Advertisement

ಉಗ್ರನ ಸೆರೆಗೆ ಅತಿವೃಷ್ಟಿ ಕಾರಣ

12:45 PM Oct 13, 2018 | Team Udayavani |

ಬೆಂಗಳೂರು: ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರಿಂದ ಬಂಧನವಾಗಿರುವ ಲಷ್ಕರೆ-ಇ-ತೊಯ್ಬಾ ಸಂಘಟನೆ ಉಗ್ರ ಪಿ.ಎ.ಸಲೀಂ ಇತ್ತೀಚೆಗೆ ಕೇರಳದಲ್ಲಿ ಸಂಭವಿಸಿದ ನೆರೆ ಸಂದರ್ಭದಲ್ಲಿ ಕಣ್ಣೂರಿನ ಪಿಣರಾಯಿ ಕಾಡಿನಿಂದ ಹೊರಬಂದಿದ್ದು, ಈ ಮಾಹಿತಿ ಪಡೆದು ಬಂಧಿಸಲಾಯಿತು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Advertisement

2008ರಲ್ಲಿ ನಡೆದ ಸ್ಫೋಟದ ಬಳಿಕ ಗಲ್ಫ್ ದೇಶಗಳಲ್ಲಿ ತಲೆಮರೆಸಿಕೊಂಡಿದ್ದ. ಅಂದಿನಿಂದ ರಾಜ್ಯ ಪೊಲೀಸರ ಜತೆಗೆ ಕೇಂದ್ರ ಗುಪ್ತಚರ ಇಲಾಖೆ ಮತ್ತು ರಾ ಅಲ್ಲದೆ ನಾನಾ ತನಿಖಾ ಸಂಸ್ಥೆಗಳು ಈತನ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ್ದವು. ಕೇರಳ ಪೊಲೀಸರಿಗೂ ಪತ್ತೆಯಾಗಿರಲಿಲ್ಲ. ಆದರೆ, ಕೆಲ ವರ್ಷಗಳಿಂದ ಪಿಣರಾಯಿ ಅರಣ್ಯದಲ್ಲಿ ತಲೆಮರೆಸಿಕೊಂಡಿದ್ದ ಮಾಹಿತಿ ತನಿಖಾ ಸಂಸ್ಥೆಗಳಿಗೆ ಸಿಕ್ಕಿತ್ತು. ಆದರೆ, ಬಂಧನ ಸಾಧ್ಯವಾಗಿರಲಿಲ್ಲ.

ಈ ಮಧ್ಯೆ ಕೆಲ ತಿಂಗಳ ಹಿಂದೆ ಕೇರಳದಲ್ಲಿ ಸಂಭವಿಸಿದ ಜಲಪ್ರಳಯದಿಂದ ಕಾಡಿನಲ್ಲಿ ಭೂಕುಸಿತ ಉಂಟಾಗಿತ್ತು. ಇದರಿಂದ ಆತಂಕಗೊಂಡ ಸಲೀಂ ತನ್ನ ಸ್ಥಳ ಬದಲಾವಣೆಗೆ ಸಂಬಂಧಿಯೊಬ್ಬರನ್ನು ಸಂಪರ್ಕಿಸಿ, ನಾಡಿನೊಳಗೆ ಬಂದಿದ್ದ. ಈತ ರಹಸ್ಯವಾಗಿ ಕೇರಳದಲ್ಲಿ ಓಡಾಡುತ್ತಿರುವ ಮಾಹಿತಿ ಅರಿತ ಕೇರಳ ಪೊಲೀಸರು ಬೆಂಗಳೂರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅಲ್ಲದೆ, ಆರೋಪಿ ಆಗಾಗ್ಗೆ ಪಿಣರಾಯಿಯಲ್ಲಿರುವ ತನ್ನ ಮನೆಗೆ ಬಂದು ಹೋಗುತ್ತಿದ್ದ.
 
ಕಾಡಿನಿಂದಲೇ ಸಂಘಟನೆ: ಕಳೆದ ಆರೇಳು ವರ್ಷಗಳಿಂದ ಆರೋಪಿ ಕಾಡಿನಲ್ಲೇ ವಾಸವಾಗಿದ್ದ. ವೇಷ ಬದಲಿಸಿ ಅಪರೂಪಕ್ಕೊಮ್ಮೆ ಮಾತ್ರ ನಾಡಿನೊಳಗೆ ಬಂದು ಹೋಗುತ್ತಿದ್ದ. ಕಾಡಿನಿಂದಲೇ ಪಾಕಿಸ್ತಾನ, ಆಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಸಕ್ರಿಯವಾಗಿರುವ ತನ್ನ ಲಷ್ಕರೆ-ಇ-ತೊಯ್ಬಾ ಸಂಘಟನೆ ಕಾರ್ಯಕರ್ತರ ಜತೆ ನಿರಂತರ ಸಂಪರ್ಕದಲ್ಲಿದ್ದ. ಜತೆಗೆ ತನ್ನ ವಿರುದ್ಧ ಇರುವ ಕೆಲ ತಾಂತ್ರಿಕ ಸಾಕ್ಷ್ಯಗಳನ್ನು ನಾಶಪಡಿಸಿದ್ದಾನೆ. ಆದರೆ, ಕೆಲ ಸಾಕ್ಷ್ಯಗಳನ್ನು ಬೇರೆಡೆ ಮುಚ್ಚಿಟ್ಟಿರುವ ಸಾಧ್ಯತೆಗಳಿವೆ. ಇನ್ನು ಬಿಡುವಿದ್ದ ವೇಳೆಯಲ್ಲಿ ಈ ಮೊದಲಿನಂತೆ ಸರ್ಕ್ನೂಟ್‌ ತಯಾರು ಮಾಡುತ್ತಿದ್ದ ಎಂದು ಮೂಲಗಳು ತಿಳಿಸಿವೆ.

ರೆಡ್‌ಕಾರ್ನರ್‌ ನೋಟಿಸ್‌: ಪಿ.ಎ.ಸಲೀಂ ವಿರುದ್ಧ ಕೇಂದ್ರ ಗುಪ್ತಚರ ಇಲಾಖೆ ಮತ್ತು ರಾ ಈ ಹಿಂದೆ ರೆಡ್‌ ಕಾರ್ನರ್‌ ನೋಟಿಸ್‌ ಹೊರಡಿಸಿತ್ತು. ಇದನ್ನು ಅರಿತ ಸಲೀಂ ಗಲ್ಫ್ ದೇಶಗಳಿಂದ ರಹಸ್ಯ ಮಾರ್ಗವಾಗಿ ಕೇರಳ ಸೇರಿಕೊಂಡಿದ್ದ. ಹೀಗಾಗಿ ಈತನ ಬಳಿಯಿರುವ ಪಾಸ್‌ಪೋರ್ಟ್‌ ಬಗ್ಗೆ ಪರಿಶೀಲನೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
 
ತನಿಖೆಗೆ ಸಹಕರಿಸದ ಸಲೀಂ: ಆರೋಪಿ ಸಲೀಂ ಸಿಸಿಬಿ ಪೊಲೀಸರ ತನಿಖೆಗೆ ಸಹಕಾರ ನೀಡುತ್ತಿಲ್ಲ ಎಂದು ಹೇಳಲಾಗಿದೆ. ಆರೋಪಿಗೆ ಕನ್ನಡ, ಇಂಗ್ಲೀಷ್‌ ಮತ್ತು ತಮಿಳು ಭಾಷೆಗಳು ಅರ್ಥವಾಗುತ್ತಿದ್ದು, ಮಾತನಾಡುವುದಿಲ್ಲ. ಆದರೆ, ಮಲಾಯಳಂನಲ್ಲಿ ಮಾತ್ರ ಉತ್ತರಿಸುತ್ತಾನೆ. ಆರೋಪಿ ಸ್ಫೋಟಕ್ಕೂ ಮೊದಲು ತನ್ನ ಸಂಘಟನೆ ಸದಸ್ಯರ ಜತೆ ಬೆಂಗಳೂರಿಗೆ ಬಂದಿರುವುದಾಗಿ ಒಪ್ಪಿಕೊಳ್ಳುವ ಸಲೀಂ ಸ್ಫೋಟದ ಬಗ್ಗೆ ಮಾಹಿತಿ ಇಲ್ಲ ಎಂದು ಸುಳ್ಳು ಹೇಳುತ್ತಿದ್ದಾನೆ.
ಹೀಗಾಗಿ ಆರೋಪಿಯನ್ನು ತೀವ್ರ ರೀತಿಯಲ್ಲಿ ವಿಚಾರಣೆ ಮಾಡುವ ಸಾಧ್ಯತೆಯಿದೆ.

ಪ್ರಕರಣದ ಕೆಲ ಆರೋಪಿಗಳು ಕರ್ನಾಟಕದಲ್ಲಿ ಸ್ಫೋಟಿಸಲು ಎರ್ನಾಕುಲಂನಲ್ಲಿ ಕಾರೊಂದನ್ನು ಕಳ್ಳತನ ಮಾಡಿದ್ದರು. ಆದರೆ, ಸ್ಥಳೀಯ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದರು. ಒಂದು ವೇಳೆ ಆರೋಪಿಗಳು ಬಂಧನವಾಗದಿದ್ದರೆ, ಕಾರಿನಲ್ಲಿ ಅಮೋನಿಯಂ ನೈಟ್ರೇಟ್‌, ಜೆಲಿಟಿನ್‌ ಪುಡಿಗಳ ಜತೆ ಸಿಲಿಂಡರ್‌ಗಳನ್ನು ಹಾಕಿ ಮೆಜೆಸ್ಟಿಕ್‌, ಕೆ.ಆರ್‌.ಮಾರುಕಟ್ಟೆ ಸೇರಿ ಕೆಲ ಜನಜಂಗುಳಿ ಇರುವ ಸ್ಥಳಗಳಲ್ಲಿ ಸ್ಫೋಟಿಸಲು ಸಂಚು ರೂಪಿಸಿದ್ದರು. ಆದರೂ ಕೆಲ ಆರೋಪಿಗಳು ಸ್ಫೋಟಕ್ಕೂ ಕೆಲ ದಿನಗಳ ಮೊದಲು ಮುಂಜಾನೆ 3ಗಂಟೆಯಿಂದ ಮಡಿವಾಳದಿಂದ ಮೈಸೂರು ರಸ್ತೆವರೆಗೂ ಸ್ಫೋಟದ ಸ್ಥಳಗಳನ್ನು ಗುರುತಿಸುತ್ತಿದ್ದರು.

Advertisement

ಅಷ್ಟರಲ್ಲಿ ಬೆಳಗ್ಗೆ 5 ಗಂಟೆ ಆಗಿತ್ತು. ಈ ವೇಳೆ ತಮ್ಮ ಬಳಿಯಿದ್ದ ಪೆಟ್ಟಿಗೆಯಲ್ಲಿ ಇದ್ದ ಇನ್ನಷ್ಟು ಸ್ಫೋಟಕ ವಸ್ತುಗಳನ್ನು ಕೊಂಡೊಯ್ದು ಚನ್ನಪಟ್ಟಣ ಬಳಿ ಬಿಸಾಡಿ ಹೋಗಿದ್ದರು. ಅನಂತರ ಮತ್ತೆ ಬಂದು ನಿಗದಿ ಮಾಡಿದ್ದ ಸ್ಥಳಗಳಲ್ಲಿ ಸುಧಾರಿತ ಸ್ಫೋಟಕ ಸಾಧನ ಸ್ಫೋಟಿಸುತ್ತಾರೆ ಎಂದು ಮೂಲಗಳು ತಿಳಿಸಿವೆ. 

ಆಟೋ ಚಾಲಕ ಆಗಿದ್ದ ಸಲೀಂ ಸಲೀಂ ಮೂಲತಃ ಆಟೋ ಚಾಲಕನಾಗಿದ್ದು, ನಾಸೀರ್‌ ಮದನಿಯ ಪಿಡಿಪಿ ಪಕ್ಷದ ಕಾರ್ಯಕರ್ತನಾಗಿದ್ದ. ನಂತರ ಸಂಬಂಧಿ ಸತ್ತಾರ್‌ ಸಲಹೆ ಮೇರೆಗೆ ಉಗ್ರ ಸಂಘಟನೆಯಲ್ಲಿ ಸಕ್ರಿಯವಾಗು ತ್ತಾನೆ.
ಆದರೆ, 2008ರ ಸ್ಫೋಟದ ಬಳಿಕ ಆರೋಪಿ ಗಲ್ಫ್ ದೇಶಗಳಿಂದ ಬಂದು ಕೇರಳದ ಕಾಡಿನಲ್ಲಿ ತಲೆಮರೆಸಿಕೊಂಡಿದ್ದ ಎಂದು ತಿಳಿದು ಬಂದಿದೆ.

 ಮೋಹನ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next