ಹುಬ್ಬಳ್ಳಿ: ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ ಕಾಂಗ್ರೆಸ್ ಪಕ್ಷ ಎಲ್ಲಾ ರೀತಿಯ ಕಾನೂನು ಬಾಹಿರ ಚಟುವಟಿಕೆಗಳನ್ನು ಮಾಡಲು ಸಿದ್ಧವಾಗಿದೆ ಎಂದು ಸಂಸದ ಜಗದೀಶ ಶೆಟ್ಟರ ಹೇಳಿದರು.
ಸೋಮವಾರ (ಅ.14) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಜವಾದ ಭಯೋತ್ಪಾದಕರು ಬೇರೆಡೆ ಇದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯ ಆಡುವ ಮಾತುಗಳು ಯಾಕೆ ಕೆಳಮಟ್ಟಕ್ಕೆ ಹೋಗಿದೆ ಗೊತ್ತಾಗುತ್ತಿಲ್ಲ ಎಂದರು.
ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಪ್ರಧಾನಿ ಮೋದಿಯವರು ಭಯೋತ್ಪಾದಕರನ್ನು ಹತ್ತಿಕ್ಕುವ ಕೆಲಸ ಮಾಡಿದ್ದಾರೆ. ರಾಜಕೀಯ ನಾಯಕರ ನಡುವೆ ಭಯೋತ್ಪಾದಕ ಪದ ಬಳಕೆ ಸರಿಯಲ್ಲ ಎಂದರು.
ಹಳೇಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಕಠಿಣ ಕಾನೂನುಗಳನ್ನು ಹಾಕಲಾಗಿತ್ತು. ಕಡಿಮೆ ಸಮಯದಲ್ಲಿ ಸಾವಿರಾರು ಜನ ಸೇರಿ ಗಲಭೆ ಮಾಡಿದ್ದರು. ಅಂದಿನ ಹು-ಧಾ. ಪೊಲೀಸ್ ಆಯುಕ್ತ ಲಾಭೂ ರಾಮ್ ಅವರು ಸ್ಥಳಕ್ಕೆ ದೌಡಾಯಿಸಿ ನಿಯಂತ್ರಣ ಮಾಡಿ, ಅನಾಹುತ ತಪ್ಪಿಸಿದ್ದಾರೆ. ಇದೊಂದು ಪೂರ್ವ ನಿಯೋಜಿತ ಕೃತ್ಯವಾಗಿದೆ. ಇದೀಗ ಕಾಂಗ್ರೆಸ್ ಪಕ್ಷ ಗಲಭೆ ಪ್ರಕರಣ ವಾಪಸ್ಸು ಪಡೆದು ಸಂವಿಧಾನಕ್ಕೆ ಅಗೌರವ ತೋರುತ್ತಿದೆ. ಮತಬ್ಯಾಂಕ್‌ಗೆ ಸಮಾಜದ ವ್ಯವಸ್ಥೆ ಹಾಳು ಮಾಡುತ್ತಿದೆ ಎಂದು ಹರಿಹಾಯ್ದರು.
ಕಾಂಗ್ರೆಸ್ ಸರ್ಕಾರದ ನಿರ್ಧಾರಗಳು ಮುಂದೆ ಕಾನೂನು ಸುವ್ಯವಸ್ಥೆ ಹದಗೆಡಲು ಕಾರಣವಾಗುತ್ತದೆ. ಜಾತಿಗಳ ನಡುವೆ ಹೋರಾಟ ನಡೆಯಲು ಕಾರಣವಾಗುತ್ತದೆ. ಈ ನಿರ್ಧಾರವನ್ನು ಕಾಂಗ್ರೆಸ್ ಕೈಬಿಡಬೇಕು ಎಂದು ಆಗ್ರಹಿಸಿದರು.
ಹಳೇಹುಬ್ಬಳ್ಳಿ ಗಲಭೆ ಪ್ರಕರಣವನ್ನು ವಾಪಸ್ಸು ಪಡೆಯಲು ಸಾಧ್ಯವೇ ಇಲ್ಲ. ಆದರೆ ಕಾಂಗ್ರೆಸ್ ಕಾನೂನು ಬಾಹಿರವಾಗಿ ಪ್ರಕರಣ ಹಿಂಪಡೆಯುವ ಕೆಲಸ ಮಾಡಿದೆ. ಈ ಪ್ರಕರಣವನ್ನು ಕೋರ್ಟ್ ವಜಾ ಮಾಡಲು ನಿರ್ಧಾರ ಮಾಡಬೇಕು. ಆದರೆ ಕಾಂಗ್ರೆಸ್ ಸುಖಾಸುಮ್ಮನೆ ಅಲ್ಪಸಂಖ್ಯಾತರ ಕಣ್ಣೊರೆಸುವ ಕೆಲಸ ಮಾಡುತ್ತಿದೆ ಎಂದರು.
ಮಲ್ಲಿಕಾರ್ಜುನ ಖರ್ಗೆ ಅವರೊಬ್ಬ ಹಿರಿಯ ರಾಜಕಾರಣಿಗಳು. ಅವರಿಗೆ ಯಾಕೆ ಸರ್ಕಾರಿ ಭೂಮಿ ಮೇಲೆ ಪ್ರೀತಿ ಗೊತ್ತಾಗಿಲ್ಲ. ಸ್ವಂತ ಭೂಮಿ ಖರೀದಿಸಿ ಟ್ರಸ್ಟ್ ನಡೆಸಬಹುದಿತ್ತು. ಅವರು ತಪ್ಪು ಮಾಡಿದಕ್ಕೆ ಭೂಮಿ ವಾಪಸ್ಸು ಕೊಟ್ಟಿದ್ದಾರೆ. ಇಲ್ಲದೆ ಹೋದಲ್ಲಿ ಹೆದರುವ ಅವಶ್ಯಕತೆ ಇರಲಿಲ್ಲ ಎಂದರು.