ನಾ.ಡಿಸೋಜ ಅವರು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ 1937ರ ಜೂನ್ 6ರಂದು ಜನಿಸಿದ್ದರು. (ಇವರ ಪೂರ್ಣ ಹೆಸರು ನಾರ್ಬರ್ಟ್ ಡಿಸೋಜ) ತಂದೆ ಎಫ್.ಬಿ.ಡಿಸೋಜ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾಗಿದ್ದರು. ತಾಯಿ ರೂಪೀನಾ ಡಿಸೋಜ. ತಂದೆ ಶಾಲಾ ಮಕ್ಕಳಿಗೆ ಕಲಿಸಲು ಬರೆದಿಟ್ಟುಕೊಳ್ಳುತ್ತಿದ್ದ, ಪುಸ್ತಕಗಳಲ್ಲಿನ ಪದ್ಯಗಳನ್ನು ಕಲಿಯುವುದರ ಮೂಲಕ ನಾ.ಡಿಸೋಜ ಅವರ ಸಾಹಿತ್ಯಾಸಕ್ತಿ ಚಿಗುರೊಡೆಯಲು ಆರಂಭವಾಗಿತ್ತು. ಜೊತೆಗೆ ತಾಯಿ ಹೇಳುತ್ತಿದ್ದ ಜನಪದ ಗೀತೆಗಳು, ಕಥೆಗಳು ಡಿಸೋಜರ ಮನಸ್ಸಿನ ಮೇಲೆ ಮೋಡಿ ಮಾಡತೊಡಗಿದ್ದವು. ನಾ.ಡಿಸೋಜ ಹೈಸ್ಕೂಲಿನಲ್ಲಿದ್ದಾಗಲೇ ಇವರ ಸಾಹಿತ್ಯಾಸಕ್ತಿಯನ್ನು ನೋಡಿ, ಪ್ರೋತ್ಸಾಹಿಸಿದವರು ಗೊರೂರು ನರಸಿಂಹಾಚಾರ್ಯರು.
ಹೀಗೆ ಇಂಟರ್ ಮೀಡಿಯೇಟ್ ಕಾಲೇಜು, ಮೈಸೂರಿನಲ್ಲಿ ಶಿಕ್ಷಣ ಪಡೆದ ನಂತರ ನಾ.ಡಿಸೋಜ ಅವರು ಶೀಘ್ರಲಿಪಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವ ಮೂಲಕ ಅವರ ವೃತ್ತಿ ಬದುಕಿಗೊಂದು ಹಾದಿ ಕಲ್ಪಿಸಿಕೊಟ್ಟಿತ್ತು. ನಾ.ಡಿಸೋಜ ಅವರು ಲೋಕೋಪಯೋಗಿ ಇಲಾಖೆಯಲ್ಲಿ ಟೈಪಿಸ್ಟ್ ಆಗಿ ಉದ್ಯೋಗಕ್ಕೆ ಸೇರಿದ್ದರು. ನಂತರ ದ್ವಿತೀಯ ದರ್ಜೆ ನೌಕರರಾಗಿ, ಆ ಬಳಿಕ ಪ್ರಥಮ ದರ್ಜೆ ನೌಕರರಾಗಿ ಶರಾವತಿ ಯೋಜನೆ ಕಾರ್ಗಲ್, ಮಾಸ್ತಿಕಟ್ಟೆ, ತೀರ್ಥಹಳ್ಳಿ ಮುಂತಾದೆಡೆ ಕಾರ್ಯನಿರ್ವಹಿಸಿ 1995ರಲ್ಲಿ ನಿವೃತ್ತಿ ಹೊಂದಿದ್ದರು.
ಕಥಾಲೋಕದಲ್ಲಿ ನಾ..ಛಾಪು:
ನಾ.ಡಿಸೋಜ ಅವರು ಮೊದಲಿಗೆ ಪ್ರಪಂಚ ಪತ್ರಿಕೆಗೆ ಕಥೆಗಳನ್ನು ಬರೆಯತೊಡಗಿದ್ದರು. ನಂತರ ಕನ್ನಡದ ಎಲ್ಲಾ ಪ್ರಮುಖ ದೈನಿಕಗಳಲ್ಲೂ ಕಥೆಗಳು ಪ್ರಕಟವಾಗತೊಡಗಿದ್ದವು. 1964ರಲ್ಲಿ “ಬಂಜೆ ಬೆಂಕಿ” ಮೊದಲ ಕಾದಂಬರಿ ಪ್ರಕಟವಾಗಿತ್ತು. ನಂತರ ಮಂಜಿನ ಕಾನು. ಈ ನೆಲ ಈ ಜಲ, ಕೆಂಪು ತ್ರಿಕೋನ, ನೆಲೆ, ಮಾನವ ಹೀಗೆ ಸುಮಾರು 40 ಕಾದಂಬರಿಗಳನ್ನು ರಚಿಸಿದ್ದರು.
ಪರಿಸರ ನಾಶ, ಕ್ರೈಸ್ತ ಜನಾಂಗದ ಹಿನ್ನೆಲೆ, ಭ್ರಷ್ಟಾಚಾರ, ಹಿಂದುಳಿತ ಬುಡಕಟ್ಟು ಜನಾಂಗದ ಚಿತ್ರಣ, ಶರಾವತಿ ಹಿನ್ನೀರು ಹೀಗೆ ಹಲವು ವಿಷಯಗಳನ್ನೊಳಗೊಂಡ ಅವರ ಕಾದಂಬರಿಗಳು ಓದುಗರ ಮನಸೂರೆಗೊಂಡಿವೆ.
ಚಲನಚಿತ್ರಗಳಾದ ಪ್ರಸಿದ್ಧ ಕಾದಂಬರಿಗಳು:
ನಾಡಿಗೆ ಬೆಳಕನ್ನು ನೀಡಲು ಪ್ರಾರಂಭಿಸಿದ ವಿದ್ಯುಚ್ಛಕ್ತಿ ಯೋಜನೆಯ ಅಡಿಯಲ್ಲಿ ಬಹಳಷ್ಟು ಜನರ ಬದುಕುಗಳು ಕತ್ತಲೆಯಲ್ಲಿ ಕರಗಿ ಹೋಗುವ ವಿಷಯದ “ಮುಳುಗಡೆ” ಕಾದಂಬರಿ ಯುಗಾದಿ ಕಾದಂಬರಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿತ್ತು.
ನಿರ್ದೇಶಕ, ಪರಿಸರವಾದಿ ಸುರೇಶ್ ಹೆಬ್ಳೀಕರ್ ನಿರ್ದೇಶನದಲ್ಲಿ ಕಾಡಿನ ಬೆಂಕಿ, ಗಿರೀಶ್ ಕಾಸರವಳ್ಳಿ ನಿರ್ದೇಶನದಲ್ಲಿ ದ್ವೀಪ, ಸಿರಿಗಂಧ ಶ್ರೀನಿವಾಸಮೂರ್ತಿ ಅವರ ನಿರ್ದೇಶನದಲ್ಲಿ ಬಳುವಳಿ, ಕೋಡ್ಲೂ ರಾಮಕೃಷ್ಣ ಅವರ ನಿರ್ದೇಶನದಲ್ಲಿ ಬೆಟ್ಟದಪುರದ ದಿಟ್ಟ ಮಕ್ಕಳು, ಮನು ಅವರ ನಿರ್ದೇಶನದಲ್ಲಿ ಆಂತರ್ಯ ಕಾದಂಬರಿಗಳು ಚಲನಚಿತ್ರಗಳಾಗಿ ಜನಪ್ರಿಯತೆ ಪಡೆದಿತ್ತು. ಇವುಗಳಲ್ಲಿ ಕಾಡಿನ ಬೆಂಕಿ ಚಿತ್ರ ರಜತ ಕಮಲ ಪ್ರಶಸ್ತಿಯನ್ನೂ, ದ್ವೀಪ ಸಿನಿಮಾ ಸ್ವರ್ಣಕಮಲ ಪ್ರಶಸ್ತಿ ಗಳಿಸಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಹಿರಿಮೆ ಗಳಿಸಿವೆ. ದೂರದರ್ಶನದಲ್ಲಿ ಸಹ ಮಕ್ಕಳ ಧಾರವಾಹಿ, ಕಥೆಗಳು, ಹಲವಾರು ಕಾದಂಬರಿಗಳು ನಾಟಕಕ್ಕೆ ರೂಪಾಂತರವಾಗಿ ಪ್ರದರ್ಶಿತವಾಗಿವೆ.
ಮುಳುಗಡೆ, ಕೊಳಗ, ಒಳಿತನ್ನು ಮಾಡಲು ಬಂದವರು, ಬಣ್ಣ, ಪಾದರಿಯಾಗುವ ಹುಡುಗ, ಇಬ್ಬರು ಮಾಜಿಗಳು ಮುಂತಾದ ಕಾದಂಬರಿಗಳು ಕುವೆಂಪು ವಿವಿ, ಶಿವಮೊಗ್ಗದ ಬಿಎಸ್ಸಿ, ಬಿಕಾಂ ತರಗತಿಗಳಿಗೆ, ಬೆಂಗಳೂರು ವಿವಿಯ ಬಿಎ ತರಗತಿಗಳಿಗೆ, ಮಂಗಳೂರು ವಿವಿಯ ಬಿ.ಕಾಂ ತರಗತಿಗಳಿಗೆ ಮತ್ತು ಧಾರವಾಡ ಕರ್ನಾಟಕ ವಿವಿ ಸೇರಿದಂತೆ ಮುಂತಾದೆಡೆಗಳಲ್ಲಿ ಪಠ್ಯಪುಸ್ತಕಗಳಾಗಿ ಆಯ್ಕೆಯಾಗಿದೆ.
ನಾ.ಡಿಸೋಜ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಗುಲ್ವಾಡಿ ವೆಂಕಟರಾವ ಪ್ರಶಸ್ತಿ, ಅಖಿಲ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಪುತ್ತೂರು ನಿರಂಜನ ಸಾಹಿತ್ಯ ಪ್ರಶಸ್ತಿ, ಮಂಗಳೂರು ಸಂದೇಶ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು.