ರವಿವಾರದಿಂದ ಶುರುವಾಗಿ ಶನಿವಾರದ ವರೆಗಿನ ವಾರದ ದಿನಗಳಲ್ಲಿ ಎರಡನೆಯ ದಿನವೇ ಸೋಮವಾರ. ಈ “ಸೋಮ’ ಯಾರು ಎಂದರೆ ಚಂದ್ರ. ಸೂರ್ಯನ ಅನಂತರದ ಸ್ಥಾನವೇ ಈ ಚಂದ್ರ. ಕಣ್ಣಿಗೆ ಕಾಣುವ ದೈವಗಳಲ್ಲಿ ಪ್ರಥಮ ಎಂದರೆ ಸೂರ್ಯ, ಮತ್ತೊಬ್ಬ ಎಂದರೆ ಚಂದ್ರ. ಹಲವೊಂದು ಉಲ್ಲೇಖಗಳಲ್ಲಿ ಈ ಎರಡೂ ದೈವಗಳು ಒಟ್ಟೊಟ್ಟಾಗಿ ಸಾಗುತ್ತಾರೆ. ಅಂಥದ್ರಲ್ಲಿ ಒಂದು ಎಂದರೆ “ಸೂರ್ಯಚಂದ್ರರು ಇರುವಾ ತನಕ . . . ‘ ಅಂತ ಏನೋ ವಿಷಯ ಹೇಳೋದು.
ಮಂಕುತಿಮ್ಮನ ಕಗ್ಗದ “ಬೆಳಕೀವ ಸೂರ್ಯ ಚಂದ್ರರದೊಂದು ಸದ್ದಿಲ್ಲ’ ಎಂಬ ಉಲ್ಲೇಖ ಯಾರಿಗೆ ತಾನೇ ಗೊತ್ತಿಲ್ಲ. “ಸೂರ್ಯಂಗೂ ಚಂದ್ರಂಗೂ ಬಂದಾರೆ ಮುನಿಸು’ ಹಾಡನ್ನು ಕೇಳದ ಕನ್ನಡಿಗನೇ ಇಲ್ಲಾ ಅಲ್ಲವೇ? ಸೂರ್ಯನಂತೆ ಚಂದ್ರನೂ ಕೈಗೆ ಎಟುಕದ ದೂರದಲ್ಲೇ ಇರೋದು. ಆದರೆ ಇವರೀರ್ವರೂ ಭುವಿಯಿಂದ ಎಷ್ಟು ದೂರದಲ್ಲಿ ಇದ್ದಾರೆ ಅಂತ ನೋಡಿದರೆ ಅಜಗಜಾಂತರ ಎನ್ನಬಹುದು.
ಭೂಮಿಯಿಂದ ಸೂರ್ಯನು 93 ಮಿಲಿಯನ್ ಮೈಲಿಗಳಂತೆ. ಬಿಸಿಬಿಸಿ ಇರುವವರು ದೂರವಿದ್ದರೆ ಒಳಿತು. ಭೂಮಿಯಿಂದ ಚಂದ್ರನು ಕೇವಲ 238 ಸಾವಿರ ಮೈಲು ದೂರ. ಎಲ್ಲಿಯ ಸಾವಿರ? ಎಲ್ಲಿಯ ಮಿಲಿಯನ್? ಅಲ್ಲವೇ? ಚಂದ್ರನು ಇಷ್ಟೇ ದೂರದಲ್ಲಿದ್ದು ತಂಪಾಗಿರುವುದರಿಂದ ನಾವು ಬಚಾವ್. ಆದರೂ ಈ “ಪ್ರೇಮ ಚಂದ್ರಮ ಕೈಗೆ ಸಿಗುವನೇ?’
ಶ್ರೀರಾಮನು ಸೂರ್ಯವಂಶಿಯೇ ಆದರೂ ಹುಣ್ಣಿಮೆಯ ಚಂದ್ರನಂತೆ ಶೋಭಿಸುತ್ತಿದ್ದ ಎಂಬ ಕಾರಣಕ್ಕೆ “ರಾಮಚಂದ್ರ’ ಎಂದೇ ಹೆಸರಾಗಿದ್ದ ಎನ್ನುತ್ತಾರೆ. ಕನಕದಾಸರು ತಮ್ಮ ಒಂದು ರಚನೆಯಲ್ಲಿ “ಅಂಗಳದೊಳು ರಾಮನಾಡಿದ ಚಂದ್ರ ಬೇಕೆಂದು ತಾ ಹಠ ಮಾಡಿದ’ ಎನ್ನುತ್ತಾರೆ. ಅಂಗಳದಲ್ಲಿ ಬಾಲ ರಾಮನು ಆಡುವಾಗ, ತನಗೆ ಯಾವ ಆಟಿಕೆಯೂ ಬೇಡ ಚಂದ್ರನೇ ಬೇಕು ಎಂದು ಹಠ ಮಾಡಿದನಂತೆ. ಕೌಸಲ್ಯಾದೇವಿಯು ಕಳವಳಗೊಳ್ಳಲು, ರಾಜಾ ದಶರಥನು ಕನ್ನಡಿಯನ್ನು ಅದರಲ್ಲಿ ಚಂದ್ರನ ಬಿಂಬವನ್ನು ತೋರಿಸಲು ರಾಮನು ಸಮಾಧಾನಗೊಂಡನಂತೆ. ಅಂದಿನಿಂದ ರಾಮನು “ರಾಮಚಂದ್ರ’ನಾದ ಎನ್ನುವುದೂ ಒಂದು ಕಥೆ. ಚಂದ್ರನಲ್ಲಿರುವ ಹದಿನಾರು ಕಲೆಗಳು ರಾಮನಲ್ಲೂ ಇರುವುದರಿಂದ ಅವನು ರಾಮಚಂದ್ರನಾದ ಎಂದೂ ಒಂದೆಡೆ ಉಲ್ಲೇಖವಿದೆ.
ಇಪ್ಪತ್ತೇಳು ಹೆಂಡಿರ ಹೊಂದಿಹ ಚಂದ್ರನ ಮೋಹದ ಹೆಂಡತಿ ರೋಹಿಣಿ. ಇವಳೊಂದಿಗೆ ಹೆಚ್ಚಿನ ವೇಳೆ ಕಳೆಯುತ್ತಾನೆ ಎಂಬ ದೂರು ತಂದೆಯಾದ ದಕ್ಷನಿಗೆ ಹೋಗಿತ್ತು. ದಕ್ಷನು ಒಂದಷ್ಟು ಬಾರಿ ಎಚ್ಚರಿಸಿದರೂ ಸುಧಾರಿಸದ ಚಂದ್ರನಿಗೆ ಕ್ಷಯರೋಗ ಬರಲೆಂದು ಶಪಿಸುತ್ತಾನೆ. ಅನಂತರ ತಪ್ಪೊಪ್ಪಿಗೆ ರೂಪದಲ್ಲಿ ಹದಿನೈದು ದಿನಗಳ ಕ್ಷೀಣ ಮತ್ತೆ ಹದಿನೈದು ದಿನಗಳ ವೃದ್ಧಿ ಎಂಬುದಾಯ್ತು. ಇದೊಂದು ಕಥೆಯಾದರೆ ಗಣಪನ ಶಾಪದಿಂದ ಚಂದ್ರನು ಕ್ಷೀಣ-ವೃದ್ಧಿಯ ಭಾಗ್ಯ ದೊರೆಯಿತು.
ಒಬ್ಬ ತಾಯಿಯು ತನ್ನ ಕೂಸಿಗೆ ಊಟವನ್ನು ಮಾಡಿಸುವಾಗ ಚಂದ್ರನನ್ನು ತೋರಿಸುತ್ತಾ ಉಣಿಸುವಳಂತೆ. ಆ ಚಂದ್ರನು ತನ್ನ ಸಹೋದರ ಎಂಬಂತೆಯೇ ಬಿಂಬಿಸುತ್ತಾ ಅವನನ್ನು “ಚಂದಮಾಮ’ ಎಂದು ಕರೆಯುತ್ತಾಳೆ. ಆ ಕೂಸಿಗೆ ಅವನು “ಮಾಮ’ ಎಂದೇ ಪರಿಚಯಿಸುತ್ತಾಳೆ. ಇನ್ನೊಂದರ್ಥದಲ್ಲಿ ದೂರದ ತವರಿನಲ್ಲಿರುವ ಸಹೋದರನನ್ನು ಚಂದ್ರನಲ್ಲಿ ಕಾಣುತ್ತಾ ತನ್ನ ಕೂಸಿಗೆ ಅವನು ಚಂದಮಾಮ ಎಂದು ಪರಿಚಯಿಸುತ್ತಾ, ದಿನವೂ ತನ್ನ ತವರನ್ನು ನೆನೆಯುತ್ತಾಳೆ. ಚಂದ್ರನು ತಂಪು ಹಾಗಾಗಿ ಕೂಸು ಆ ಚಂದ್ರನನ್ನು ತಲೆ ಎತ್ತಿ ನೋಡುವಾಗ ಬಾಯಲ್ಲಿ ತುತ್ತನ್ನು ಇಡುತ್ತಾಳೆ ಆ ತಾಯಿ.
ಮಗುವಿಗೆ ಊಟವನ್ನು ಉಣಿಸುವುದೇ ಒಂದು ದೊಡ್ಡ ಕೆಲಸ. ಒಮ್ಮೊಮ್ಮೆ ಸಲೀಸಾಗಿ ಊಟವನ್ನು ಮಾಡುವ ಆ ಕೂಸು ಕೆಲವೊಮ್ಮೆ ಜಪ್ಪಯ್ಯ ಎಂದರೂ ಬಾಯನ್ನೇ ತೆರೆಯದೇ ಕಾಟ ಕೊಡುವುದು ಉಂಟು. ಇಂಥಾ ಸಮಯದಲ್ಲಿ ಬೆಳಗುವ ಚಂದ್ರನೇ ಅವಳಿಗೆ ಆಪತಾºಂಧವ. ಸೂರ್ಯನಂತೆ ಸದಾ ಲಭ್ಯವಿಲ್ಲದವನೇ ಈ ಚಂದ್ರ. ಸದಾಕಾಲ ಚಂದ್ರನನ್ನು ತಲೆ ಎತ್ತಿ ನೋಡುವಂತೆ ಸೂರ್ಯನನ್ನು ನೋಡಲಾಗದು ಹಾಗಾಗಿ ಚಂದ್ರನು ಚಂದಮಾಮ ಆಗಬಲ್ಲ, ಆದರೆ ಸೂರ್ಯನು ಸೂರ್ಯಮಾಮ ಆಗುವುದಿಲ್ಲ. “ಬಿಸಿಲಲ್ಲಿ ಆಡಿದರೆ ಕಪ್ಪಾಗುತ್ತೀಯಾ’ ಎಂದು ಸೂರ್ಯನನ್ನು ಕೂಸಿನಿಂದ ದೂರವಿಡುವುದೇ ಹೆಚ್ಚು.
ಹುಟ್ಟಿದ ತಾರೀಖುಗಳು 1,10,19,28 ಎಂಬವು ಸೂರ್ಯನ ಸಂಖ್ಯೆ. ಸಂಖ್ಯೆಗಳನ್ನು ಕೂಡಿಸಿದಾಗ ಕೊನೆಯಲ್ಲಿ ಅದು 1 ಎಂದೇ ಆಗುತ್ತದೆ. ಅದರಂತೆ 2, 11, 20, 29 ಎಂಬುದು ಚಂದ್ರನ ಸಂಖ್ಯೆ ಎನ್ನುತ್ತಾರೆ. ಈ ಸಂಖ್ಯೆಗಳನ್ನು ಕೂಡಿಸಿದಾಗ ಕೊನೆಯಲ್ಲಿ ಬರುವುದು 2. ಸಂಖ್ಯಾಶಾಸ್ತ್ರದ ಪ್ರಕಾರ ಈ ದಿನಗಳನ್ನು ಹುಟ್ಟಿದವರು ಸರಳ ಮತ್ತು ಶಾಂತ ಸ್ವಭಾವದವರು ಆಗಿರುತ್ತಾರೆ ಎನ್ನುತ್ತಾರೆ. ಎಲ್ಲಕ್ಕೂ ವಿನಾಯಿತಿ ಇರುತ್ತದೆ ಬಿಡಿ.
ಇನ್ನೊಂದರ್ಥದಲ್ಲಿ ಚಂದ್ರನು ಕೂಲ್ ಎನ್ನಬಹುದು. ತಂಪು ಎನ್ನುವುದು ಕೆಲವರಿಗೆ ಹಿಂಸೆಯೂ ಆಗುತ್ತದೆ ಅಂತ ಕವಿರತ್ನ ಕಾಳಿದಾಸ ಚಿತ್ರದಲ್ಲಿ ಕಂಡಿದ್ದು. ಹುಣ್ಣಿಮೆಯ ರಾತ್ರಿಯಲ್ಲಿ ಸಮುದ್ರದಿಂದ ದೂರವಿರಿ ಎಂದೂ ಹೇಳುತ್ತಾರೆ. ಪೌರ್ಣಿಮೆಯ ರಾತ್ರಿಯಲ್ಲಿ ಸಮುದ್ರದ ಅಲೆಗಳು ಒಂದೋ ಹೆಚ್ಚು ಹುಚ್ಚೆದ್ದು ಕುಣಿಯುತ್ತದೆ ಅಥವಾ ಅತೀ ಕಡಿಮೆ ಸ್ತರದಲ್ಲಿದ್ದು ವಂಚಿಸುತ್ತದೆ ಕೂಡ.
ಸೂರ್ಯನಿಂದ ಹೊರಹೊಮ್ಮುವ ಬೆಳಕಿಗೆ ನಾನಾ ಹೆಸರುಗಳು. ಅವು ಎಳೆಬಿಸಿಲು, ಬಿಸಿಲು, ಉರಿಬಿಸಿಲು ಯಾವುದೇ ಆಗಿರಬಹುದು. ಆದರೆ ಚಂದ್ರನ ಬೆಳಕಿನ ಹೆಸರು ಮಾತ್ರ ಬಲು ಹಿತವಾಗಿಯೇ ಕೇಳಿಸುತ್ತದೆ “ಬೆಳದಿಂಗಳು’ ಅಂತ. ಚಂದ್ರನು ಬಿಳಿಪು ಎಂಬರ್ಥದಲ್ಲಿ, ಆ ಬೆಳದಿಂಗಳನ್ನು ಮೈಗೂಡಿಸಿಕೊಂಡ ಬಾಲೆಯೇ “ಬೆಳದಿಂಗಳ ಬಾಲೆ’. ಅಂಥಾ ಬಾಲೆಯು ಬಿಳಿಯ ಹೂವುಗಳಿಂದ ಆಲಂಕೃತವಾದ ಉಯ್ಯಾ ಲೆಯಲ್ಲಿ ಕೂತು ಆಡುವುದನ್ನು ಊಹಿಸಿಕೊಳ್ಳುವ ಪರಿಯೇ ಮತ್ತೂ ಸೊಗಸು.
ನಮ್ಮ ಎಚ್.ಎಸ್.ವಿ ಅವರ ಸಾಹಿತ್ಯದ “ತೂಗು ಮಂಚದಲ್ಲಿ ಕೂತು ಮೇಘಶಾಮ ರಾಧೆಗಾತು’ ಅದೆಷ್ಟು ಸೊಗಸಿದೆ ಎಂಬುದನ್ನು ಸಾಹಿತ್ಯವನ್ನು ಸವಿದು ನೋಡಿದಾಗಲೇ ಅರಿವಾಗೋದು. ಚಲನಚಿತ್ರದಲ್ಲೂ ಈ ಸಾಹಿತ್ಯದ ಬಳಕೆಯಾಗಿದ್ದು ಈ ಹಾಡು ಕೇಳಲೂ ಬಲು ಹಿತ. ಈ ಸಾಹಿತ್ಯದ ಒಂದು ಭಾಗ “ಚಾಚುತಿರಲು ಅರಳಿದರಳು ಯಮುನೆಯೆಡೆಗೆ ಚಂದ್ರ ಬರಲು’. ಅಗ್ನಿಪುರಾಣದ ಪ್ರಕಾರ ಯಮುನಾ ನದಿಯು ಕಪ್ಪು ಬಣ್ಣ. ಕೃಷ್ಣನೂ ಕಪ್ಪು. ಆ ಯಮುನೆಯೆಡೆ ಚಂದ್ರ ಬರಲು ಎಂಬುದು ಕೃಷ್ಣನೆಡೆಗೆ ರಾಧೇ ಬರಲು ಎಂಬುದು ಕವಿ ಇಂಗಿತವೇ? ಅಂದ ಹಾಗೆ, ಈಚೆಗೆ ತ್ರಿವೇಣಿ ಸಂಗಮದಲ್ಲಿ ನಾ ಕಂಡಂತೆ ಗಂಗೆ ಬಿಳಿಯಾದರೆ, ಯಮುನೆ ಕಪ್ಪು. ನದಿಗೆ ಬಿಡಲಾಗುವ ಕಲ್ಮಶದಿಂದ ಹಾಗಾಗಿದೆ ಎಂಬುದೂ ಹೌದು ಆದರೆ ಪುರಾಣ ಕಾಲದಲ್ಲಿ ಇಂಥಾ ಫ್ಯಾಕ್ಟರಿಗಳು ಇರಲಿಲ್ಲವಲ್ಲ!
ಹುಣ್ಣಿಮೆಯ ಚಂದ್ರನು ಗುಂಡಾಗಿ ಕಾಣುತ್ತಾನೆ ಮತ್ತು ಕೊಂಚ ಹಳದಿ ಬಣ್ಣದಲ್ಲಿರುತ್ತಾನೆ ಎಂಬುದಕ್ಕೆ ಬಹುಶ: ಚಂದಮಾಮನನ್ನು “ಚಕ್ಕುಲಿಮಾಮ’ ಎಂದೂ ಕರೆಯುತ್ತಾರೆ. “ಎಲ್ಲೂ ಹೋಗೋಲ್ಲ ಮಾಮ’ ಎಂಬ ಹಾಡಿನಲ್ಲಿ “ಚಂದಮಾಮ ಚಕ್ಕುಲಿಮಾಮ ನನ್ನನು ನೋಡಿ ನಗುತಿರುವ’ ಎಂಬ ಸಾಲಿನ ಕಲ್ಪನೆ ಚೆನ್ನಾಗಿದೆ.
ಚಂದ್ರನು ಹೆಂಗಳ ಪ್ರಿಯ ಎಂಬುದು ನಿಜ. ಮದುವೆಯಾದ ಹೆಂಗಳಿಗೆ ಭ್ರಾತೃ ಸಮಾನ ಎಂಬುದು ಆಯ್ತು ಎನಿಸಿದರೂ ಬೇರೊಂದು ಅರ್ಥದಲ್ಲಿ ಇವನು ಹೆಂಗಳಿಗೆ ಇಷ್ಟವಾಗುತ್ತಾನೆ. ಹೇಗೆ? ಚಂದ್ರನು ಹೆಚ್ಚಿನ ವೇಳೆ ಮಬ್ಬು-ಬಿಳುಪು ಆದರೆ ಅಂದುಕೊಳ್ಳೋದು ಬಿಳುಪು ಅಂತ. ಅದು ಬಿಟ್ಟರೆ ಮಿಕ್ಕಂತೆ ಒಂದಲ್ಲ ಒಂದು ರೀತಿ ಹೊಳೆವ ಬಣ್ಣ. ಅಮಾವಾಸ್ಯೆ ಕಳೆದ ಅನಂತರ ವೃದ್ಧಿಸುವ, ಪೌರ್ಣಿಮೆಯ ಅನಂತರ ಕ್ಷೀಣಿಸುವ ಚಂದ್ರನು ಹಲವಾರು ಆಕಾರಗಳಲ್ಲಿ ಕಾಣಿಸುತ್ತಾನೆ. ಒಟ್ಟಾರೆ ಹೇಳುವುದಾದರೆ ಚಂದ್ರನು ಹಲವಾರು ಬಣ್ಣಗಳು ಮತ್ತು ಡಿಸೈನ್ಗಳಲ್ಲಿ ಲಭ್ಯ. ಹೀಗಾಗಿ ಚಂದ್ರನು ಹೆಂಗಳ ಪ್ರಿಯ.
ಚಂದ್ರನು ಆಗಸದಲ್ಲಿ ಮೂಡಿರುವಾಗ ಸದಾ ಕಾಲ ಹಿತವನ್ನೇ ನೀಡುವುದಿಲ್ಲ ಎಂಬುದು ಸಾಂಪ್ರದಾಯಿಕವಾಗಿಯೂ ನಿಜ. ಉತ್ತರಭಾರತೀಯರು ಆಚರಿಸುವ ಒಂದು ವಿಶೇಷ ಹಬ್ಬ ಎಂದರೆ ಕರ್ವಾ ಚೌತ್. ಆ ದಿನದಲ್ಲಿ ಇಡೀ ದಿನ ಉಪವಾಸವಿರುವ ಹೆಂಗಳು, ಇರುಳು ಮೂಡಿದಂತೆ ಚಂದ್ರನನ್ನು ಹುಡುಕುತ್ತಾರೆ. ಅವನು ಮೂಡಲಿ, ಕಣ್ಣಿಗೆ ಕಾಣಿಸಲಿ ಎಂದೇ ಓಡಾಡುತ್ತಾರೆ. ಅಂತೆಯೇ ಅಂಗಾರಕ ಸಂಕಷ್ಟಿ ಚತುರ್ಥಿಯಂದೂ ಇಂಥದ್ದೇ ಆಚರಣೆ. ಚಂದ್ರ ದರ್ಶನ ಆಗುವವರೆಗೂ ಉಪವಾಸವನ್ನು ಮುರಿಯಲಾಗದು. ನನಗೆ ಅರಿವಿರುವಂತೆ, ಈ ಎರಡೂ ಸಂದರ್ಭದಲ್ಲಿ ಚಂದ್ರನು ಬಹಳಾ ಮುಖ್ಯನಾಗುತ್ತಾನೆ.
ಅವನಿಗಾಗಿ ಕಾಯುವಂತೆ ಆಗುತ್ತದೆ. ಆದರೆ ಇದೇ ಚಂದ್ರನ ದರ್ಶನವು, ಗಣೇಶ ಚತುರ್ಥಿಯ ರಾತ್ರಿಯ ದಿನವಾದಲ್ಲಿ ಬಲು ಕೋಪ ಬರುತ್ತದೆ ಅಲ್ಲವೇ? ಚಂದ್ರನು ಸುರಸುಂದರ ಅದರಂತೆಯೇ ನಾನಾ ರೀತಿಯಲ್ಲಿ ಸುಪ್ರಸಿದ್ಧ ಮತ್ತು ಕೆಲವೊಮ್ಮೆ ಕುಪ್ರಸಿದ್ಧ ಕೂಡ. ಈ ಶನಿವಾರವು ಹೇಮಂತ ಋತು, ಮಾರ್ಗಶಿರ ಮಾಸದ ಶುಕ್ಲಪಕ್ಷದ ಪೌರ್ಣಿಮೆ ಎಂಬ ವಿಷಯ ತಲೆಗೆ ಬಂದಿದ್ದೇ ಈ ಕಂತಿನ ಚಂದ್ರಪುರಾಣ.