Advertisement

ಮಹಾಘಟಬಂಧನ್‌ಗೆ ವೇದಿಕೆಯಾದ ಸಮಾರಂಭ

06:30 AM May 24, 2018 | Team Udayavani |

ಬೆಂಗಳೂರು: ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ, ಉಪಮುಖ್ಯ ಮಂತ್ರಿಗಳ
ಪ್ರಮಾಣವಚನ ಸ್ವೀಕಾರ ಸಮಾರಂಭ ರಾಷ್ಟ್ರಮಟ್ಟದಲ್ಲಿ ಪ್ರಾದೇಶಿಕ ಪಕ್ಷಗಳ ನಾಯಕರ ಒಂದುಗೂಡಿಸುವ ವೇದಿಕೆಯಾಗಿ ಮಾರ್ಪಟ್ಟಿತ್ತು. ಅದರಲ್ಲೂ ಮುಖ್ಯವಾಗಿ, ಬಿಜೆಪಿ ವಿರುದ್ಧ ಪ್ರಾದೇಶಿಕ ಪಕ್ಷಗಳು ಒಟ್ಟಾಗಿ ಕೆಲಸ ಮಾಡುವ ರೀತಿಯ ಸಂದೇಶ ಸಾರುವಂತೆ ವಿವಿಧ ರಾಜ್ಯಗಳ ಪ್ರಾದೇಶಿಕ ಪಕ್ಷಗಳ ಪ್ರಮುಖರು ವೇದಿಕೆಯಲ್ಲಿ ಒಟ್ಟುಗೂಡಿದ್ದರು.

Advertisement

ದೇಶದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿಗೆ ಪರ್ಯಾಯವಾಗಿ ತೃತೀಯ ರಂಗ ಸ್ಥಾಪಿಸುವ ಪ್ರಸ್ತಾಪ ಮೊದಲಿನಿಂದಲೂ ಇತ್ತಾದರೂ ಆಗಾಗ ಅದು ಚರ್ಚೆಯಾಗಿ ಅಲ್ಲಿಗೆ ಮುಕ್ತಾಯಗೊಳ್ಳುತ್ತಿತ್ತು.ಆದರೆ, 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದು ಕಾಂಗ್ರೆಸ್‌ ತೀವ್ರ ಹಿನ್ನಡೆ ಅನುಭವಿಸಿತು. 543 ಸದಸ್ಯರಿರುವ ಲೋಕಸಭೆಯಲ್ಲಿ ಕೇವಲ 44 ಸ್ಥಾನ ಮಾತ್ರ ಗಳಿಸಿತು. ಇದಾದ
ಬಳಿಕ ಬಿಜೆಪಿ ರಾಷ್ಟ್ರಾದ್ಯಂತ “ಕಾಂಗ್ರೆಸ್‌ ಮುಕ್ತ ಭಾರತ’ ಎಂಬ ಘೋಷಣೆಯಡಿ ರಾಜ್ಯಗಳಲ್ಲೂ ಅಧಿಕಾರಗಳಿಸುತ್ತ ವಿಜಯಯಾತ್ರೆ ಮುಂದುವರಿಸಿತು.

ಇದು ಕಾಂಗ್ರೆಸ್‌ಗೆ ಆತಂಕವನ್ನೂ ಮೂಡಿಸಿತು. ಹೀಗಾಗಿ, ಕಾಂಗ್ರೆಸ್‌ ಮತ್ತು ಬಿಜೆಪಿಗೆ ಹೊರತಾದ ತೃತೀಯ ರಂಗ ರಚನೆಯ ವಿಚಾರ ದೂರವಾಗಿ ಬಿಜೆಪಿಯೇತರ ಶಕ್ತಿಗಳನ್ನು ಒಂದುಗೂಡಿಸುವ ಪ್ರಯತ್ನಕ್ಕೆ ಕೈ ಹಾಕಿದ್ದ ಕಾಂಗ್ರೆಸ್‌, ಕಳೆದ ಒಂದೂವರೆ ವರ್ಷದಲ್ಲಿ ನಡೆದ ವಿಧಾನಸಭೆ ಚುನಾವಣೆಗಳಲ್ಲಿ ಬಹುತೇಕ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳೊಂದಿಗೆ ಕೈಜೋಡಿಸಿತು. ಆ ಮೂಲಕ ಬಿಜೆಪಿಯೇತರ ರಾಜಕೀಯ ಒಕ್ಕೂಟ ಸ್ಥಾಪಿಸುವ ಪ್ರಯತ್ನದಲ್ಲಿತ್ತು.

ಇದೀಗ ಕರ್ನಾಟಕದಲ್ಲಿ ಜೆಡಿಎಸ್‌ ಜತೆಗಿನ ಮೈತ್ರಿ ಆ ನಿಟ್ಟಿನಲ್ಲಿ ಮತ್ತಷ್ಟು ಶಕ್ತಿ ತಂದುಕೊಟ್ಟಿದೆ ಎಂದೇ
ವಿಶ್ಲೇಷಿಸಲಾಗುತ್ತಿದೆ.

ಎಲ್ಲರೂ ಒಟ್ಟಾದರು: ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ 20ಕ್ಕೂ ಹೆಚ್ಚು ರಾಜ್ಯಗಳ ಪ್ರತಿನಿಧಿಗಳು ಪಾಲ್ಗೊಂಡು ಬಿಜೆಪಿಯೇತರ ರಾಜಕೀಯ ಒಕ್ಕೂಟಕ್ಕೆ ಕೈಜೋಡಿಸಿರುವುದಕ್ಕೆ ಸಮಾರಂಭ ಸಾಕ್ಷಿಯಾಯಿತು. ಅದರಲ್ಲೂ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ಎನ್‌ಸಿಪಿ ರಾಷ್ಟ್ರೀಯ ಅಧ್ಯಕ್ಷ ಶರದ್‌ ಪವಾರ್‌, ಜೆಡಿಯು ಅಧ್ಯಕ್ಷ ಶರದ್‌ ಯಾದವ್‌, ಬಿಎಸ್‌ಪಿ ಅಧಿನಾಯಕಿ ಮಾಯಾವತಿ,ಉತ್ತರ ಪ್ರದೇಶದ ಮಾಜಿ ಸಿಎಂ ಅಖೀಲೇಶ್‌ 
ಯಾದವ್‌ (ಎಸ್‌ಪಿ), ಜಾರ್ಖಂಡ್‌ನ‌ ಮಾಜಿ ಸಿಎಂಗಳಾದ ಜಾರ್ಖಂಡ್‌ ಮುಕ್ತಿ ಮೋರ್ಚಾದ ಹೇಮಂತ್‌ ಸೊರೇನ್‌ ಮತ್ತು ಜಾರ್ಖಂಡ್‌ ವಿಕಾಸ್‌ ಮೋರ್ಚಾದ ಬಾಬೂಲಾಲ್‌ ಮರಂಡಿ, ಸಿಪಿಐನ ಸೀತಾರಾಮ್‌ ಯೆಚೂರಿ, ರಾಷ್ಟ್ರೀಯ ಲೋಕದಳದ ಸಂಸ್ಥಾಪಕ ಅಜಿತ್‌ ಸಿಂಗ್‌, ಬಿಹಾರ ವಿಧಾನಸಭೆ ಪ್ರತಿಪಕ್ಷ ನಾಯಕ ಹಾಗೂ ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್‌ ಮತ್ತಿತರರು ಪಾಲ್ಗೊಳ್ಳುವ ಮೂಲಕ ಬಿಜೆಪಿಯೇತರ ರಾಜಕೀಯ ಒಕ್ಕೂಟ ಸ್ಥಾಪಿಸುವ ಪ್ರಯತ್ನಕ್ಕೆ ಇನ್ನಷ್ಟು ವೇಗ ನೀಡಿದ್ದಾರೆ.

Advertisement

ಇದಕ್ಕೆ ಸಾಕ್ಷಿ ಎಂಬಂತೆ ಸಮಾರಂಭಕ್ಕೆ ಆಹ್ವಾನಿತರಾಗಿದ್ದ ಬಿಜೆಪಿಯ ನಿರ್ಗಮಿತ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಕೇಂದ್ರ ಸಚಿವರಾದ ಅನಂತಕುಮಾರ್‌, ಡಿ.ವಿ.ಸದಾನಂದಗೌಡ, ವಿಧಾನಸಭೆ ಪ್ರತಿಪಕ್ಷ ನಾಯಕರಾಗಿದ್ದ ಜಗದೀಶ ಶೆಟ್ಟರ್‌, ಹಂಗಾಮಿ ಸ್ಪೀಕರ್‌ಕೆ.ಜಿ.ಬೋಪಯ್ಯ, ವಿಧಾನ ಪರಿಷತ್‌ ಸಭಾಪತಿ ಡಿ.ಎಚ್‌.ಶಂಕರಮೂರ್ತಿ ಸೇರಿದಂತೆ ಬಿಜೆಪಿಯ ಯಾವೊಬ್ಬರೂ ಪಾಲ್ಗೊಂಡಿರಲಿಲ್ಲ.

ಬಹುತೇಕ ಎಲ್ಲಾ ಪ್ರಾದೇಶಿಕ ಪಕ್ಷಗಳ ನಾಯಕರು ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಬಂದಿದ್ದಾರೆ. ಆದರೆ,
ತೃತೀಯರಂಗದ ಬಗ್ಗೆ ಈಗಲೂ ಸ್ಪಷ್ಟವಾಗಿ ಏನನ್ನೂ ಹೇಳಲು ಸಾಧ್ಯವಿಲ್ಲ.

– ಎಚ್‌.ಡಿ.ದೇವೇಗೌಡ, ಜೆಡಿಎಸ್‌ ವರಿಷ್ಠ

– ಪ್ರದೀಪ್‌ ಕುಮಾರ್‌ ಎಂ.

Advertisement

Udayavani is now on Telegram. Click here to join our channel and stay updated with the latest news.

Next