Advertisement

Mangaluru: ಆರೋಪಿಗಳ ಪಾಸ್‌ಪೋರ್ಟ್‌ಗೆ ಸಿಕ್ಕಿತು ಪೊಲೀಸ್‌ ಕ್ಲಿಯರೆನ್ಸ್‌

11:40 PM Oct 29, 2024 | Team Udayavani |

ಮಂಗಳೂರು: ಹಲ್ಲೆ, ಲೈಂಗಿಕ ಕಿರುಕಳ ಪ್ರಕರಣದ ಆರೋಪಿಗಳ ಪಾಸ್‌ಪೋರ್ಟ್‌ಗೆ ಪೊಲೀಸರು ಕ್ಲಿಯರೆನ್ಸ್‌ ನೀಡಿರುವ ವಿಚಾರ ಬೆಳಕಿಗೆ ಬಂದಿದೆ.

Advertisement

ಕುಲಶೇಖರದ ಸಭಾಂಗಣದಲ್ಲಿ ಮದುವೆ ಕಾರ್ಯಕ್ರಮವೊಂದರಲ್ಲಿ ಮಹಿಳೆ ಮತ್ತು ಆಕೆಯ ಸಂಬಂಧಿಕರಿಗೆ ಅವಾಚ್ಯವಾಗಿ ಬೈದು ಕೈಯಿಂದ ಕೆನ್ನೆಗೆ ಹೊಡೆದು, ತಲೆಯ ಜುಟ್ಟನ್ನು ಎಳೆದು ಬುರ್ಖಾ ಹರಿದು ಹಾಕಿ ತಲೆಗೆ ಹಲ್ಲೆ ನಡೆಸಿ ಗಾಯಗೊಳಿಸಿದ ಬಗ್ಗೆ ದಾವೂದ್‌ ಮತ್ತು ಇತರ ನಾಲ್ವರ ವಿರುದ್ಧ 2023ರ ಮೇ 13ರಲ್ಲಿ ಮಂಗಳೂರು ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದ ವಿಚಾರಣೆ ಮಂಗಳೂರಿನ ನ್ಯಾಯಾಲಯದಲ್ಲಿ ಎವಿಡೆನ್ಸ್‌ ಹಂತದಲ್ಲಿತ್ತು. ಈ ನಡುವೆ ಸಿದ್ದಿಕ್‌ ಮತ್ತು ಇನ್ನೋರ್ವ ಆರೋಪಿ ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸಿದ್ದರು. ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಗೆ ಪೊಲೀಸ್‌ ಪರಿಶೀಲನೆಗೆ ಬಂದಾಗ ಪೊಲೀಸರು ಅರ್ಜಿದಾರರ ಮೇಲೆ ಯಾವುದೇ ಅಪರಾಧ ಪ್ರಕರಣಗಳು ಇಲ್ಲ ಎಂದು ಕ್ಲಿಯರೆನ್ಸ್‌ ನೀಡಿದ್ದರು. ಅನಂತರ ಪಾಸ್‌ಪೋರ್ಟ್‌ ಕಚೇರಿಯಿಂದ ಅವರಿಗೆ ಪಾಸ್‌ಪೋರ್ಟ್‌ ನೀಡಲಾಗಿತ್ತು. ಈ ಬಗ್ಗೆ ಆಕ್ಷೇಪಗಳು ವ್ಯಕ್ತವಾಗಿದ್ದು ಅನಂತರ ಪೊಲೀಸರು ಈ ಬಗ್ಗೆ ಪಾಸ್‌ಪೋರ್ಟ್‌ ಸೇವಾ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ.

ಅಪ್‌ಡೇಟ್‌ ಆಗಿರಲಿಲ್ಲ
ಪಾಸ್‌ಪೋರ್ಟ್‌ಗೆ ಪೊಲೀಸ್‌ ಕ್ಲಿಯರೆನ್ಸ್‌ಗಾಗಿ ಠಾಣೆಗೆ ಪರಿಶೀಲನೆಗೆ ಬಂದಿದ್ದಾಗ ಅರ್ಜಿದಾರರ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಾದ ಮಾಹಿತಿ ಅಪ್‌ಡೇಟ್‌ ಆಗಿರಲಿಲ್ಲ. ಹಾಗಾಗಿ ನಿರಕ್ಷೇಪಣ ಪತ್ರ ನೀಡುವಾಗ ಕ್ರಿಮಿನಲ್‌ ಕೇಸ್‌ನ ಮಾಹಿತಿ ಬಂದಿರಲಿಲ್ಲ. ಬಳಿಕ ಕ್ರಿಮಿನಲ್‌ ಪ್ರಕರಣ ಇರುವ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಪಾಸ್‌ಪೋರ್ಟ್‌ ಸೇವಾ ಕೇಂದ್ರಕ್ಕೆ ದಾಖಲೆ ಸಹಿತ ಮಾಹಿತಿ ನೀಡಲಾಗಿದೆ. ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ನಕಲಿ ಪಾಸ್‌ಪೋರ್ಟ್‌ ದಂಧೆ?
ಇತ್ತೀಚೆಗೆ ಮಂಗಳೂರು ವಿಮಾನ ನಿಲ್ದಾಣದ ಮೂಲಕ ದುಬಾೖಗೆ ಹೋಗಲು ಯತ್ನಿಸಿದ್ದ ಬಾಂಗ್ಲಾದೇಶದ ಪ್ರಜೆಯೋರ್ವನನ್ನು ಬಂಧಿಸಲಾಗಿತ್ತು. ಪಾಸ್‌ಪೋರ್ಟ್‌ ಪರಿಶೀಲನೆ ವೇಳೆ ಅಕ್ರಮವಾಗಿ ನೆಲೆಸಿ ಆಧಾರ್‌ ಕಾರ್ಡ್‌ ಪಡೆದು ಪಾಸ್‌ಪೋರ್ಟ್‌ ಮಾಡಿಸಿದ್ದು ಗೊತ್ತಾಗಿತ್ತು. ಇದೇ ರೀತಿ ನಕಲಿ ದಾಖಲೆಗಳು, ನಕಲಿ ಪಾಸ್‌ಪೋರ್ಟ್‌ಗಳನ್ನು ಮಾಡುವ ದಂಧೆ ಕರಾವಳಿ ಭಾಗದಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಬಗ್ಗೆ ಸಾರ್ವಜನಿಕ ವಲಯದಿಂದ ದೂರುಗಳು ಕೇಳಿಬರುತ್ತಿವೆ. ಪೊಲೀಸರು ಮತ್ತು ಪಾರ್ಸ್‌ಪೋರ್ಟ್‌ ವಿಭಾಗಗಳು ಈ ಬಗ್ಗೆ ಹೆಚ್ಚಿನ ನಿಗಾ ಇಡುವ ಅಗತ್ಯವಿದೆ. ಜತೆಗೆ ನಕಲಿ ವೀಸಾಗಳನ್ನು ನೀಡಿ ವಂಚಿಸುತ್ತಿರುವ ಏಜೆನ್ಸಿಗಳ ಮೇಲೆಯೂ ಕ್ರಮ ತೆಗೆದುಕೊಳ್ಳಬೇಕಾದ ಅಗತ್ಯವಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next