Advertisement

ಶಿಕ್ಷಕರ ಕ್ಷೇತ್ರ: ಮೈತ್ರಿಕೂಟಕ್ಕೆ ಸೋಲು, ಕಾಂಗ್ರೆಸ್‌ ಜಯ

11:16 PM Feb 20, 2024 | Team Udayavani |

ಬೆಂಗಳೂರು: ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಸತತ ಐದನೇ ಬಾರಿ ಗೆಲ್ಲುವುದರೊಂದಿಗೆ, ಕಾಂಗ್ರೆಸ್‌ ಅಭ್ಯರ್ಥಿ ಪುಟ್ಟಣ್ಣ ಈ ಕ್ಷೇತ್ರದಲ್ಲಿ ತಮ್ಮ ಹಿಡಿತವನ್ನು ಮುಂದುವರಿಸಿದರು. ಇದರ ಪರಿಣಾಮವಾಗಿ ಬಿಜೆಪಿ-ಜೆಡಿಎಸ್‌ ಮೈತ್ರಿಗೆ ಮೊದಲ ಚುನಾವಣೆಯಲ್ಲೇ ಸೋಲಾಗಿದೆ. ಪುಟ್ಟಣ್ಣ ಅವರ ಪಕ್ಷಾತೀತ ವರ್ಚಸ್ಸು ಅವರ ‘ಕೈ’ ಹಿಡಿದಿದ್ದು ಬಿಜೆಪಿ-ಜೆಡಿಎಸ್‌ನ “ಮೈತ್ರಿ’ ಲೆಕ್ಕಾಚಾರ ಬುಡಮೇಲಾಗಿದೆ.

Advertisement

ಬೆಂಗಳೂರು ಸರಕಾರಿ ಆರ್ಟ್ಸ್ ಕಾಲೇಜಿನಲ್ಲಿ ನಡೆದ ಮೂರು ಸುತ್ತಿನ ಮತ ಎಣಿಕೆಯಲ್ಲಿ, ಪುಟ್ಟಣ್ಣ ಮೊದಲ ಪ್ರಾಶಸ್ತ್ಯದ ಮತಗಳ ಆಧಾರದಲ್ಲಿ ಗೆಲುವು ಸಾಧಿಸಿದ್ದಾರೆ. ಪುಟ್ಟಣ್ಣ 8,260 ಹಾಗೂ ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಎ.ಪಿ.ರಂಗನಾಥ್‌ 6,753 ಮತಗಳನ್ನು ಪಡೆದರು.

1,239 ಮತಗಳು ತಿರಸ್ಕೃತಗೊಂಡಿವೆ!
2002ರಲ್ಲಿ ಜೆಡಿಎಸ್‌ನಿಂದ ಮೊದಲ ಬಾರಿ ಪರಿಷತ್‌ ಪ್ರವೇಶಿಸಿದ್ದ ಪುಟ್ಟಣ್ಣ, ಬಳಿಕ 2008 ಮತ್ತು 2014ರಲ್ಲಿ ಜೆಡಿಎಸ್‌ನಿಂದಲೇ ಗೆದ್ದಿದ್ದರು. ಬಳಿಕ 2020ರಲ್ಲಿ ಬಿಜೆಪಿಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಮಲವನ್ನು ಈ ಕ್ಷೇತ್ರದಲ್ಲಿ ಅರಳಿಸಿದ್ದರು. 2023ರಲ್ಲಿ ವಿಧಾನಸಭೆ ಚುನಾವಣೆಯ ಪೂರ್ವದಲ್ಲಿ ತಮ್ಮ ಸ್ಥಾನಕ್ಕೆ ರಾಜೀ ನಾಮೆ ನೀಡಿ ಕಾಂಗ್ರೆಸ್‌ ಸೇರಿ, ರಾಜಾಜಿನಗರದಿಂದ ವಿಧಾನ ಸಭೆಗೆ ಸ್ಪರ್ಧಿಸಿ ಸೋತಿದ್ದರು. ಬಳಿಕ ಮತ್ತೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದಿದ್ದಾರೆ.

ಮೈತ್ರಿಕೂಟಕ್ಕೆ ಹಿನ್ನಡೆ
ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಗೆಲುವು ದಾಖಲಿಸಿ ತಮ್ಮ ಮೊದಲ ಚುನಾವಣಾ ಪೂರ್ವ ಮೈತ್ರಿಯನ್ನು ಶುಭಾರಂಭ ಮಾಡಬೇಕು, ಲೋಕಸಭಾ ಚುನಾವಣೆಗೆ ಆತ್ಮ ವಿಶ್ವಾಸ ದಕ್ಕಿಸಿಕೊಳ್ಳಬೇಕು ಎಂಬ ನಿರೀಕ್ಷೆಯಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿಕೂಟವಿತ್ತು.

ಸ್ಥಳೀಯ ಬಿಜೆಪಿ ಮುಖಂಡರ ಜತೆ ಸಮಾಲೋಚಿಸದೆ, ಕಳೆದ ಚುನಾವಣೆಯಲ್ಲಿ ಸೋತಿದ್ದ ಎ.ಪಿ.ರಂಗನಾಥ್‌ರನ್ನು ಜೆಡಿಎಸ್‌ ಕಣಕ್ಕಿಳಿಸಿತ್ತು. ಆರಂಭದಲ್ಲಿ ತುಸು ಮುನಿಸು ತೋರಿದ ಬಿಜೆಪಿ ಆ ಬಳಿಕ ಮೈತ್ರಿಧರ್ಮಕ್ಕೆ ಕಟ್ಟು ಬಿದ್ದು ಚುನಾವಣೆಯಲ್ಲಿ ಸಕ್ರಿಯವಾಗಿಯೇ ಚುನಾವಣೆಯಲ್ಲಿ ತೊಡಗಿಸಿಕೊಂಡಿ ತ್ತಾದರೂ ಜಯ ತಂದು ಕೊಡಲು ಸಾಧ್ಯವಾಗಲಿಲ್ಲ.

Advertisement

ಪರಿಷತ್‌ನಲ್ಲಿ ಪಕ್ಷಗಳ ಬಲಾಬಲ
ಪುಟ್ಟಣ್ಣ ಅವರ ಪ್ರವೇಶದೊಂದಿಗೆ ವಿಧಾನ ಪರಿಷತ್‌ನಲ್ಲಿ ಆಡಳಿತ ರೂಢ ಕಾಂಗ್ರೆಸ್‌ನ ಸ್ಥಾನಗಳ ಸಂಖ್ಯೆ 30ಕ್ಕೆ ಏರಲಿದೆ. ಕಾಂಗ್ರೆಸ್‌ನಿಂದ ವಿಧಾನ ಪರಿಷತ್‌ ಪ್ರವೇಶಿಸಿದ್ದ ಜಗದೀಶ್‌ ಶೆಟ್ಟರ್‌ ರಾಜೀನಾಮೆಯಿಂದ ಒಂದು ಸ್ಥಾನ ಖಾಲಿ ಉಳಿದಿದೆ.

ಸಭಾಪತಿ – 1, ಬಿಜೆಪಿ – 34, ಕಾಂಗ್ರೆಸ್‌ – 30
ಜೆಡಿಎಸ್‌ – 8, ಸ್ವತಂತ್ರ – 1, ಖಾಲಿ – 1

ಬಿಜೆಪಿ ಮತ್ತು ಜೆಡಿಎಸ್‌ ನಾಯಕರ ನಡುವೆ ಮೈತ್ರಿಯಾಗಿದೆಯೇ ಹೊರತು ಇದಕ್ಕೆ ಮತದಾರರ ಒಪ್ಪಿಗೆ ಇಲ್ಲ ಎಂಬುದನ್ನು ವಿಧಾನ ಪರಿಷತ್‌ ಉಪಚುನಾವಣೆ ಫ‌ಲಿತಾಂಶ ಸ್ಪಷ್ಟಪಡಿಸಿದೆ .
-ಸಿದ್ದರಾಮಯ್ಯ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next