Advertisement

Udupi: ಶೀರೂರು ಪರ್ಯಾಯ: ಬಾಳೆ ಮುಹೂರ್ತ ಸಂಪನ್ನ

01:25 AM Dec 07, 2024 | Team Udayavani |

ಉಡುಪಿ: ಶ್ರೀಕೃಷ್ಣ ಮಠದಲ್ಲಿ 2026ರ ಜ. 18ರಂದು ಪರ್ಯಾಯ ಪೂಜಾ ದೀಕ್ಷಿತರಾಗಲಿರುವ ಶೀರೂರು ಮಠದ ಶ್ರೀ ವೇದವರ್ಧನತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಶುಕ್ರವಾರ ಪರ್ಯಾಯ ಪೂರ್ವದ ಪ್ರಥಮ ಮುಹೂರ್ತವಾದ ಬಾಳೆ ಮುಹೂರ್ತ ಸಂಪನ್ನಗೊಂಡಿತು.

Advertisement

ಮುಂಜಾನೆ ಶೀರೂರು ಮಠದಲ್ಲಿ ಪಟ್ಟದ ದೇವರ ಪೂಜೆಯ ಬಳಿಕ ಪ್ರಾರ್ಥನೆ ಸಲ್ಲಿಸಿ ಅನುಕ್ರಮವಾಗಿ ಚಂದ್ರೇಶ್ವರ, ಅನಂತೇಶ್ವರ, ಕೃಷ್ಣ ಮುಖ್ಯಪ್ರಾಣ, ಮಧ್ವಾಚಾರ್ಯರ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿ ರಥಬೀದಿಯಲ್ಲಿ ಒಂದು ಸುತ್ತು ಮೆರವಣಿಗೆ ಬಂದ ಬಳಿಕ ಶೀರೂರು ಮಠದಿಂದ ಚಿನ್ನದ ಪಾಲಕಿಯಲ್ಲಿ ಮಠದ ಪಟ್ಟದ ದೇವರನ್ನು ಮತ್ತು ಬಾಳೆಗಿಡಗಳನ್ನು ಹೊತ್ತು ಪೂರ್ಣಪ್ರಜ್ಞ ಕಾಲೇಜು ಆವರಣದ ಅಬಾjರಣ್ಯಕ್ಕೆ ಮೆರವಣಿಗೆಯಲ್ಲಿ ಸ್ವಾಮೀಜಿ, ಭಕ್ತ ವರ್ಗ ತೆರಳಿತು.

ಅಲ್ಲಿ ನಾಗನ ಸನ್ನಿಧಿಗೆ ಮಂಗಳಾರತಿ ಬೆಳಗಲಾಯಿತು. ಅಲ್ಲಿಂದ ಕಾಲೇಜು ಹಿಂಭಾಗದಲ್ಲಿರುವ ಮಠದ ಜಾಗಕ್ಕೆ ತೆರಳಿ ಸುಮುಹೂರ್ತದಲ್ಲಿ ಬಾಳೆಗಿಡ, ಕಬ್ಬು, ತುಳಸೀ ಗಿಡಗಳನ್ನು ನೆಡಲಾಯಿತು. ಕಂಬಕಟ್ಟ ಗಿರಿರಾಜ ಉಪಾಧ್ಯಾಯರು ಧಾರ್ಮಿಕ ವಿಧಿ ನೆರವೇರಿಸಿಕೊಟ್ಟರು. ಪಾರುಪತ್ಯೆದಾರ ಶ್ರೀಶ ಭಟ್‌,  ಪದ್ಮನಾಭ ಅವರು ಸಹಕರಿಸಿದರು.

ಆಶೀರ್ವಚನ ನೀಡಿದ ಶ್ರೀ ವೇದವರ್ಧನತೀರ್ಥ ಶ್ರೀಪಾದರು, ಮಧ್ವಾಚಾರ್ಯರು, ವಾದಿರಾಜಸ್ವಾಮಿಗಳು ಹಾಕಿಕೊಟ್ಟ ಸಂಪ್ರದಾಯದಂತೆ ಮೊದಲ ಮುಹೂರ್ತವು ಸಂಪನ್ನಗೊಂಡಿದೆ. ಮುಂದಿನ ದಿನಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿಯೂ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕೆಂದರು.

ಯಾವುದೇ ಸತ್ಕಾರ್ಯಗಳಿಗೆ ಬೆಂಬಲ ನೀಡುವುದೂ, ಉಪಸ್ಥಿತರಿರುವುದೂ ಪುಣ್ಯ ಕಾರ್ಯವೇ ಆಗಿದೆ ಎಂದು ಪ್ರಸ್ತಾವನೆಗೈದ ದಿವಾನ ಡಾ| ಉದಯ ಕುಮಾರ್‌ ಸರಳತ್ತಾಯ ಹೇಳಿದರು. ಅಶ್ವತ್ಥ ಭಾರದ್ವಾಜ್‌ ಕಾರ್ಯಕ್ರಮ ನಿರ್ವಹಿಸಿದರು.

Advertisement

ಶಾಸಕ ಯಶಪಾಲ್‌ ಸುವರ್ಣ, ಮಾಜಿ ಶಾಸಕರಾದ ಕೆ. ರಘುಪತಿ ಭಟ್‌, ಬಿ.ಎಂ. ಸುಕುಮಾರ ಶೆಟ್ಟಿ, ನಗರಸಭಾಧ್ಯಕ್ಷ ಪ್ರಭಾಕರ ಪೂಜಾರಿ, ಉಪಾಧ್ಯಕ್ಷೆ ರಜನಿ ಹೆಬ್ಟಾರ್‌, ಕಟೀಲು ದೇವಸ್ಥಾನದ ಲಕ್ಷ್ಮೀನಾರಾಯಣ ಆಸ್ರಣ್ಣ, ಗೋಪಾಲಕೃಷ್ಣ ಆಸ್ರಣ್ಣ, ವೆಂಕಟಕೃಷ್ಣ ಆಸ್ರಣ್ಣ, ಗಣ್ಯರಾದ ಪ್ರಸಾದರಾಜ್‌ ಕಾಂಚನ್‌, ಡಾ| ಕೃಷ್ಣಪ್ರಸಾದ್‌, ಹರಿಕೃಷ್ಣ ಪುನರೂರು, ಪ್ರದೀಪ್‌ ಕುಮಾರ್‌ ಕಲ್ಕೂರ, ಶ್ರೀಪತಿ ಭಟ್‌ ಮೂಡುಬಿದಿರೆ, ಉದಯಕುಮಾರ್‌ ಶೆಟ್ಟಿ, ಕೃಷ್ಣಮೂರ್ತಿ ಆಚಾರ್ಯ, ಬೈಕಾಡಿ ಸುಪ್ರಸಾದ ಶೆಟ್ಟಿ, ಬಾಲಾಜಿ ರಾಘವೇಂದ್ರಾಚಾರ್ಯ ಮೊದಲಾದವರು ಉಪಸ್ಥಿತರಿದ್ದರು.

ಮಾ. 6: ಅಕ್ಕಿ ಮುಹೂರ್ತ
ಶೀರೂರು ಮಠ ಪರ್ಯಾಯದ ಎರಡನೆಯ ಮುಹೂರ್ತವಾದ ಅಕ್ಕಿ ಮುಹೂರ್ತ ಮಾ. 6ರಂದು ನಡೆಯಲಿದೆ. ಎಂದು ಮಠದ ದಿವಾನ ಡಾ| ಉದಯ ಕುಮಾರ್‌ ಸರಳತ್ತಾಯ ಪ್ರಕಟಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next