ಟರೌಬಾ: ವೆಸ್ಟ್ ಇಂಡೀಸ್ ಪ್ರವಾಸದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ ಮುಗ್ಗರಿಸಿದೆ. ವೆಸ್ಟ್ ಇಂಡೀಸ್ ನೀಡಿದ 150 ರನ್ ಗುರಿ ಬೆನ್ನೆತ್ತಲಾಗದೆ ಹಾರ್ದಿಕ್ ಪಾಂಡ್ಯ ಪಡೆ ನಾಲ್ಕು ರನ್ ಅಂತರದ ಸೋಲನುಭವಿಸಿದೆ.
ಈ ಪಂದ್ಯದ ವೇಳೆ ತಮಾಷೆಯ ಸಂಗತಿಯೊಂದು ನಡೆದಿದೆ. ಬ್ಯಾಟಿಂಗ್ ಮಾಡಲು ಇಳಿದ ಯುಜುವೇಂದ್ರ ಚಾಹಲ್ ಅವರನ್ನು ಕೋಚ್ ರಾಹುಲ್ ದ್ರಾವಿಡ್ ಮತ್ತು ನಾಯಕ ಹಾರ್ದಿಕ್ ಪಾಂಡ್ಯ ಮೈದಾನದಿಂದ ಹಿಂದೆ ಕರೆಸಿದ ಘಟನೆ ನಡೆದಿದೆ.
ಪಂದ್ಯದ ಕೊನೆಯ ಓವರ್ ನ ಮೊದಲ ಎಸೆತದಲ್ಲಿ ಕುಲದೀಪ್ ಯಾದವ್ ಔಟಾದರು. ಈ ವೇಳೆ ಹತ್ತನೇ ಕ್ರಮಾಂಕದ ಆಟಗಾರನಾಗಿ ಯುಜಿ ಚಾಹಲ್ ಮೈದಾನಕ್ಕೆ ಆಗಮಿಸಿದರು. ಅವರು ಕ್ರೀಸ್ ವರೆಗೂ ತಲುಪಿದ್ದರು. ಆದರೆ ಈ ವೇಳೆ ತಂಡದ ಮ್ಯಾನೇಜ್ ಮೆಂಟ್ ಅವರನ್ನು ಹಿಂದೆ ಕರೆಸಿತು. ತಂಡವು ಪದಾರ್ಪಣೆ ಮಾಡಿದ ಆಟಗಾರ ಮುಖೇಶ್ ಕುಮಾರ್ ಅವರನ್ನು ಬ್ಯಾಟಿಂಗ್ ಗೆ ಕಳುಹಿಸಲು ಬಯಸಿತ್ತು.
ಹೀಗಾಗಿ ಪಿಚ್ ತಲುಪಿದ್ದ ಯುಜಿ ಮತ್ತೆ ಡಗೌಟ್ ವರೆಗೆ ಓಡಿದರು. ಬೌಂಡರಿ ಲೈನ್ ತಲುಪಿದ್ದಂತೆ ಅಂಪೈರ್ ಅವರೇ ಆಡಬೇಕು ಎಂದು ಸೂಚಿಸಿದ ಕಾರಣ ಯುಜಿ ಮತ್ತೆ ಬ್ಯಾಟಿಂಗ್ ಮಾಡಲು ಆಗಮಿಸಿದರು. ಆಟಗಾರ ಒಮ್ಮೆ ಪಿಚ್ ಗೆ ಬಂದ ನಂತರ ಬದಲಾವಣೆ ಮಾಡುವಂತಿಲ್ಲ. ಹೀಗಾಗಿ ಯುಜಿ ಬ್ಯಾಟಿಂಗ್ ಮುಂದುವರಿಸಿದರು.
ಮೊದಲ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ವಿಂಡೀಸ್ 20 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿತು. ಗುರಿ ಬೆನ್ನತ್ತಿದ ಟೀಂ ಇಂಡಿಯಾ 9 ವಿಕೆಟ್ ಕಳೆದುಕೊಂಡು 145 ರನ್ ಮಾತ್ರ ಗಳಿಸಲು ಶಕ್ತವಾಯಿತು.