ಮುಂಬೈ: ಸದ್ಯ ಟೀಂ ಇಂಡಿಯಾದಿಂದ ಹೊರಗಿರುವ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಅವರು ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ ಎಂಬ ವಿಚಾರವು ಕಳೆದ ಕೆಲವು ದಿನಗಳಿಂದ ಸುದ್ದಿಯಾಗುತ್ತಿದೆ. ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಅರ್ಧದಿಂದಲೇ ತಂಡದಿಂದ ಹೊರ ಹೋಗಿದ್ದ ಇಶಾನ್ ಕಿಶನ್ ಮತ್ತೆ ಯಾವುದೇ ಸರಣಿಗೆ ಆಯ್ಕೆಯಾಗಿಲ್ಲ.
ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರನ್ನು ಕಿಶನ್ ಬಗ್ಗೆ ಸುದ್ದಿಗಾರರೊಂದಿಗೆ ಕೇಳಿದಾಗ, ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಆಯ್ಕೆಗೆ ಅರ್ಹರಾಗಲು ದೇಶಿಯ ಕ್ರಿಕೆಟ್ ಆಡಬೇಕು ಎಂದು ಸ್ಪಷ್ಟಪಡಿಸಿದ್ದರು.
ದ್ರಾವಿಡ್ ಮತ್ತು ತಂಡದ ಸ್ಪಷ್ಟ ಸಂದೇಶದ ಹೊರತಾಗಿಯೂ ಕಿಶನ್ ರಣಜಿ ಟ್ರೋಫಿಯಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ. ಜಾರ್ಖಂಡ್ ರಣಜಿ ತಂಡವು ಅವಕಾಶ ನೀಡಲು ಸಿದ್ದರಾಗಿದ್ದರೂ ಇಶಾನ್ ಅವರನ್ನು ಸಂಪರ್ಕಿಸಲಿಲ್ಲ. ಆದರೆ ರಿಲಯನ್ಸ್ ಸ್ಟೇಡಿಯಂನಲ್ಲಿ ಹಾರ್ದಿಕ್ ಮತ್ತು ಕೃನಾಲ್ ಪಾಂಡ್ಯ ಅವರೊಂದಿಗೆ ಕಳೆದೆರಡು ವಾರಗಳಿಂದ ತರಬೇತಿ ಪಡೆಯುತ್ತಿದ್ದಾರೆ ಎಂದು ವರದಿಯೊಂದು ಹೇಳಿದೆ.
ಕ್ರಿಕ್‌ಬಜ್‌ನಲ್ಲಿನ ವರದಿಯ ಪ್ರಕಾರ ಇಶಾನ್ ಅವರು ಪಾಂಡ್ಯ ಸಹೋದರರೊಂದಿಗೆ ಕಳೆದ ಎರಡು ವಾರಗಳಿಂದ ಬರೋಡಾದ ರಿಲಯನ್ಸ್ ಸ್ಟೇಡಿಯಂನಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಐಪಿಎಲ್ ನಲ್ಲಿ ಇಶಾನ್ ಕಿಶನ್ ಪ್ರತಿನಿಧಿಸುವ ಹಾರ್ದಿಕ್ ಪಾಂಡ್ಯ ಅವರು ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ನಾಯಕರಾಗಿರುವುದರಿಂದ ಕಿಶನ್ ಅವರ ಈ ನಡೆ ಕುತೂಹಲ ಹುಟ್ಟುಹಾಕುತ್ತಿದೆ.