Advertisement

Syria ಕ್ಷಿಪ್ರ ದಂಗೆ: ಸರ್ವಾಧಿಕಾರಿ ಪರಾರಿ; ಅಸಾದ್‌ ಕುಟುಂಬದ ದೀರ್ಘ‌ ಆಳ್ವಿಕೆ ಅಂತ್ಯ

01:21 AM Dec 09, 2024 | Team Udayavani |

ಡಮಾಸ್ಕಸ್‌: ಬರೋಬ್ಬರಿ 12 ವರ್ಷಗಳ ಅಂತರ್ಯುದ್ಧಕ್ಕೆ ಸಾಕ್ಷಿಯಾದ ಸಿರಿಯಾ ಈಗ ಬಂಡುಕೋರರ
ವಶವಾಗಿದೆ. ಬಂಡುಕೋರರು ಮಿಂಚಿನ ವೇಗದಲ್ಲಿ ನಡೆಸಿದ ಕಾರ್ಯಾಚರಣೆ ಅಸಾದ್‌ ಸರಕಾರದ ಪತನದೊಂದಿಗೆ ಮುಕ್ತಾಯವಾಗಿದೆ.

Advertisement

12 ದಿನಗಳಿಂದ ಒಂದೊಂದೇ ನಗರವನ್ನು ಆಕ್ರಮಿಸಿಕೊಳ್ಳುತ್ತ ಬಂದ ಇಸ್ಲಾಮಿಕ್‌ ಮೂಲಭೂತವಾದಿ ಸಂಘ
ಟನೆ ಹಯಾತ್‌ ತಹ್ರೀರ್‌ ಅಲ್‌-ಶಾಮ್‌, ರವಿವಾರ ಮುಂಜಾನೆ ರಾಜಧಾನಿ ಡಮಾಸ್ಕಸ್‌ ಅನ್ನು ಕೈವಶ
ಮಾಡಿಕೊಂಡಿತು. ಈ ಮೂಲಕ ಅಸಾದ್‌ ಅವರ 24 ವರ್ಷಗಳ ಆಡಳಿತಕ್ಕೆ ಅಂತ್ಯ ಹಾಡಿತು.

“ಸಿರಿಯಾ ಈಗ ಸ್ವತಂತ್ರ ದೇಶ’ ಎಂದು ಘೋಷಿಸಿರುವ ಎಚ್‌ಟಿಎಸ್‌ಯ ಹಿರಿಯ ಕಮಾಂಡರ್‌ ಲೆಫ್ಟಿನೆಂಟ್‌ ಕರ್ನಲ್‌ ಹಸನ್‌ ಅಬ್ದುಲ್‌-ಘನಿ, “ಅಧ್ಯಕ್ಷ ಅಸಾದ್‌ ಆಡಳಿತ ಅಂತ್ಯವಾಗಿದೆ. ಈಗ ಸಿರಿಯಾದಲ್ಲಿ ಹೊಸ ಯುಗ ಆರಂಭವಾಗಿದೆ. ಎಲ್ಲ ಕೈದಿಗಳನ್ನೂ ನಾವು ಬಿಡುಗಡೆ ಮಾಡಿದ್ದೇವೆ’ ಎಂದು ಹೇಳಿರುವ ವೀಡಿಯೋ ಸಂದೇಶವು ಸಿರಿಯಾದ ಸರಕಾರಿ ಸ್ವಾಮ್ಯದ ಚಾನೆಲ್‌ನಲ್ಲಿ ರವಿವಾರ ಬೆಳಗ್ಗೆ ಪ್ರಸಾರವಾಯಿತು.

ಈ ಮೂಲಕ ಬಂಡಾಯದ ಮೂಲಕ ಪತನಗೊಂಡ ಸರಕಾರಗಳ ಪಾಲಿಗೆ ಸಿರಿಯಾ ಕೂಡ ಸೇರ್ಪಡೆಯಾದಂತಾಗಿದೆ. ಈ ಹಿಂದೆ ಲಿಬಿಯಾ, ಈಜಿಪ್ಟ್, ಅಫ್ಘಾನಿಸ್ಥಾನ, ಬಾಂಗ್ಲಾ, ಯೆಮೆನ್‌, ಸುಡಾನ್‌ ಸಹಿತ ಹಲವು ದೇಶಗಳ ಸರಕಾರಗಳು ಇದೇ ಮಾದರಿಯಲ್ಲಿ ಪತನಗೊಂಡಿದ್ದವು.

ಅಧ್ಯಕ್ಷ ಅಸಾದ್‌ ದೇಶ ತೊರೆದು ಪರಾರಿಯಾಗಿದ್ದು, ಎಲ್ಲಿಗೆ ಹೋಗಿದ್ದಾರೆ ಎಂಬ ಮಾಹಿತಿ ಇಲ್ಲ ಎಂದು ಸಿರಿಯಾದ ಮಾಧ್ಯಮಗಳು ವರದಿ ಮಾಡಿವೆ. ಅಸಾದ್‌ ಹೋಗಿರುವ ವಿಮಾನವು ರೇಡಾರ್‌ ಸಂಪರ್ಕ ಕಡಿದುಕೊಂಡಿದ್ದು, ಅದು ಪತನಗೊಂಡಿರುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

Advertisement

ಸಾರ್ವಜನಿಕರಿಂದ ಸಂಭ್ರಮ
ಇಷ್ಟೊಂದು ಕ್ಷಿಪ್ರಗತಿಯಲ್ಲಿ ಅಸಾದ್‌ ಸರಕಾರವು ದೇಶದ ಮೇಲಿನ ನಿಯಂತ್ರಣ ಕಳೆದುಕೊಂಡಿತು ಎಂಬುದನ್ನು ನಂಬಲು ಸಿದ್ಧವಿರದ ರಾಜಧಾನಿಯ ಜನರು, ಬೆಳ್ಳಂಬೆಳಗ್ಗೆ ಸರಕಾರ ಪತನಗೊಂಡ ಸುದ್ದಿ ಕೇಳುತ್ತಿದ್ದಂತೆಯೇ ಬೆರಗಾದರು. ಎಲ್ಲರೂ ರಾಜಧಾನಿಯ ಪ್ರಮುಖ ಚೌಕಗಳಿಗೆ, ಮಸೀದಿಗಳಿಗೆ ಆಗಮಿಸಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ದೇವರು ದೊಡ್ಡವನು ಎಂದು ಕೂಗಾಡಿದ್ದಾರೆ. ಅಸಾದ್‌ ಸರಕಾರದ ವಿರುದ್ಧ ಘೋಷಣೆಗಳನ್ನು ಮೊಳಗಿಸಿದ್ದಾರೆ. ಸಿರಿಯಾದ ಯೋಧರು ತಮ್ಮ ಸಮವಸ್ತ್ರಗಳನ್ನು ರಸ್ತೆಗಳಲ್ಲಿ ಎಸೆಯುವ ಮೂಲಕ ಅಸಾದ್‌ ಸರಕಾರದ ವಿರುದ್ಧದ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಇನ್ನು ಕೆಲವು ಸೈನಿಕರು, ಸರಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು ದೇಶ ಬಿಟ್ಟು ಪರಾರಿಯಾಗಿದ್ದಾರೆ.

ಅಧ್ಯಕ್ಷರ ಅರಮನೆಗೆ
ನುಗ್ಗಿ ರಂಪಾಟ
ಈ ಹಿಂದೆ ಶ್ರೀಲಂಕಾ, ಬಾಂಗ್ಲಾದೇಶದಲ್ಲಿ ಆದ ಬೆಳವಣಿಗೆಯೇ ರವಿವಾರ ಸಿರಿಯಾದಲ್ಲೂ ನಡೆದಿದೆ. ಬಂಡುಕೋರರು ಸಿರಿಯಾವನ್ನು ವಶಕ್ಕೆ ಪಡೆಯುತ್ತಿದ್ದಂತೆ, ಕಿಡಿಗೇಡಿಗಳು ಅಧ್ಯಕ್ಷ ಅಸಾದ್‌ ಅವರ ಅರಮನೆಗೆ ನುಗ್ಗಿ, ಕೈಗೆ ಸಿಕ್ಕಿದ್ದನ್ನೆಲ್ಲ ದೋಚಿದ್ದಾರೆ.

12 ವರ್ಷಗಳ ಸಂಘರ್ಷ
ಪ್ರಜಾಪ್ರಭುತ್ವ ಪರ ಹೋರಾಟಗಾರರ ದಮನಕ್ಕೆ ಅಸಾದ್‌ ಪಡೆಗಳು ನಡೆಸಿದ ಕ್ರೌರ್ಯವು 2011ರಲ್ಲಿ ಅಸಾದ್‌ ಸರಕಾರದ ವಿರುದ್ಧದ ನಾಗರಿಕ ಯುದ್ಧವಾಗಿ ಮಾರ್ಪಾಡಾಯಿತು. ಈ ಸಂಘರ್ಷದಲ್ಲಿ ಸುಮಾರು 5 ಲಕ್ಷ ಜನರು ಮೃತಪಟ್ಟರೆ, 1.20 ಕೋಟಿ ಜನರು ನಿರ್ವಸಿತರಾದರು. ಕೆಲವರು ಪಾಶ್ಚಿಮಾತ್ಯ, ಅರಬ್‌ ದೇಶಗಳು ಹಾಗೂ ಟರ್ಕಿ ಬೆಂಬಲದೊಂದಿಗೆ ಬಂದೂಕು ಕೈಗೆತ್ತಿಕೊಂಡರು. ಆಗ ಆರಂಭವಾದ ಅಸ್ಥಿರತೆಯು ಐಸಿಸ್‌ ಉಗ್ರರ ಹುಟ್ಟಿಗೆ ಕಾರಣವಾಯಿತು. ಅಸಾದ್‌ ಆಡಳಿತಕ್ಕೆ ರಷ್ಯಾ, ಇರಾನ್‌, ಇರಾಕ್‌ ಸೇನೆಗಳು ಮತ್ತು ಹೆಜ್ಬುಲ್ಲಾ ಬೆಂಬಲ ನೀಡಿದರೆ, ಟರ್ಕಿಯು ಬಂಡುಕೋರರ ಬೆನ್ನಿಗೆ ನಿಂತಿತು.

ಅಸಾದ್‌ ಹೋದ. ದೇಶವನ್ನೇ ಬಿಟ್ಟು ಪರಾರಿಯಾದ. ಇಲ್ಲಿಯವರೆಗೆ ಅಸಾದ್‌ಗೆ ರಕ್ಷಣೆ ನೀಡುತ್ತಿದ್ದ ವ್ಲಾಡಿಮಿರ್‌ ಪುತಿನ್‌ ನೇತೃತ್ವದ ರಷ್ಯಾಕ್ಕೆ ಕೂಡ ಅವನನ್ನು ರಕ್ಷಿಸಲಾಗಲಿಲ್ಲ. ರಷ್ಯಾ ಮತ್ತು ಇರಾನ್‌ ಈಗ ಅತ್ಯಂತ ದುರ್ಬಲ ಸ್ಥಿತಿಗೆ ತಲುಪಿವೆ.
– ಡೊನಾಲ್ಡ್‌ ಟ್ರಂಪ್‌, ಅಮೆರಿಕದ ನಿಯೋಜಿತ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next