Advertisement
ಪ್ರಸ್ತುತ ಖಾಸಗಿ ವೈದ್ಯ ಸಂಸ್ಥೆಗಳನ್ನು ಸರ್ಕಾರದ ನಿಯಂತ್ರಣಕ್ಕೆ ತರುವ ಕೆಪಿಎಂಇ ಕಾಯ್ದೆ ವಿರೋಧಿಸಿ ರಾಜ್ಯಾದ್ಯಂತ ಖಾಸಗಿ ವೈದ್ಯರು ನಡೆಸುತ್ತಿರುವ ಮುಷ್ಕರಕ್ಕೆ ನಲುಗಿರುವ ರೋಗಿಗಳು, ಸರ್ಕಾರಿ ಆಸ್ಪತ್ರೆಗಳ ಕಡೆ ಗುರುವಾರ ಮುಕಮಾಡಿದರು. ಇದರ ಪರಿಣಾಮ ನಗರದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಶೇ.5ರಿಂದ 10ರಷ್ಟು ಹೊರರೋಗಿಗಳು ಸಂಖ್ಯೆ ಹೆಚ್ಚಾಗಿದೆ.
Related Articles
Advertisement
ಈ ಸಂಬಂಧ ಈ ಎಲ್ಲಾ ಆಸ್ಪತ್ರೆಗಳಲ್ಲಿ ಹೊರ ರೋಗಿಗಳು ಹಾಗೂ ಒಳ ರೋಗಿಗಳು ಶೇಕಡ ಪ್ರಮಾಣದಲ್ಲಿ ಅಧಿಕವಾಗಿದ್ದರು. ಆದರೂ ಸರ್ಕಾರಿ ಆಸ್ಪತ್ರೆ ವೈದ್ಯರು ಪ್ರತಿಯೊಬ್ಬರಿಗೂ ಸೂಕ್ತ ರೀತಿಯಲ್ಲಿ ಚಿಕಿತ್ಸೆ ನೀಡಿದ್ದಾರೆ. ಬೌರಿಂಗ್ ಆಸ್ಪತ್ರೆಯಲ್ಲಿ ನಿತ್ಯ 1500ರಿಂದ 2000 ಸಾವಿರ ಮಂದಿ ಹೊರರೋಗಿಗಳು ಆಗಮಿಸುತ್ತಾರೆ.
ಆದರೆ, ಗುರುವಾರ ಮಾತ್ರ ಇದರ ಸಂಖ್ಯೆ ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಾಗಿದ್ದು, 2,200ಕ್ಕೆ ಏರಿಕೆಯಾಗಿದೆ. ಹಾಗೇ ಒಳ ರೋಗಿಗಳ ವಿಭಾಗದಲ್ಲಿ 70ರಿಂದ 85ಕ್ಕೆ ಹೆಚ್ಚಳವಾಗಿದೆ. ಇನ್ನು ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಸುಮಾರು 100ಕ್ಕೂ ಅಧಿಕ ಮಂದಿ ಹೊರ ರೋಗಿಗಳು ಚಿಕಿತ್ಸೆ ಪಡೆದುಕೊಂಡಿದ್ದಾರೆ. ಇನ್ನುಳಿದ್ದಂತೆ ಒಳ ರೋಗಿಗಳ ವಿಭಾಗದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.
ವಿಕ್ಟೋರಿಯಾದಲ್ಲಿ 10ರಿಂದ 15ರಷ್ಟು ಮತ್ತು ಮಿಂಟೋ ಆಸ್ಪತ್ರೆಯಲ್ಲಿ ಶೇ.5ರಿಂದ 10ರಷ್ಟು ರೋಗಿಗಳು ಚಿಕಿತ್ಸೆ ಪಡೆದು ಹೋಗಿದ್ದಾರೆ. ಇನ್ನು ಜಯದೇವ ಹೃದ್ರೋಗ ಆಸ್ಪತ್ರೆಗೆ ಸಾಮಾನ್ಯವಾಗಿ 1200ರಿಂದ 1500 ಹೊರ ರೋಗಿಗಳು ಬರುತ್ತಾರೆ. ಗುರುವಾರ ಕೂಡ ಅಷ್ಟೇ ಪ್ರಮಾಣದಲ್ಲಿ ಬಂದಿದ್ದರು.
ನಗರದ ಏಕೈಕ ಕ್ಯಾನ್ಸರ್ ಆಸ್ಪತ್ರೆ ಕಿದ್ವಾಯಿಯಲ್ಲಿ ಶೇ.10ರಷ್ಟು ಹೊರರೋಗಿಗಳು ಹೆಚ್ಚಾಗಿದ್ದರು. ಇನ್ನು ಇಎಸ್‌ಐ ಆಸ್ಪತ್ರೆಯಲ್ಲಿ ಕಾರ್ಮಿಕರು ಹಾಗೂ ಅವರ ಕುಟುಂಬದವರು ಮಾತ್ರವಲ್ಲದೇ ಬೇರೆ ರೋಗಿಗಳಿಗೂ ಚಿಕಿತ್ಸೆ ನೀಡಲಾಗಿದೆ. ಆದರೆ, ಎಲ್ಲಿಯೂ ಒತ್ತಡದಿಂದ ಕೆಲಸ ಮಾಡಿಲ್ಲ.
ಸಾಮಾನ್ಯವಾಗಿ ಎಂದಿನಂತೆ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಇನ್ನುಳಿದ್ದಂತೆ ಬಿಬಿಎಂಪಿ ಆಸ್ಪತ್ರೆ ಹೆಚ್ಚಿನ ಸೇವೆ ಒದಗಿಸಲಾಗಿದೆ. ಎಲ್ಲಿಯೂ ಕೂಡ ಒತ್ತಡದಲ್ಲಿ ಕೆಲಸ ಮಾಡಿಲ್ಲ. ಸಾಮಾನ್ಯವಾಗಿ ಎಂದಿನಂತೆ ನಡೆದುಕೊಂಡಿದೆ ಎಂದು ಆಸ್ಪತ್ರೆಗಳ ಮುಖ್ಯಸ್ಥರು “ಉದಯವಾಣಿ’ಗೆ ತಿಳಿಸಿದ್ದಾರೆ.
ಹೃದಯಾಘಾತವಾದರೂ ದಾಖಲಿಸಿಕೊಳ್ಳಿಲ್ಲ: ಖಾಸಗಿ ಆಸ್ಪತ್ರೆಗಳ ವೈದ್ಯರ ಪ್ರತಿಭಟನೆಯ ಬಿಸಿ ನಗರದ ಜನತೆಗೂ ತಟ್ಟಿದ್ದು, ಎರಡು ಅಮಾಯಕ ಜೀವವನ್ನು ಬಲಿತೆಗೆದುಕೊಂಡಿದೆ. ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದ ಚಂದ್ರಾ ಲೇಔಟ್‌ನ ಸತೀಶ್ (45) ಚಿಕಿತ್ಸೆಗಾಗಿ ಮೂರು ಆಸ್ಪತ್ರೆ ಅಲೆದು ಕೊನೆಯುಸಿರೆಳೆದಿದ್ದಾರೆ.
ಹಠಾತ್ ಎದೆನೋವು ಕಾಣಿಸಿಕೊಂಡಾಗ ಮನೆಯವರು ಸತೀಶ್‌ರನ್ನು ಚಾಮರಾಜಪೇಟೆಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ದಾಖಲಿಸಿಕೊಂಡಿಲ್ಲ. ಬಸವನಗುಡಿಯ ಇನ್ನೊಂದು ಖಾಸಗಿ ಆಸ್ಪತ್ರೆಯವರೂ ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ. ಕಡೆಗೆ ಜಯದೇವ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಸತೀಶ್ ಮೃತಪಟ್ಟರು.
ಗುರುವಾರ ಬೆಳಗ್ಗೆ 11 ಗಂಟೆಗೆ ಸಹೋದರ ಫೈರೋಜ್ ತೀವ್ರ ಜ್ವರದಿಂಧ ಅಸ್ವಸ್ಥನಾಗಿದ್ದ. ಕೂಡಲೇ ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರೆ, ವೈದ್ಯರೆಲ್ಲರೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಚಿಕಿತ್ಸೆ ನೀಡುವುದಿಲ್ಲ ಎಂದರು. ಮಧ್ಯಾಹ್ನ ಂದು ಗಂಟೆ ಹೊತ್ತಿಗೆ ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದ್ದು, ಚೇತರಿಸಿಕೊಂಡಿದ್ದಾನೆ-ಸೈಯದ್ ಮೊಹಮ್ಮದ್, ಶಿವಾಜಿನಗರ ಮಹಡಿಯಲ್ಲಿ ಕೆಲಸ ಮಾಡುವಾಗ ನಮ್ಮ ಅಳಿಯ ರಾಘವೇಂದ್ರ ಆಯತಪ್ಪಿ ಬಿದ್ದು ಕೈ ಮತ್ತು ಕಾಲಿಗೆ ಗಾಯವಾಗಿತ್ತು. ರಾಜಾಜಿನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರೆ ಚಿಕಿತ್ಸೆ ನೀಡಲಿಲ್ಲ. ಬಳಿಕ ಕೆ.ಸಿ.ಜನರಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದೇನೆ. ಇದೇ ಸ್ಥಿತಿ ವೈದ್ಯರು, ಅವರ ಮಕ್ಕಳು ಅಥವಾ ಕುಟುಂಬದ ಸದಸ್ಯರಿಗಾದರೆ ಏನು ಮಾಡುತ್ತಾರೆ?
-ಭಾಗ್ಯಮ್ಮ, ರಾಜಾಜಿನಗರ ಸರ್ಕಾರದ ಸೂಚನೆ ಮೇರೆಗೆ ಆಸ್ಪತ್ರೆಯ ವೈದ್ಯರು ಹಾಗೂ ಇತರ ಸಿಬ್ಬಂದಿಯ ರಜೆ ರದ್ದು ಮಾಡಿದ್ದು, ದಿನದ 24 ಗಂಟೆ ಸೇವೆ ಸಲ್ಲಿಸುತ್ತಿದ್ದಾರೆ. ಎಂದಿನ ದಿನಗಳಿಗೆ ಹೋಲಿಸಿದರೆ ಗುರುವಾರ ಹೊರ ರೋಗಿಗಳ ಪ್ರಮಾಣದಲ್ಲಿ ಶೇ.10ರಷ್ಟು ಹೆಚ್ಚಳ ಕಂಡುಬಂದಿದೆ.
-ಡಾ. ಮಂಜುನಾಥ್, ಬೌರಿಂಗ್ ಆಸ್ಪತ್ರೆ ನಿರ್ದೇಶಕ