Advertisement

Karkala: ದಿನವೂ ಸುರಿಯುವ ಸಣ್ಣ ಮಳೆ; ಸಂಕಷ್ಟದಲ್ಲಿದೆ ಕೃಷಿ ಬೆಳೆ

01:32 PM Dec 11, 2024 | Team Udayavani |

ಕಾರ್ಕಳ: ಫೈಂಜಾಲ್‌ ಚಂಡಮಾರುತದ ಬಳಿಕ ಪರಿಣಾಮ ಕಳೆದ ಒಂದು ವಾರದಿಂದ ಬಿಟ್ಟುಬಿಟ್ಟು ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ಕಾರ್ಕಳ, ಹೆಬ್ರಿ ಸೇರಿದಂತೆ ಮೊದಲಾದ ಭಾಗದಲ್ಲಿ ರೈತಾಪಿ ವರ್ಗಕ್ಕೆ ನಾನಾ ರೀತಿಯ ಸಂಕಷ್ಟಗಳು ಎದುರಾಗುತ್ತಿದೆ.

Advertisement

ಅಡಿಕೆ ಬೆಳೆಗಾರರಿಗೆ ಕೊಯ್ಲೋತ್ತರ ನಷ್ಟ ಸಂಭವಿಸುತ್ತಿದೆ. ಮಳೆಯಿಂದಾಗಿ ಅಡಿಕೆ ಒಣಗಿಸಲು ಸಮಸ್ಯೆಯಾಗುತ್ತಿದೆ. ಭತ್ತ ಬೆಳೆಗಾರರು ಕಟಾವು ಪೂರ್ಣಗೊಳಿಸಿದ್ದ ಅನಂತರ ತೆಗೆದಿರಿಸಿದ ಬೈಹುಲ್ಲು ಮಳೆಗೆ ಒದ್ದೆಯಾಗಿ ಹಾನಿಯಾಗುತ್ತಿದೆ.

ಕಾರ್ಕಳದಲ್ಲಿ 5,198 ಹೆಕ್ಟೇರ್‌, ಹೆಬ್ರಿ ಭಾಗದಲ್ಲಿ 1,129 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬಿತ್ತನೆಯಾಗಿತ್ತು. ಹೆಚ್ಚಿನವರು ಕಟಾವು ಪೂರ್ಣಗೊಳಿಸಿದ್ದರೂ ಬೈಹುಲ್ಲು ವಿಲೇವಾರಿ ನಡೆದಿಲ್ಲ. ಅದು ಒದ್ದೆಯಾಗಿ ಸಮಸ್ಯೆಯಾಗಿದೆ. ತೋಟಗಾರಿಕೆ ಇನ್ನಿತರೆ ಬೆಳೆಗಳಾದ ಬಾಳೆ, ತೆಂಗು, ತರಕಾರಿ ಬೆಳೆಗಳಿಗೆ ಅಕಾಲಿಕ ಮಳೆಯಿಂದ ಯಾವುದೇ ಸಮಸ್ಯೆಯಾಗಿಲ್ಲ.

ರೈತರ ಗೋಳು ಸರಕಾರಕ್ಕೆ ತಿಳಿಯಲಿ
ಅಕಾಲಿಕ ಮಳೆಯಿಂದ ಆಗುವ ತೊಂದರೆಗಳ ಬಗ್ಗೆ ಸರಕಾರ ವಿಶೇಷ ಗಮನಹರಿಸಬೇಕು. ಇಲಾಖೆ ಮೂಲಕ ಪ್ರತೀ ಗ್ರಾಮಗಳಲ್ಲಿ ರೈತರಿಗೆ ಪ್ರಾಕೃತಿಕವಾಗಿ ಸಂಭವಿಸಿದ ನಷ್ಟದ ಬಗ್ಗೆ ವರದಿ ರೂಪಿಸಿ ಸೂಕ್ತ ಪರಿಹಾರ ನೀಡಬೇಕು ಎನ್ನುತ್ತಾರೆ ಸ್ಥಳೀಯ ಕೃಷಿಕರೂ ಆದ, ಜಿಲ್ಲಾ ಭಾರತೀಯ ಕಿಸಾನ್‌ ಸಂಘದ ಕಾರ್ಯದರ್ಶಿ ವಿಶ್ವನಾಥ್‌ ಶೆಟ್ಟಿ.

ಅಡಿಕೆಗೆ ರೋಗ ಭೀತಿ
ಕಾರ್ಕಳ ತಾಲೂಕಿನಾದ್ಯಂತ 20 ಸಾವಿರಕ್ಕೂ ಅಧಿಕ ಸಣ್ಣ, ದೊಡ್ಡ ರೈತರು ಅಡಿಕೆ ಕೃಷಿಯನ್ನು ಅವಲಂಬಿಸಿದ್ದಾರೆ. 8, 500 ಹೆಕ್ಟೇರ್‌ ಜಾಗದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಇಲ್ಲಿ ಕೊಯ್ಲು ಮಾಡಿದ ಅಡಕೆಯನ್ನು ಒಣಗಿಸಲು ಸಮಸ್ಯೆಯಾಗುತ್ತಿರುವುದು ಒಂದು ಕಡೆಯಾದರೆ, ಇನ್ನೊಂದೆಡೆ ಮಳೆಯಿಂದಾಗಿ ಹಿಂಗಾರಕ್ಕೆ ಸಮಸ್ಯೆಯಾಗುವ ಆತಂಕ ಎದುರಾಗಿದೆ. ಹಿಂಗಾರದಲ್ಲಿ ನೀರು ನಿಂತರೆ ಮುಂದಿನ ವರ್ಷದ ಫ‌ಸಲಿನ ಮೇಲೆ ಪರಿಣಾಮ ಬೀರಲಿದೆ. ಜತೆಗೆ ಎಲೆ ಚುಕ್ಕಿ ರೋಗದ ಭೀತಿಯೂ ಎದುರಾಗಿದೆ.

Advertisement

ಹಾನಿಯಾದಲ್ಲಿ ಸೂಕ್ತ ಪರಿಹಾರ
ಅಕಾಲಿಕ ಮಳೆ ವಾತಾವರಣ ಕೆಲವು ದಿನಗಳು ಹೀಗೇ ಮುಂದುವರಿದಲ್ಲಿ ಅಡಿಕೆಗೆ ಎಲೆ ಚುಕ್ಕಿ ರೋಗ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಈ ನಿಟ್ಟಿನಲ್ಲಿ ಬೆಳೆಗಾರರು ಸೂಕ್ತ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳಬೇಕು. ತೋಟಗಾರಿಕೆ ಇಲಾಖೆಯಿಂದ ಇದಕ್ಕೆ ಸೂಕ್ತ ಮಾರ್ಗದರ್ಶನ ನೀಡಲಾಗುತ್ತದೆ. ಅಕಾಲಿಕ ಮಳೆ ಸಂದರ್ಭ ಬೆಳೆಗಳಿಗೆ ಹಾನಿಯಾದಲ್ಲಿ ಸೂಕ್ತ ಪರಿಹಾರವನ್ನು ಪಡೆಯಬಹುದು.
-ಶ್ರೀನಿವಾಸ್‌, ಸಹಾಯಕ ನಿರ್ದೇಶಕರು, ಕಾರ್ಕಳ ತೋಟಗಾರಿಕೆ ಇಲಾಖೆ.

-ಅವಿನ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next