Advertisement

Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ

12:21 AM Nov 18, 2024 | Team Udayavani |

ಮಂಗಳೂರು: ಇಸ್ರೇಲ್‌ನ ಕಂಪೆನಿಯೊಂದರಲ್ಲಿ ಉದ್ಯೋಗ ನೀಡುವುದಾಗಿ ಪಾಸ್‌ಪೋರ್ಟ್‌ ಹಾಗೂ ಹಣ ಪಡೆದ ಕೇರಳದ ಏಜೆನ್ಸಿಯೊಂದು ದ.ಕ., ಉಡುಪಿ ಜಿಲ್ಲೆಯ 130 ಮಂದಿ ಸೇರಿದಂತೆ ದೇಶದ ಸಾವಿರಾರು ಮಂದಿಗೆ ವಂಚಿಸಿರುವುದಾಗಿ ವಂಚನೆಗೊಳಗಾದ ಕೆಲವು ಮಂದಿ ಆರೋಪಿಸಿದ್ದಾರೆ.

Advertisement

ಇಸ್ರೇಲ್‌ನಲ್ಲಿರುವ ಭಾರತೀಯ ಮೂಲದ ವ್ಯಕ್ತಿಯೋರ್ವರು ನೀಡಿದ ಮಾಹಿತಿಯಂತೆ ಉದ್ಯೋಗಾಕಾಂಕ್ಷಿಗಳು ಮಂಗಳೂರಿನ ಕನ್ಸಲ್ಟೆನ್ಸಿಯವರಿಗೆ ಪಾಸ್‌ಪೋರ್ಟ್‌ ನೀಡಿದ್ದರು. ಅವರು ಕೇರಳದ ಏಜೆನ್ಸಿಗೆ ನೀಡಿದ್ದರು. ಆದರೆ ಕೇರಳದ ಏಜೆನ್ಸಿಯವರು ಇಸ್ರೇಲ್‌ನಲ್ಲಿ ಅಸ್ತಿತ್ವದಲ್ಲೇ ಇಲ್ಲದಿರುವ ನಕಲಿ ಕಂಪೆನಿಯೊಂದರ ಆಫ‌ರ್‌ ಲೆಟರ್‌ ನೀಡಿದ್ದಾರೆ. ಅಲ್ಲದೆ ಪಾಸ್‌ಪೋರ್ಟ್‌, ಹಣ ಪಡೆದುಕೊಂಡಿದ್ದಾರೆ. ಪಾಸ್‌ಪೋರ್ಟ್‌ ವಾಪಸ್‌ ನೀಡಲು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ವಂಚನೆಗೊಳಗಾದವರು ದೂರಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಮಂಗಳೂರಿನ ಕನ್ಸಲ್ಟೆನ್ಸಿಯ ರೋಹಿತ್‌ ಅವರು, “ಕೇರಳದ ಪರಿಚಯಸ್ಥರೊಬ್ಬರು ಇಸ್ರೇಲ್‌ನಲ್ಲಿ ಉದ್ಯೋಗ ಇರುವ ಬಗ್ಗೆ ತಿಳಿಸಿದ್ದರು. ಅಲ್ಲದೆ ಅದು ಎನ್‌ಎಸ್‌ಡಿಸಿ (ನ್ಯಾಶನಲ್‌ ಸ್ಕಿಲ್‌ ಡೆವಲಪ್‌ಮೆಂಟ್‌ ಕಾರ್ಪೊರೇಶನ್‌) ಮೂಲಕ ದೊರೆಯುತ್ತದೆ. ಹಾಗಾಗಿ ಅದು ನಂಬಿಕೆಗೆ ಅರ್ಹವಾಗಿದೆ’ ಎಂದಿದ್ದರು. ಅದಕ್ಕಾಗಿ ಕೇರಳದ ಸ್ಪೇಸ್‌ ಇಂಟರ್‌ನ್ಯಾಶನಲ್‌ ಏಜೆನ್ಸಿ ಸಂಸ್ಥೆಯನ್ನು ಸಂಪರ್ಕಿಸುವಂತೆ ಹೇಳಿದ್ದರು. ಅದರಂತೆ ಸ್ಪೇಸ್‌ ಇಂಟರ್‌ನ್ಯಾಶನಲ್‌ನ ಬಗ್ಗೆ ಮಾಹಿತಿ ಪಡೆದಾಗ ಅದು ಪರವಾನಿಗೆ ಪಡೆದ ಅಧಿಕೃತ ಸಂಸ್ಥೆ ಎಂಬುದು ಗೊತ್ತಾಯಿತು.

ಹಾಗಾಗಿ ಅವರೊಂದಿಗೆ ಮಾತುಕತೆ ನಡೆಸಿದೆ. ನನ್ನ ಬಳಿ 130 ಮಂದಿ ತಂದುಕೊಟ್ಟಿದ್ದ ಪಾಸ್‌ಪೋರ್ಟ್‌ ಅನ್ನು ಸ್ಪೇಸ್‌ ಇಂಟರ್‌ನ್ಯಾಶನಲ್‌ನವರಿಗೆ ನೀಡಿದ್ದೆ. ವೀಸಾ ಬಂದ ಅನಂತರವೇ ಹಣ ಪಾವತಿ ಎಂದು ಮಾತುಕತೆಯಾಗಿತ್ತು. ಪಾಸ್‌ಪೋರ್ಟ್‌ ನೀಡಿದ ಸುಮಾರು 20 ದಿನಗಳ ಅನಂತರ ಇಸ್ರೇಲ್‌ನ ಕೊಹೇನ್‌ ಎಂಪ್ಲಾಯ್‌ಮೆಂಟ್‌ ಗ್ರೂಪ್‌ ಕಂಪೆನಿ (ಎಲ್‌ಎಲ್‌ಸಿ) ಎಂಬ ಕಂಪೆನಿಯ ಹೆಸರಿನಿಂದ ಆಫ‌ರ್‌ ಲೆಟರ್‌ ಬಂದಿತ್ತು. ಆ ಆಫ‌ರ್‌ ಲೆಟರ್‌ನ ಬಗ್ಗೆ ಇಸ್ರೇಲ್‌ನಲ್ಲಿರುವ ನನ್ನ ಗೆಳೆಯನಿಗೆ ತಿಳಿಸಿದ್ದೆ. ಅವರು ಅಲ್ಲಿ ಪರಿಶೀಲನೆ ಮಾಡುವಾಗ ಆ ಹೆಸರಿನ ಕಂಪೆನಿ ಅಸ್ತಿತ್ವದಲ್ಲಿ ಇಲ್ಲದೇ ಇರುವುದು ಗೊತ್ತಾಯಿತು.

ಕೂಡಲೇ ಸ್ಪೇಸ್‌ ಇಂಟರ್‌ನ್ಯಾಶನಲ್‌ನವರ ಬಳಿ ತೆರಳಿ ಈ ವಿಷಯ ತಿಳಿಸಿದರೂ ಅವರು ಒಪ್ಪಿಲ್ಲ. ಅವರು ಆನ್‌ಲೈನ್‌ನಲ್ಲಿ ಸಂಸ್ಥೆ ವಿವರ ಇರುವುದನ್ನು ತೋರಿಸುತ್ತಿದ್ದಾರೆ. ಆದರೆ ವಾಸ್ತವವಾಗಿ ಆ ಸಂಸ್ಥೆ ಅಸ್ತಿತ್ವದಲ್ಲಿ ಇಲ್ಲ. ಹಾಗಾಗಿ ಪಾಸ್‌ಪೋರ್ಟ್‌ಗಳನ್ನು ವಾಪಸ್‌ ನೀಡುವಂತೆ ಹೇಳಿದೆವು. ಆದರೆ ಸ್ಪೇಸ್‌ ಇಂಟರ್‌ನ್ಯಾಶನಲ್‌ನವರು ನಿರಾಕರಿಸುತ್ತಿದ್ದಾರೆ. ಆಫ‌ರ್‌ ಲೆಟರ್‌ ಪಡೆದು 60,000 ರೂ. ನೀಡಬೇಕು ಅಥವಾ ಪಾಸ್‌ಪೋರ್ಟ್‌ ವಾಪಸ್‌ ಬೇಕಾದರೆ ಅದಕ್ಕೂ 60,000 ರೂ. ನೀಡಬೇಕು ಎಂದು ಬೆದರಿಸುತ್ತಿದ್ದಾರೆ. ಈಗಾಗಲೇ ಕೆಲವರು ಹಣ ಪಾವತಿಸಿದ್ದಾರೆ. ಈ ರೀತಿ ಈ ಸಂಸ್ಥೆಯವರು ಭಾರತದ ಸಾವಿರಕ್ಕೂ ಅಧಿಕ ಮಂದಿಗೆ ವಂಚಿಸಿರುವ ಸಾಧ್ಯತೆ ಇದೆ’ ಎಂದು ತಿಳಿಸಿದರು.

Advertisement

ದೂರು ನೀಡಿದರೂ ಸ್ಪಂದನೆ ಇಲ್ಲ
ಕೇರಳ ಪೊಲೀಸರು, ಎಮಿಗ್ರೇಷನ್‌ನವರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಇದೇ ಸಂಸ್ಥೆಯಿಂದ ಆಗಿರುವ ವಂಚನೆಯ ಬಗ್ಗೆ ಉಡುಪಿ ಜಿಲ್ಲೆಯ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪಾಸ್‌ಪೋರ್ಟ್‌ ಕಳೆದುಕೊಂಡಿರುವವರು ಕಂಗಾಲಾಗಿದ್ದಾರೆ. ಬೇರೆ ದೇಶಗಳಿಂದ ಉದ್ಯೋಗದ ಆಫ‌ರ್‌ ಬಂದರೂ ಅಲ್ಲಿಗೆ ತೆರಳಲು ಸಾಧ್ಯವಾಗುತ್ತಿಲ್ಲ ಎಂದು ರೋಹಿತ್‌ ಹೇಳಿದರು.

ಇಸ್ರೇಲ್‌ನಲ್ಲಿ ಯುದ್ದದ ಸಮಜಾಯಿಸಿ
ಕೆಲವರು ಇನ್ನೂ ಕೂಡ ಭರವಸೆ ಹೊಂದಿ ಸಾವಿರಾರು ರೂ. ಹಣ ಪಾವತಿಸಿ ಆಫ‌ರ್‌ ಲೆಟರ್‌ ಪಡೆದು ಕೊಂಡಿದ್ದಾರೆ. ಆದರೆ ಅವರಿಗೆ ಇನ್ನೂ ಕೂಡ ಉದ್ಯೋಗದ ವೀಸಾ ಬಂದಿಲ್ಲ. ಈ ಬಗ್ಗೆ ಸ್ಪೇಸ್‌ ಇಂಟರ್‌ನ್ಯಾಷನಲ್‌ನವರಲ್ಲಿ ಪ್ರಶ್ನಿಸಿದರೆ “ಇಸ್ರೇಲ್‌ನಲ್ಲಿ ಯುದ್ದ ನಡೆಯುತ್ತಿದೆ’ ಎಂದು ಸಮಜಾಯಿಷಿ ನೀಡಿದ್ದಾರೆ ಎಂದು ರೋಹಿತ್‌ ದೂರಿದ್ದಾರೆ.

ದ.ಕ., ಉಡುಪಿ ಮತ್ತು ಗುಜರಾತಿನ 150 ಮಂದಿಯ ಪಾಸ್‌ಪೋರ್ಟ್‌ ಅನ್ನು ಕೇರಳದ ಸ್ಪೇಸ್‌ ಇಂಟರ್‌ನ್ಯಾಶನಲ್‌ನವರಿಗೆ ನೀಡಿದ್ದೇನೆ. ಅವರು ನಕಲಿ ಕಂಪೆನಿಯ ಆಫ‌ರ್‌ ನೀಡಿದ್ದಾರೆ. ಈಗ ಪಾಸ್‌ಪೋರ್ಟ್‌ ತೆಗೆದಿಟ್ಟುಕೊಂಡು ತಲಾ 60,000 ರೂ.ಗೆ ಬೇಡಿಕೆ ಇಟ್ಟಿದ್ದಾರೆ. -ರೋಹಿತ್‌ ಕನ್ಸಲ್ಟೆನ್ಸಿ ಸಂಸ್ಥೆ ಮಂಗಳೂರು

ಬೇರೆ ಕಡೆಗೂ ಹೋಗುವಂತಿಲ್ಲ
ಇಸ್ರೇಲ್‌ನ ಸಂದೀಪ್‌ ಅವರ ಸೂಚನೆಯಂತೆ ರೋಹಿತ್‌ ಅವರ ಕಚೇರಿಗೆ ಪಾಸ್‌ಪೋರ್ಟ್‌, ಆಧಾರ್‌ ನೀಡಿದ್ದೆ. ಅವರು ಅದನ್ನು ಕೇರಳದ ಏಜೆನ್ಸಿಯವರಿಗೆ ನೀಡಿದ್ದಾರೆ. ಆದರೆ ಈಗ ಏಜೆನ್ಸಿಯವರು ನಕಲಿ ಕಂಪೆನಿಯ ಆಫ‌ರ್‌ ಕೊಟ್ಟಿದ್ದಾರೆ. ಪಾಸ್‌ಪೋರ್ಟ್‌ ಕೂಡ ವಾಪಸ್‌ ನೀಡುತ್ತಿಲ್ಲ. ಬೇರೆ ದೇಶದಲ್ಲಿ ಉದ್ಯೋಗಕ್ಕೆ ಹೋಗುವುದಕ್ಕೂ ಸಾಧ್ಯವಾಗುತ್ತಿಲ್ಲ. ಪಾಸ್‌ಪೋರ್ಟ್‌ ಅನ್ನು ವಾಪಸ್‌ ಪಡೆಯುವುದು ಹೇಗೆಂದು ಗೊತ್ತಾಗುತ್ತಿಲ್ಲ.
-ಪ್ರೀತಂ ಬೆಳ್ತಂಗಡಿ, ವಂಚನೆಗೊಳಗಾದವರು

Advertisement

Udayavani is now on Telegram. Click here to join our channel and stay updated with the latest news.

Next