ಬೆಂಗಳೂರು: ಹುಣ್ಣಿಮೆ ಮತ್ತು ಕೇತುಗ್ರಸ್ತ ಚಂದ್ರ ಗ್ರಹಣದ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬ ಸದಸ್ಯರು ಸೇರಿ ರಾಜಕಾರಣಿಗಳು ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದ್ದಾರೆ.
ಜೆಡಿಎಸ್ ವರಿಷ್ಠ ದೇವೇಗೌಡ ಮತ್ತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕುಟುಂಬ ಸಮೇತ ಶುಕ್ರವಾರ ತಿರುಪತಿ ತಿಮ್ಮಪ್ಪನಿಗೆ ವಿಶೇಷ ಪೂಜೆ ನೆರವೇರಿಸಿದ್ದಾರೆ.
ವಿಶೇಷ ಸಂದರ್ಭದಲ್ಲಿ ದೇವೇಗೌಡರು ಪತ್ನಿ ಸಮೇತರಾಗಿ ತಿಮ್ಮಪ್ಪನ ದರ್ಶನ ಪಡೆಯುವುದು ವಾಡಿಕೆ. ಈ ವೇಳೆ ಪುತ್ರ ಎಚ್.ಡಿ.ರೇವಣ್ಣ ಕುಟುಂಬವೂ ಹಾಜರಿರುತ್ತದೆ. ಆದರೆ, ಈ ಬಾರಿ ಮತ್ತೂಬ್ಬ ಪುತ್ರ, ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಅವರ ಪತ್ನಿ ಅನಿತಾ ದೇವೇಗೌಡರೊಂದಿಗೆ ಹಾಜರಿದ್ದುದು ವಿಶೇಷ.
ತಿಮ್ಮಪ್ಪನ ಸನ್ನಿಧಾನದಲ್ಲಿ ಸುಪ್ರಭಾತ ಪೂಜೆ ಸೇವೆ ಕೈಗೊಂಡ ಬಳಿಕ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದರು. ನಂತರ ಬೆಟ್ಟದ ಕೆಳಗೆ ಪದ್ಮಾವತಿ ಅಮ್ಮನವರಿಗೆ ವಿಶೇಷ ಪೂಜೆ ನೆರವೇರಿಸಿದರು.
ಇನ್ನೊಂದೆಡೆ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ ವಿಶೇಷ ಪೂಜೆ ನೆರವೇರಿಸಿದರು. ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು, ಶಾಸಕ ಎಲ್.ನಾಗೇಂದ್ರ ಕೂಡ ಚಾಮುಂಡೇಶ್ವರಿ ದರ್ಶನ ಮಾಡಿದರು. ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಅವರು ಕಾಲ್ನಡಿಗೆ ಮೂಲಕ ಚಾಮುಂಡಿ ಬೆಟ್ಟ ಹತ್ತಿ ದೇವಿಗೆ ಪೂಜೆ ಸಲ್ಲಿಸಿದರು.
ಗ್ರಹಣ ಸಮಯದಲ್ಲಿಯೇ ಮದುವೆ: ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಹೂವಿನಹೊಳೆಯ ವಧು ವಸಂತಾ ಹಾಗೂ ಅದೇ ಗ್ರಾಮದ ವರ, ಮರಡಿ ರಂಗನಾಯಕ ಇವರ ವಿವಾಹ ಮಹೋತ್ಸವ ಚಿತ್ರದುರ್ಗದ ಮುರುಘಾಮಠದಲ್ಲಿ ಶುಕ್ರವಾರ ರಾತ್ರಿ 9 ಗಂಟೆ ಸುಮಾರಿಗೆ ನಡೆಯಿತು. ಇಬ್ಬರೂ ಕಳೆದ 7 ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಜನರಲ್ಲಿ ಮೂಢನಂಬಿಕೆ ಹೋಗಲಾಡಿಸುವ ನಿಟ್ಟಿನಲ್ಲಿ ಮುರುಘಾಶರಣರ ನೇತೃತ್ವದಲ್ಲಿ ಚಂದ್ರಗ್ರಹಣ ದಿನದಂದು ಈ ಮದುವೆ ನಡೆಯಿತು.