ಕಲ್ಲಿಕೋಟೆ: ಮಲಯಾಳ ಸಾಹಿತ್ಯದಮೇರು ಕವಿ, ಕಾದಂಬರಿಕಾರ, ಚಿತ್ರ ನಿರ್ದೇಶಕ, ಚಿತ್ರಕಥೆ ಬರಹಗಾರ ಎಂ.ಟಿ.ವಾಸುದೇವನ್ ನಾಯರ್(91) ಅವರು ಅನಾರೋಗ್ಯದಿಂದ ಬುಧವಾರ ಕೊನೆಯುಸಿರೆಳೆದಿದ್ದಾರೆ.
ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ನಾಯರ್ ಅವರನ್ನು 11 ದಿನಗಳ ಹಿಂದೆ ಕಲ್ಲಿಕೋಟೆಯ ಆಸ್ಪತ್ರೆ ಯೊಂದಕ್ಕೆ ಸೇರಿಸಲಾಗಿತ್ತು. ಬುಧವಾರ ಅವರ ಆರೋಗ್ಯ ತೀವ್ರ ಹದಗೆಟ್ಟಿದ್ದು, ವಿಧಿವಶರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಕಾದಂಬರಿ, ಸಣ್ಣಕಥೆ, ಚಿತ್ರಕಥೆ, ಮಕ್ಕಳ ಸಾಹಿತ್ಯ, ಸಿನೆಮಾ ನಿರ್ದೇಶನಗಳ ಮೂಲಕ ಅವರು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಅವರು 4 ಸಿನೆಮಾಗಳನ್ನೂ ನಿರ್ದೇಶಿಸಿದ್ದಾರೆ. ಅವರು ನಿರ್ದೇಶಿಸಿದ್ದ “ನಿರ್ಮಾಲ್ಯಂ’ ಮಲಯಾಳದ ಪ್ರಮುಖ ಸಿನೆಮಾ ಎಂದು ಗುರುತಿಸಿಕೊಂಡಿದೆ. ಅವರು ಬರೆದ 4 ಚಿತ್ರಕಥೆಗಳಿಗೆ ರಾಷ್ಟ್ರೀಯ ಪ್ರಶಸ್ತಿಗಳೂ ಸಿಕ್ಕಿವೆ. 11 ಬಾರಿ ಕೇರಳ ರಾಜ್ಯ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಹಲವು ಪ್ರಶಸ್ತಿ ಪುರಸ್ಕಾರ
ನಾಯರ್ ಅವರ ಸಾಧನೆಯನ್ನು ಗುರುತಿಸಿ 2005ರಲ್ಲಿ ಪದ್ಮವಿಭೂಷಣ ಗೌರವ ನೀಡಿ ಕೇಂದ್ರ ಸರಕಾರ ಗೌರವಿಸಿತ್ತು. ಜ್ಞಾನಪೀಠ, ಎಳುತ್ತಾಚಾನ್ ಪುರಸ್ಕಾರ, ವಯಲಾರ್ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಅವರಿಗೆ ಸಿಕ್ಕಿವೆ.