ಬೆಂಗಳೂರು: ರೈತ ರುದ್ರಪ್ಪ ಆತ್ಮಹತ್ಯೆಗೆ ಸಂಬಂಧಿಸಿದಂತೆ ಸುಳ್ಳು ಸುದ್ದಿ ಹಬ್ಬಿಸಿದ ಆರೋಪ ಹೊರಿಸಿ ತಮ್ಮ ವಿರುದ್ಧ ದಾಖಲಿಸಿರುವ ಎಫ್ಐಆರ್ ರದ್ದು ಗೊಳಿಸು ವಂತೆ ಸಂಸದ ತೇಜಸ್ವಿ ಸೂರ್ಯ ಸಲ್ಲಿಸಿರುವ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ.
ಹಾವೇರಿ ಸೆನ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ರದ್ದುಪಡಿಸಬೇಕು ಎಂದು ಕೋರಿ ತೇಜಸ್ವಿ ಸೂರ್ಯ ಸಲ್ಲಿಸಿದ್ದ ಅರ್ಜಿಯನ್ನು ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ತೇಜಸ್ವಿ ಸೂರ್ಯ ಪರ ವಾದಿಸಿದ ವಕೀಲರು, ಅರ್ಜಿದಾರರು ರೈತ ರುದ್ರಪ್ಪರವರ ಕುಟುಂಬಸ್ಥರ ಹೇಳಿಕೆ ಆಧರಿಸಿ ಟ್ವೀಟ್ ಮಾಡಿದ್ದಾರೆ. ಆದರೆ, ಜಿಲ್ಲಾ ಪೊಲೀಸರಿಂದ ಸ್ಪಷ್ಟನೆ ಸಿಗುತ್ತಿದ್ದಂತೆಯೇ ಟ್ವೀಟ್ ಡಿಲೀಟ್ ಮಾಡಲಾಗಿದೆ. ಆದರೂ ಪೊಲೀಸರು ಸ್ವಯಂ ಪ್ರೇರಿತವಾಗಿ ದುರುದ್ದೇಶದಿಂದ ದೂರು ದಾಖಲಿಸಿರುವುದು ಒಪ್ಪುವಂತದಲ್ಲ. ಮೇಲ್ನೋಟಕ್ಕೆ ಇದು ಭಾರತೀಯ ನಾಗರಿಕ ಸಂಹಿತೆ-2023ರ (ಬಿಎನ್‌ಎಸ್) ಕಲಂ 353 (2) ಅಡಿ ಅಪರಾಧ ಆಗುವುದಿಲ್ಲ ಎಂದರು.
ಅರ್ಜಿದಾರರು ಜವಾಬ್ದಾರಿಯುತ ಸಂಸದರಾಗಿದ್ದು, ಯಾವುದೇ ಸಮುದಾಯಗಳ ಮಧ್ಯೆ ದ್ವೇಷ ಬಿತ್ತುವ ಕೆಲಸ ಮಾಡಿಲ್ಲ. ಆದ್ದರಿಂದ ಎಫ್ ಐಆರ್ ರದ್ದುಗೊಳಿಸಬೇಕು. ಎಂದು ಮನವಿ ಮಾಡಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರಾಜ್ಯ ಸರ್ಕಾರದ ಪರ ವಕೀಲರು, ವಿರೋಧ ಪಕ್ಷವೂ ರಾಜಕೀಯ ನೆಲೆಯಲ್ಲಿ ಈ ರೀತಿ ಸುಳ್ಳು ಸುದ್ದಿ ಹಬ್ಬಿಸಿದೆ ಎಂದರು.
ಈ ವೇಳೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಇದು ತುಂಬಾ ಬೇಸರದ ಸನ್ನಿವೇಶ. ಒಂದು ಜೀವ ಕಳೆದುಹೋಯಿತು. ರೈತನ ಮಗ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆದರೆ ನೀವೆಲ್ಲರೂ ಅದರಲ್ಲಿ ರಾಜಕೀಯ ಮಾಡುತ್ತಿದ್ದೀರಲ್ಲ ಎಂದು ಆಸಮಾಧಾನ ವ್ಯಕ್ತಪಡಿಸಿತು. ವಾದ – ಪ್ರತಿವಾದ ಆಲಿಸಿದ ನ್ಯಾಯಪೀಠ ತೀರ್ಪು ಕಾಯ್ದಿರಿಸುವುದಾಗಿ ಪ್ರಕಟಿಸಿತು.