ಸಾಗರ: ತಾಲೂಕಿನ ಸಾಗರ ಹಾಗೂ ಅಂಬ್ಲಿಗೊಳ ಅರಣ್ಯ ವಲಯದ ಕೊರ್ಲಿಕೊಪ್ಪ, ಇಡುವಳ್ಳಿ, ಭೀಮನಕೆರೆ, ನಾಡವಳ್ಳಿ ಗ್ರಾಮದ ತೋಟಗಳಿಗೆ 3 ಕಾಡಾನೆಗಳು ದಾಳಿ ನಡೆಸಿದ್ದು ರೈತರು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುವಂತಾಗಿದೆ.
ಸೋಮವಾರದಿಂದ ಅಡಿಕೆ ತೋಟಗಳಿಗೆ ಕಾಡಾನೆಗಳು ಲಗ್ಗೆ ಇಟ್ಟಿದ್ದು ಎರಡು ದಿನಗಳಿಂದ ತೋಟದಲ್ಲಿರುವ ಬಾಳೆಗಿಡಗಳನ್ನು ಸರ್ವನಾಶ ಮಾಡಿವೆ.
ಬುಧವಾರ ಸ್ಥಳಕ್ಕೆ ಡಿಎಫ್‌ಓ ಮೋಹನ್ ಕುಮಾರ್, ಎಸಿಎಫ್ ರವಿ, ಸಾಗರ ವಲಯ ಅರಣ್ಯಾಧಿಕಾರಿ ಅಣ್ಣಪ್ಪ, ಸಾಗರ ಹಾಗೂ ಅಂಬ್ಲಿಗೊಳ ಅರಣ್ಯ ಇಲಾಖಾ ಸಿಬ್ಬಂದಿಗಳು ಭೇಟಿ ನೀಡಿ ಆನೆಗಳು ಅರಣ್ಯ ಪ್ರದೇಶಗಳಿಗೆ ಹೋಗಲು ಸಹಕಾರಿಯಾಗುವಂತಹ ಎಲ್ಲಾ ಕ್ರಮಗಳನ್ನು ಕೈಗೊಳ್ಳುವುದಾಗಿ ರೈತರಿಗೆ ಭರವಸೆ ನೀಡಿದ್ದಾರೆ.
ಚೋರಡಿ ಹಾಗೂ ಹೆನೆಗೇರಿಕಟ್ಟೆ ಅರಣ್ಯಗಳಿಂದ ಆನೆಗಳು ಬಂದಿರುವ ಶಂಕೆಯಿದ್ದು ಹೆಜ್ಜೆಗುರುತು ಹಾಗೂ ತೋಟಗಳ ನಾಶ ಮಾತ್ರ ಕಂಡಿದ್ದು ಆನೆಗಳು ಕಂಡಿಲ್ಲ. ತಂಡವನ್ನು ರಚಿಸಿ ಅರಣ್ಯದ ಗಸ್ತು ತಿರುಗಿ ಕಾಡಾನೆಗಳನ್ನು ಹುಡುಕಿ ಬಂದ ಜಾಗಕ್ಕೆ ಹಿಂದಿರುಗಿಸುವ ಪ್ರಯತ್ನ ನಡೆಸುವುದಾಗಿ ಡಿಎಫ್‌ಓ ಮೋಹನ್ ತಿಳಿಸಿದರು.
ಎರಡು ದಿನಗಳಿಂದ ಕಾಡಾನೆಗಳು ರೈತರ ತೋಟಗಳಿಗೆ ನುಗ್ಗಿ ದಾಂಧಲೆ ನಡೆಸುತ್ತಿರುವ ಬಗ್ಗೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳ ಗಮನಕ್ಕೆ ತಂದಾಗ ತಕ್ಷಣ ಸ್ಪಂದಿಸಿದ್ದಾರೆ.
ಇಂತಹ ಹಾವಳಿಗಳಿಂದ ರೈತರು ನಷ್ಟ ಅನುಭವಿಸುವ ಮೊದಲೇ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಸಾಗರ ತಾಲ್ಲೂಕು ಕೃಷಿಕ ಸಮಾಜದ ನಿರ್ದೇಶಕರಾದ ಜೇಕಬ್ ಇಡುವಳ್ಳಿ ಹೇಳಿದರು.