Advertisement

ಏರುದನಿಯಲ್ಲಿ ವಿರೋಧಿಸುತ್ತಿದ್ರು…

01:59 PM Sep 09, 2017 | Team Udayavani |

ಇಂದಿನ ಅಧಿಕಾರಸ್ಥರಲ್ಲಿ ಮನೆಮಾಡಿರುವ ಅಸಹನೆ, ಅವರನ್ನು ವಿರೋಧಿಸುತ್ತಿರುವವರಿಗೆ ಇರುವ ಅನಾಯಕತ್ವ, ಇದರ ಪರಿಣಾಮವಾಗಿ ಅಡಕತ್ತರಿಗೆ ಸಿಕ್ಕಿದಂತಿರುವ ಜನಸಾಮಾನ್ಯರ ಬದುಕು ತೇಜಸ್ವಿಯವರನ್ನು ಖಂಡಿತವಾಗಿ ಲೇಖನಿ ಕೆಳಗಿಟ್ಟು, ಕ್ಯಾಮರಾ ಬದಿಗಿಟ್ಟು, ಗಾಳವನ್ನು ಬಿಸಾಕಿ, ಬೀದಿಗೆ ತಂದು ನಿಲ್ಲಿಸುತ್ತಿತ್ತು ಎನ್ನುವುದರಲ್ಲಿ ಅನುಮಾನವಿಲ್ಲ. 

Advertisement

ತೇಜಸ್ವಿ ಮೂಲತಃ ಒಬ್ಬ ಚಿಂತಕ, ಹೋರಾಟಗಾರ ಮತ್ತು ಲೇಖಕ.  ಹೋರಾಟಗಳು ದಿಕ್ಕು ತಪ್ಪಿದಾಗ, ಸ್ವಹಿತಾಸಕ್ತಿಯೇ ಮುಂಚೂಣಿಗೆ ಬಂದಾಗ, ಕಾಡಿಗೆ ತೆರಳಿ, ನಿರ್ಜನ ಪ್ರದೇಶದಲ್ಲಿ ಪ್ರಕೃತಿಯೊಂದಿಗೆ ಸಂವಾದ ನಡೆಸಿ, ಬರವಣಿಗೆ, ಛಾಯಾಗ್ರಹಣ, ಪರಿಸರದ ಬಗ್ಗೆ ಕಾಳಜಿ ಮೂಲಕ ನಾಡಿನ ಜನತೆಗೆ ಸಂದೇಶ ತಲುಪಿಸುವ ಕಾಯಕಕ್ಕೆ ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡವರು.

ಇಂದಿನ ಸಾರ್ವಜನಿಕ ಬದುಕಿನಲ್ಲಿ ನಿರ್ಲಜ್ಜವಾಗಿ ನಡೆಯುತ್ತಿರುವ ಜಾತಿಗಳ ಮೇಲಾಟ, ಅಕ್ರಮವಾಗಿ ಗಳಿಸಿದ ಸಂಪತ್ತಿನ ಅಸಹ್ಯಕರ ಪ್ರದರ್ಶನ, ಪಾತಕಿಗಳು ಜನನಾಯಕರಾಗುತ್ತಿರುವ ವಿಪರ್ಯಾಸ, ಉದ್ಯಮಪತಿಗಳು, ಬಂಡವಾಳಷಾಹಿಗಳು ಮಾದ್ಯಮಗಳನ್ನು ಮತ್ತು ರಾಜಕೀಯವನ್ನು ನಿಯಂತ್ರಿಸುತ್ತಿರುವ ಪರಿ, ರಾಜಪ್ರಭುತ್ವವನ್ನು ನಾಚಿಸುವ ರೀತಿಯಲ್ಲೂ ಪ್ರಜಾಪ್ರಭುತ್ವದ ಹೆಸರಿನಲ್ಲಿ ನಡೆಯುತ್ತಿರುವ ಕುಟುಂಬ ರಾಜಕಾರಣ, ತೇಜಸ್ವಿಯವರನ್ನು ಮತ್ತೆ ಲೋಹಿಯಾ ಅವರ, ಜಯಪ್ರಕಾಶ್‌ ನಾರಾಯಣ್‌ ಅವರ ದಿನಗಳಿಗೆ ಕೊಂಡೊಯ್ದಿದ್ದರೆ ಆಶ್ಚರ್ಯವಿಲ್ಲ.  ಹೋರಾಟ ಬಿಟ್ಟು, ಲೇಖನಿಗೆ ಶರಣಾಗಿದ್ದ ತೇಜಸ್ವಿ ಮತ್ತೆ ಹೋರಾಟಕ್ಕೆ ಇಳಿದಿದ್ದರೆ ಆಶ್ಚರ್ಯವೇನೂ ಆಗುತ್ತಿರಲಿಲ್ಲ.

ಸಾಮೂಹಿಕ ಸನ್ನಿಗೆ ಒಳಗಾಗಿರುವ ಜನ, ಪ್ರಾಥಮಿಕ ಶಿಕ್ಷಣಕ್ಕೂ ಆಂಗ್ಲ ಭಾಷೆಯನ್ನು ಅವಲಂಬಿಸುತ್ತಾ, ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಭ್ರಷ್ಟಾಚಾರವನ್ನು ಅನಿವಾರ್ಯವೆಂದು ಸಹಿಸುತ್ತಾ, ಸಹಜವೆಂಬಂತೆ ಬದುಕುತ್ತಿರುವುದನ್ನು ಕಂಡು ತೇಜಸ್ವಿ ಇದೇ ಗಾಂಧಿ, ಅಂಬೇಡ್ಕರ್‌, ಲೋಹಿಯಾ, ಜೆ.ಪಿ ಸಕ್ರಿಯವಾಗಿದ್ದ ಭಾರತವೇ? ಎಂದು ಆಶ್ಚರ್ಯಚಕಿತರಾಗುತ್ತಿದ್ದುದು ಖಂಡಿತ. 

ಕಪ್ಪು$ಹಣವನ್ನು ನಿಗ್ರಹಿಸುವ, ಭಯೋತ್ಪಾದನೆ ತೊಡೆದುಹಾಕುವ ಹೆಸರಿನಲ್ಲಿ ನಡೆದ ನೋಟುಗಳ ಅಮಾನ್ಯಿàಕರಣದಿಂದಾಗಿ ತತ್ತರಿಸಿದ ಸಾಮಾನ್ಯ ರೈತರು, ಸಣ್ಣ ವ್ಯಾಪಾರಿಗಳು, ಸಣ್ಣಪುಟ್ಟ ಉದ್ದಿಮೆದಾರರು ಮತ್ತು ಜನಸಾಮಾನ್ಯರು ತೇಜಸ್ವಿಯವರಿಗೆ ತಬರನ ಕಥೆಗಿಂತ ಪರಿಣಾಮಕಾರಿಯಾಗಿ ಕಂಡು, ಮತ್ತೂಂದು ಕೃತಿ ರಚನೆಗೆ ಪ್ರೇರಕವಾಗುತ್ತಿದ್ದುದು ನಿಸ್ಸಂಶಯ. 

Advertisement

“ಒಂದು ದೇಶ ಒಂದು ತೆರಿಗೆ’, ‘ಒಂದು ದೇಶ ಒಂದು ಕಾನೂನು’, ‘ಒಂದು ದೇಶ ಒಂದು ಭಾಷೆ’ ಈರೀತಿಯ ಆಲೋಚನೆಗಳು, ಭಾರತದ ಬಹುತ್ವವನ್ನು, ಒಕ್ಕೂಟ ವ್ಯವಸ್ಥೆಯನ್ನು ನಾಶಪಡಿಸುವ, ಒಂದೇ ಚಿಂತನೆ ಮತ್ತು ಒಂದೇ ಸಂಸ್ಕೃತಿಯನ್ನು ಹೇರುವ ಹುನ್ನಾರವೆಂಬುದನ್ನು ಏರುಧ್ವನಿಯಲ್ಲಿ ತೇಜಸ್ವಿ ಹೇಳುತ್ತಿದ್ದುದು ನಿಶ್ಚಿತ. 

ಮಾಧ್ಯಮಗಳು, ವಿಶೇಷವಾಗಿ ದೃಶ್ಯ ಮಾಧ್ಯಮಗಳು ಇಂದು ಜನರಿಗೆ ಉಣಬಡಿಸುತ್ತಿರುವ ವಿಚಾರಗಳು, ‘ಜಾಗತೀಕರಣ’ ಮತ್ತು ‘ಅನಿರ್ಬಂಧಿತ ಬಂಡವಾಳ ಹೂಡಿಕೆ’ ಯಾವ ದುಷ್ಪ$ರಿಣಾಮವನ್ನು ಬೀರಬಲ್ಲುದು ಎಂಬುದನ್ನು ಮುಂಚೆಯೇ ಗ್ರಹಿಸಿದ್ದ ತೇಜಸ್ವಿಯುವರು ‘ಖಾಸಗೀಕರಣ’, ‘ಉದಾರೀಕರಣ’ ಮತ್ತು ‘ಜಾಗತೀಕರಣ’ವನ್ನು ಖಂಡತುಂಡವಾಗಿ ವಿರೋಧಿಸಿದ್ದರು.  ಅವರ ನಿಲುವು ಸರಿಯೆಂದು ಇಂದು ಒಪ್ಪಲೇಬೇಕಾಗಿದೆ.  

ಡಾ. ಬಿ. ಎಲ್‌. ಶಂಕರ್‌

Advertisement

Udayavani is now on Telegram. Click here to join our channel and stay updated with the latest news.

Next