ಟಕ್ಕೆ ರಾಜ್ಯ ಸರ್ಕಾರ ಪರಿಹಾರ ನೀಡುವಂತೆ ಆಚಾಪುರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಪ್ರಕಾಶ್ ತಂಗಳವಾಡಿ ಒತ್ತಾಯಿಸಿದ್ದಾರೆ.
ಕಳೆದ ಡಿಸೆಂಬರ್ ತಿಂಗಳಲ್ಲಿ ಈ ಭಾಗದಲ್ಲಿ ಕಾಡಾನೆಗಳ ಹಾವಳಿ ನಡೆದಿತ್ತು. ಆಗಲು ರೈತರ ಬೆಳೆಗಳಿಗೆ ನಷ್ಟ ಉಂಟಾಗಿತ್ತು. ಮತ್ತೆ ಈಗ ಆನೆಗಳು ಹಾವಳಿ ನಡೆಸುತ್ತಿದ್ದರಿಂದ ರೈತರು ಬೆಳೆಯುತ್ತಿರುವ ಬೆಳೆಯನ್ನು ಸಂರಕ್ಷಿಸಿಕೊಳ್ಳುವುದು ಕಷ್ಟಕರವಾಗಿದೆ. ಆನೆಗಳನ್ನು ಓಡಿಸಲು ಅರಣ್ಯ ಇಲಾಖೆ ಶ್ರಮಿಸುತ್ತಿದೆ.
ಕಳೆದ ಒಂದು ವಾರದಿಂದ ಶಿವಮೊಗ್ಗ ತಾಲೂಕಿನ ಚೋರಡಿ ಹಾಗೂ ಅರಸರು ಭಾಗದಲ್ಲಿ ಆನೆಗಳು ಕಾಣಿಸಿಕೊಂಡಿದ್ದು, ಅರಣ್ಯ ಇಲಾಖೆ ಅಲ್ಲಿಂದ ಓಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಡಿ.9ರ ಸೋಮವಾರ ರಾತ್ರಿ ತಂಗಳವಾಡಿ ಭಾಗದಲ್ಲಿ ರೈತರ ತೋಟಗಳಿಗೆ ನುಗ್ಗಿ ಬೆಳೆಗಳನ್ನು ನಾಶಪಡಿಸುತ್ತಿವೆ.
ಅರಣ್ಯ ಇಲಾಖೆ ಸಿಬ್ಬಂದಿಗಳು ಸಿಡಿಮದ್ದು ಸಿಡಿಸುವುದರ ಮೂಲಕ ಆನೆಗಳನ್ನು ಈ ಭಾಗದಿಂದ ಓಡಿಸುವ ಪ್ರಯತ್ನ ಮಾಡುತ್ತಿರುವುದಾಗಿ ಅರಣ್ಯ ಇಲಾಖೆಯವರು ತಿಳಿಸಿದ್ದಾರೆ.