ಕೊಟ್ಟಿಗೆಹಾರ: ಇತ್ತೀಚೆಗೆ ರಾಜ್ಯದಲ್ಲಿ ಸರ್ಕಾರಿ ಡಕೋಟಾ ಬಸ್‌ಗಳ ಸಂಖ್ಯೆ ಹೆಚ್ಚಾಗಿ ಎಲ್ಲೆಂದರಲ್ಲಿ ಕೆಟ್ಟು ನಿಲ್ಲುತ್ತಿದ್ದು ಪ್ರಯಾಣಿಕರು ಆತಂಕ್ಕೀಡಾಗುವಂತಾಗಿದೆ. ಬಯಲು ಸೀಮೆ ಭಾಗದಲ್ಲಿ ಬಸ್ ಕೆಟ್ಟು ನಿಂತರೆ ಭಯ ಬೀಳುವ ಅಗತ್ಯವಿಲ್ಲ.
ಆದರೆ ಮಲೆನಾಡಲ್ಲಿ ಅದರಲ್ಲೂ ಕಾಡಿನ ಮಾರ್ಗದಲ್ಲಿ ಬಸ್ ಕೆಟ್ಟರೆ ಜನ ಆತಂಕಕ್ಕೀಡಾಗಬೇಕಾಗುತ್ತದೆ. ಗುರುವಾರ ಕೂಡ ಮಂಗಳೂರಿನಿಂದ ಚಿಕ್ಕಮಗಳೂರಿಗೆ ಬರುತ್ತಿದ್ದ ಸರ್ಕಾರಿ ಬಸ್ ಚಾರ್ಮಾಡಿ ಘಾಟಿಯ ದಟ್ಟ ಕಾನನದ ಮಧ್ಯೆ ಕೆಟ್ಟು ನಿಂತಿದ್ದು ಸಾರ್ವಜನಿಕರ ಆಕ್ರೋಶ-ಆತಂಕಕ್ಕೆ ಕಾರಣವಾಗಿದೆ. ಚಾರ್ಮಾಡಿ ಘಾಟಿ ದಟ್ಟ ಕಾನನದ ಮಾರ್ಗ.
ಈ ಮಾರ್ಗದ ಸಂಚಾರ ಹಗಲು-ರಾತ್ರಿ ಎರಡೂ ಹೊತ್ತಲ್ಲೂ ಕಷ್ಟ ಹಾಗೂ ಆತಂಕವೇ ಸರಿ. ಚಾರ್ಮಾಡಿ ಘಾಟಿಯಲ್ಲಿ ಹಗಲು-ರಾತ್ರಿ ಎನ್ನದೆ ಎಲ್ಲೆಂದರಲ್ಲಿ, ಯಾವಾಗೆಂದರೆ ಆವಾಗ ಕಾಡಾನೆ ಹಾವಳಿ ಇದೆ. ಕೆಲವರು ಅಪಾಯದಿಂದ ಜಸ್ಟ್ ಮಿಸ್ ಆಗಿದ್ದಾರೆ.
ಕೆಲವರು ಗಾಡಿ ವಾಪಸ್ ತಿರುಗಿಸಿದ್ದಾರೆ. ಕೆಲವರು ಗಂಟೆಗಟ್ಟಲೆ ನಿಂತಲ್ಲೇ ನಿಂತಿದ್ದಾರೆ. ಇಂತಹ ಅಪಾಯದ ರಸ್ತೆಯಲ್ಲಿ ಸರ್ಕಾರಿ ಬಸ್ ಕೆಟ್ಟು ನಿಂತಿದ್ದರಿಂದ ಜನ ಆಕ್ರೋಶ ಹೊರಹಾಕಿದ್ದಾರೆ.