ಉಡುಪಿ: ಶೀರೂರು ಮಠದ ಪರ್ಯಾಯ ಪೂರ್ವ ಬಾಳೆ ಮುಹೂರ್ತ ಡಿ.6ರ ಬೆಳಗ್ಗೆ 7 ಗಂಟೆಗೆ ಮಠಾಧೀಶರಾದ ಶ್ರೀ ವೇದವರ್ಧನತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ನಡೆಯಲಿದೆ ಎಂದು ಶ್ರೀಮಠದ ದಿವಾನರಾದ ಡಾ| ಉದಯ ಕುಮಾರ್ ಸರಳತ್ತಾಯ ತಿಳಿಸಿದರು.
ಶ್ರೀ ಮಠದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರ್ಯಾಯ ಪೀಠ ಏರುವ ಶ್ರೀಪಾದರು ಅದಕ್ಕೂ ಪೂರ್ವದಲ್ಲಿ ಕೆಲವು ಮುಹೂರ್ತಗಳನ್ನು ನೆರವೇರಿಸಲಿದ್ದಾರೆ.
ಅದರಂತೆ 2026ರ ಜ.18ರಿಂದ ಆರಂಭವಾಗುವ ಪರ್ಯಾಯಕ್ಕೆ ಪೂರ್ವ ಬಾಳೆ ಮುಹೂರ್ತ ನೆರವೇರಿಸಲಾಗುತ್ತದೆ. ಡಿ. 6ರ ಬೆಳಗ್ಗೆ 5.30ಕ್ಕೆ ಶ್ರೀಮಠದಲ್ಲಿ ವಿಟಲ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ, ಅನಂತರ ಶ್ರೀ ಕೃಷ್ಣ ಮುಖ್ಯಪ್ರಾಣ, ಶ್ರೀ ಅನಂತೇಶ್ವರ, ಶ್ರೀ ಚಂದ್ರಮೌಳೀಶ್ವರ ಮೊದಲಾದ ದೇವರಿಗೆ ವಿಶೇಷ ಪ್ರಾರ್ಥನೆ ನೆರವೇರಿಸಿ, ರಥಬೀದಿಯಿಂದ ಮೆರವಣಿಗೆ ಮೂಲಕ ಪೂರ್ಣಪ್ರಜ್ಞ ಕಾಲೇಜು ಸಮೀಪದಲ್ಲಿರುವ ಶೀರೂರು ಮಠದ ಜಾಗದಲ್ಲಿ ಬಾಳೆ ಗಿಡಗಳನ್ನು ನಡೆಸಲಾಗುವುದು ಎಂದು ವಿವರ ನೀಡಿದರು.
ಸಾಂಪ್ರದಾಯಿಕ ಮೆರವಣಿಗೆಯಲ್ಲಿ ಬೀರುದಾವಳಿ, ವೇದಘೋಷ, ನಾನಾ ವಾದ್ಯಗಳು ಇರಲಿವೆ. ಭಕ್ತರಿಗೂ ಬಾಳೆ ಗಿಡಗಳನ್ನು ನೆಡಲು ವಿತರಿಸಲಾಗುತ್ತದೆ. ಮೆರವಣಿಗೆಯಲ್ಲಿ ಭಕ್ತರು ಬಂದು ಬಾಳೆ ಗಿಡಗಳನ್ನು ನೆಡಬಹುದು. ಅದರ ಆರೈಕೆಯನ್ನು ಶ್ರೀಮಠದಿಂದ ಮಾಡಲಾಗುತ್ತದೆ. ಪಿಪಿಸಿ ಸಮೀಪದ ಜಾಗದಲ್ಲಿ ಸುಮಾರು 1 ಸಾವಿರ ಹಾಗೂ ಶೀರೂರು ಮೂಲ ಮಠದಲ್ಲಿ ಸುಮಾರು 14 ಸಾವಿರ ಬಾಳೆ ಗಿಡಗಳನ್ನು ನೆಟ್ಟು, ಅದರ ಅದರ ಎಲೆಯಲ್ಲೇ ಶ್ರೀ ದೇವರಿಗೆ ಪರ್ಯಾಯ ಸಂದರ್ಭದಲ್ಲಿ ನೈವೇದ್ಯ ಇಡುವ ಸಂಕಲ್ಪವನ್ನೂ ಮಾಡಲಾಗಿದೆ ಎಂದು ಹೇಳಿದರು.
ಇದು ಪ್ರಾಣದೇವರ ಪರ್ಯಾಯವಾದ್ದರಿಂದ ಡಿ.14 ಮತ್ತು 15ರಂದು ಶೀರೂರು ಮೂಲ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಮುಖ್ಯವಾಗಿ ರಾಮತಾರಕ ಯಜ್ಞ, ಮನ್ಯೂಸೂಕ್ತ ಹೋಮ, ವಾಯುಸೂಕ್ತ ಹೋಮ ಇತ್ಯಾದಿಗಳು ಜರಗಲಿದೆ. ಶ್ರೀಪಾದರು ಈಗಾಗಲೇ ಉತ್ತರ ಭಾರತ, ನೇಪಾಲ ಪ್ರವಾಸ ಪೂರೈಸಿ ಆಂಧ್ರ ಪ್ರದೇಶದಲ್ಲಿದ್ದಾರೆ. ಬೆಂಗಳೂರು ಮಾರ್ಗವಾಗಿ ಊರಿಗೆ ಬರಲಿದ್ದಾರೆ ಎಂದರು.
ಶಾಸಕ ಯಶ್‌ಪಾಲ್ ಎ.ಸುವರ್ಣ ಮಾತನಾಡಿ, ಶ್ರೀ ಶೀರೂರು ಮಠದ ಪರ್ಯಾಯ ಪೂರ್ವ ಮೊದಲ ಮುಹೂರ್ತವಾದ ಬಾಳೆ ಮುಹೂರ್ತ ಕಾರ್ಯಕ್ರಮಕ್ಕೆ ಎಲ್ಲರೂ ಜೋಡಿಸಿಕೊಳ್ಳುವಂತೆ ಕರೆ ನೀಡಿದರು.
ಪ್ರಮುಖರಾದ ಶ್ರೀಕಾಂತ್ ನಾಯಕ್, ಮೋಹನ್ ಭಟ್, ಶ್ರೀಶ ಭಟ್ ಕಡೆಕಾರ್, ಗೋವಿಂದ ಆಚಾರ್ಯ, ವಾಸುದೇವ ಆಚಾರ್ಯ ಉಪಸ್ಥಿತರಿದ್ದರು.