ವೆಲ್ಲಿಂಗ್ಟನ್: ಭಾರತದಲ್ಲಿ ಟೆಸ್ಟ್ ಸರಣಿ ವೈಟ್ ವಾಶ್ ಮಾಡಿ ಬೀಗಿದ್ದ ನ್ಯೂಜಿಲ್ಯಾಂಡ್ ತಂಡವು ಇದೀಗ ತವರಿನಲ್ಲಿಯೇ ಸರಣಿ ಸೋಲಿನ ಅವಮಾನಕ್ಕೆ ಸಿಲುಕಿದೆ. ಪ್ರವಾಸಿ ಇಂಗ್ಲೆಂಡ್ ತಂಡವು ಎರಡನೇ ಟೆಸ್ಟ್ ಪಂದ್ಯವನ್ನೂ ಗೆದ್ದುಕೊಂಡಿದೆ. ವೆಲ್ಲಿಂಗ್ಟನ್ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ 323 ರನ್ ಅಂತರದ ಸೋಲು ಕಂಡಿದೆ.
ಎರಡನೇ ಇನ್ನಿಂಗ್ಸ್ ನಲ್ಲಿ ಜೋ ರೂಟ್ (Joe Root) ಶತಕ ಬಾರಿಸಿ ಮಿಂಚಿದರು. ಟೆಸ್ಟ್ ಕ್ರಿಕೆಟ್ ನಲ್ಲಿ ಸತತ ಶತಕ ಹೊಡೆಯುತ್ತಿರುವ ರೂಟ್ ತನ್ನ ಶತಕಗಳ ಸಂಖ್ಯೆಯನ್ನು 36ಕ್ಕೆ ಏರಿಸಿದರು.
ರೂಟ್ ಟೆಸ್ಟ್ ಕ್ರಿಕೆಟ್‌ನಲ್ಲಿ ರಾಹುಲ್ ದ್ರಾವಿಡ್ (Rahul Dravid) ಅವರ 36 ಶತಕಗಳನ್ನು ಸರಿಗಟ್ಟಿದರು. ಇದೀಗ ರೂಟ್ ಶತಕಗಳ ಸಾರ್ವಕಾಲಿಕ ಪಟ್ಟಿಯಲ್ಲಿ 5 ನೇ ಸ್ಥಾನದಲ್ಲಿದ್ದಾರೆ. ವೇಗವಾಗಿ ಬ್ಯಾಟ್ ಬೀಸಿದ ರೂಟ್ 130 ಎಸೆತಗಳಲ್ಲಿ 105 ರನ್ ಬಾರಿಸಿದರು.
ಟೆಸ್ಟ್ ಕ್ರಿಕೆಟ್‌ನಲ್ಲಿ ಐವತ್ತು ಅಥವಾ ಅದಕ್ಕಿಂತ ಹೆಚ್ಚಿನ ಸ್ಕೋರ್‌ಗಳನ್ನು ನೂರು ಬಾರಿ ದಾಖಲಿಸಿದ ಒಟ್ಟಾರೆ ನಾಲ್ಕನೇ, ಮೊದಲ ಇಂಗ್ಲಿಷ್ ಬ್ಯಾಟರ್ ಆಗುವ ಮೂಲಕ ರೂಟ್ ಎಲೈಟ್ ಪಟ್ಟಿಗೆ ಸೇರಿದರು.
ಸಚಿನ್ ತೆಂಡೂಲ್ಕರ್, ಜಾಕ್ ಕ್ಯಾಲಿಸ್ ಮತ್ತು ರಿಕಿ ಪಾಂಟಿಂಗ್ ಅವರಂತಹ ದಿಗ್ಗಜ ಆಟಗಾರರ ಪಟ್ಟಿಯನ್ನು ರೂಟ್ ಸೇರಿಕೊಂಡರು. ಸಚಿನ್ 119 ಬಾರಿ ಅರ್ಧಶತಕಕ್ಕಿಂತ ಹೆಚ್ಚಿನ ರನ್ ಗಳಿಸಿ ದಾಖಲೆ ಹೊಂದಿದ್ದಾರೆ, ನಂತರದ ಸ್ಥಾನದಲ್ಲಿರುವ ಕಾಲಿಸ್ ಮತ್ತು ಪಾಂಟಿಂಗ್ ತಲಾ 103 ಬಾರಿ ಗಳಿಸಿದ್ದಾರೆ.