Advertisement

Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ

08:01 PM Dec 16, 2024 | Team Udayavani |

ಅಂಕೋಲಾ : ವೃಕ್ಷಮಾತೆ ಎಂದೆನಿಸಿಕೊಂಡ ಪದ್ಮಶ್ರೀ ತುಳಸಿ ಗೌಡ ಸೋಮವಾರ(ಡಿ16) ವಿಧಿವಶರಾಗಿದ್ದಾರೆ. ಅವರಿಗೆ 86 ವರ್ಷ ವಯಸಾಗಿತ್ತು.

Advertisement

ಅಂಕೋಲಾ ತಾಲೂಕಿನ ಹೊನ್ನಳ್ಳಿ ಗ್ರಾಮದ ತುಳಸಿ ಗೌಡ ಅವರು ವಯೋ ಸಹಜ ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ.

ಕಳೆದ ಎಂಟು ತಿಂಗಳಿನಿಂದ ವಯೋ ಸಹಜ ಅನಾರೋಗ್ಯಕ್ಕೆ ತುತ್ತಾದ ತುಳಸಿ ಗೌಡ ಅವರಿಗೆ ಆಸ್ಪತ್ರೆ ಸೇರಿದಂತೆ ಅನೇಕ ಕಡೆ ಚಿಕಿತ್ಸೆಯನ್ನು ನೀಡಲಾಗಿತ್ತು. ಹೊನ್ನಳ್ಳಿ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದ ಅವರು ಮನೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಸ್ಥಳಕ್ಕೆ ತಾಲೂಕು ವೈದ್ಯಾಧಿಕಾರಿ ಜಗದೀಶ ನಾಯಕ ತುಳಸಿ ಗೌಡ ಮನೆಗೆ ತೆರಳಿ ಮೃತಪಟ್ಟಿರುವುದು ಖಚಿತ ಪಡಿಸಿದ್ದಾರೆ.

ತುಳಸಿ ಗೌಡರವರು ಒರ್ವ ಪುತ್ರ ಮತ್ತು ಪುತ್ರಿ, ಮೊಮ್ಮಕ್ಕಳು ಮರಿಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಅಂತಿಮ ಸಂಸ್ಕಾರ ಮಂಗಳವಾರ ಬೆಳಗ್ಗೆ 11 ಗಂಟೆಗೆ ಹೊನ್ನಳ್ಳಿಯ ಸ್ವಗೃಹದಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

Advertisement

ಪದ್ಮಶ್ರೀ ಸುಕ್ರಿ ಬೊಮ್ಮು ಗೌಡ ಅವರ ಬಳಿಕ ಉತ್ತರ ಕನ್ನಡ ಜಿಲ್ಲೆಯಲ್ಲಿ ತನ್ನದೇ ವಿಶಿಷ್ಠ ಸಾಧನೆಯ ಮೂಲಕ ಗಮನ ಸೆಳೆದ ಮಹಿಳಾ ಸಾಧಕಿ ತುಳಸಿ ಗೌಡ ಅತೀ ದೊಡ್ಡ ಪರಿಸರ ಪ್ರೇಮಿಯಾಗಿದ್ದರು. ಲಕ್ಷಕ್ಕೂ ಹೆಚ್ಚು ಮರ ಬೆಳೆಸಿದ್ದ ತುಳಸಿ ಅವರು ಕಟ್ಟಿಗೆ ಸಂಗ್ರಹಿಸಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು.ಮತ್ತಿಘಟ್ಟ ಅರಣ್ಯ ನರ್ಸರಿಯಲ್ಲಿ ಸೇವೆ ಮಾಡಿ ನಿವೃತ್ತರಾಗಿದ್ದರು.ಯುವ ಜನಾಂಗಕ್ಕೆ ನಿರಂತರ ತರಬೇತಿ, ಮಾರ್ಗದರ್ಶನ ನೀಡುವ ಮೂಲಕ ಪರಿಸರ ಜಾಗೃತಿ ಮೂಡಿಸುತ್ತಿದ್ದರು.

ಹಾಲಕ್ಕಿ ಸಮುದಾಯದ ಜಾನಪದ ಕಲಾವಿದೆಯೂ ಆಗಿದ್ದ ತುಳಸಿ ಗೌಡ ಅವರ ಸಾಧನೆಯನ್ನು ಪರಿಗಣಿಸಿ ಕೇಂದ್ರ ಸರಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ ಒಲಿದು ಬಂದಿತ್ತು. ಅನೇಕ ಸಮ್ಮಾನಗಳು ಸಂದಿದ್ದವು.

ಸಂತಾಪ
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ಸತೀಶ ಸೈಲ್, ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ, ಮಾಜಿ ಶಾಸಕಿ ರೂಪಾಲಿ ನಾಯ್ಕ, ಮಾಜಿ ಸಚಿವ ಆನಂದ ಅಸ್ನೋಟಿಕರ, ಅಗಸೂರು ಗ್ರಾ.ಪಂ ಮಾಜಿ ಅಧ್ಯಕ್ಷ ಗೊಪು ನಾಯಕ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next