Advertisement

Mangaluru: ವಕ್ಫ್ ಕಾನೂನು ಮೂಲಕ ರೈತರ ಜಮೀನು ಕಬಳಿಕೆ: ಚೌಟ

12:52 AM Nov 04, 2024 | Team Udayavani |

ಮಂಗಳೂರು: ಕೇಂದ್ರ ಸರಕಾರ ವಕ್ಫ್ ಕಾನೂನಿಗೆ ತಿದ್ದುಪಡಿ ತರಲು ಚಿಂತನೆ ನಡೆಸುತ್ತಿದ್ದರೆ, ಕಾಂಗ್ರೆಸ್‌ ಆಡಳಿತವಿರುವ ರಾಜ್ಯದಲ್ಲಿ ರೈತರ ಜಮೀನನ್ನು ಕಬಳಿಸಲು ಅವಕಾಶ ಕೊಡಲಾಗಿದೆ. ವಕ್ಫ್ ಕಾನೂನು ದೇಶಕ್ಕೆ ಮಾರಕವಾಗಿದ್ದು, ಈ ಕಾನೂನು ರೈತರು ಹಾಗೂ ಹಿಂದೂಗಳಲ್ಲಿ ಭೀತಿ ಹುಟ್ಟಿಸುತ್ತಿದೆ ಎಂದು ಸಂಸದ ಕ್ಯಾ| ಬ್ರಿಜೇಶ್‌ ಚೌಟ ಆರೋಪಿಸಿದ್ದಾರೆ.

Advertisement

ದ.ಕ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ರವಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಮ್ಮೆ ವಕ್ಫ್ ಆಸ್ತಿಯೆಂದು ಹಕ್ಕು ಸ್ಥಾಪಿಸಿದರೆ ಅದನ್ನು ಜನಸಾಮಾನ್ಯ ನ್ಯಾಯಾಲಯದಲ್ಲಿ ಪ್ರಶ್ನಿಸಲು ಸಾಧ್ಯವಿಲ್ಲ. ಟ್ರಿಬ್ಯುನಲ್‌ನಲ್ಲೇ ಪ್ರಶ್ನಿಸಬೇಕು. ವಕ್ಫ್ ಕಾನೂನು ಮಾರಕವಾಗಿದ್ದು, ಕೇಂದ್ರ ಸರಕಾರ ಕಾನೂನಿಗೆ ತಿದ್ದುಪಡಿ ಪ್ರಯತ್ನಿಸಿದೆ ಎಂದರು.

ಅನ್ವರ್‌ ಮಾಣಿಪ್ಪಾಡಿ ನೀಡಿದ ವರದಿಯಲ್ಲಿ ರಾಜ್ಯದಲ್ಲಿ 54 ಸಾವಿರ ಎಕ್ರೆ ಭೂಮಿ ವಕ್ಫ್ ಸುಪರ್ದಿ ಯಲ್ಲಿದ್ದು, ಈ ಪೈಕಿ 29 ಸಾವಿರ ಎಕ್ರೆಯನ್ನು ಅಕ್ರಮ ಪರಭಾರೆ ಮಾಡಲಾಗಿದೆ. ಈ ಹಗರಣದಲ್ಲಿ ಜಮೀರ್‌ ಅಹಮದ್‌, ರೋಶನ್‌ ಬೇಗ್‌ ಸಹಿತ ವಿವಿಧ ನಾಯಕರು ಇದ್ದಾರೆಂಬ ಆರೋಪವಿತ್ತು. ಈ ವರದಿ ಬಗ್ಗೆ ಸಿಬಿಐ ತನಿಖೆಯಾಗಬೇಕು ಮತ್ತು ರಾಜ್ಯ ಸರಕಾರ ಯಥಾವತ್‌ ಜಾರಿ ಗೊಳಿಸಬೇಕು ಎಂದು ಆಗ್ರಹಿಸಿದರು.

ಪ್ರವಾಸೋದ್ಯಮ
ಅಭಿವೃದ್ಧಿಗೆ ಬೆಂಬಲ
ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಪ್ರತ್ಯೇಕ ನೀತಿ ಪ್ರಕಟಿಸುವ ಬಗ್ಗೆ ಡಿಕೆಶಿ ಅವರು ತಿಳಿಸಿರುವುದು ಸ್ವಾಗತಾರ್ಹ. ಟೂರಿಸಂ ನೀತಿ ಮಾಡುವಾಗ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಶಾಸಕರು, ಪ್ರಮುಖರ ಅಭಿಪ್ರಾಯ ಸಂಗ್ರಹಿಸಬೇಕು. ಮಂಗಳೂರು- ಬೆಂಗಳೂರು ಮಧ್ಯೆ ಒಳ್ಳೆಯ ರಸ್ತೆ, ರೈಲು ಹಳಿ ನಿರ್ಮಿಸಲು ಮುತುವರ್ಜಿ ವಹಿಸಬೇಕಿದೆ ಎಂದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್‌ ಕುಂಪಲ ಮಾತನಾಡಿ, ವಕ್ಫ್ ಹಗರಣದ ವಿರುದ್ದ ರಾಜ್ಯದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಜಿಲ್ಲೆಯಲ್ಲಿ ನ್ಯಾಯವಾದಿಗಳ ತಂಡ ರಚಿಸಲಾಗಿದೆ. ನ.7ರಂದು ತಾಲೂಕು ಕೇಂದ್ರ, ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಯಲಿದೆ ಎಂದರು. ಸಂಜಯ್‌ ಪ್ರಭು, ವಸಂತ್‌ ಪೂಜಾರಿ ಉಪಸ್ಥಿತರಿದ್ದರು.

Advertisement

ಮಂಗಳೂರಿನಲ್ಲಿ 37 ಆಸ್ತಿ ವಕ್ಫ್ ಗೆ ನೋಟಿಫೈ
ದಕ್ಷಿಣ ಕನ್ನಡದ ಮಂಗಳೂರು ತಾಲೂಕಿನಲ್ಲಿ 37 ಆಸ್ತಿ ವಕ್ಫ್  ನೋಟಿಫೈ ಆಗಿದೆ. ಇದರಲ್ಲಿ ಸರಕಾರಿ ಭೂಮಿಯೂ ಇದೆ. ರಾಜ್ಯದಲ್ಲಿ 29 ಸಾವಿರ ಎಕ್ರೆ ವಕ್ಫ್ ಭೂಮಿಯನ್ನು ನುಂಗಿ ಹಾಕಲಾಗಿದ್ದು, ಅದನ್ನು ವಶಪಡಿಸುವ ಬದಲು ರಾಜ್ಯ ಸರಕಾರ ರೈತರ ಜಮೀನುಗಳಿಗೆ, ಹಿಂದೂಗಳ ದೇವಸ್ಥಾನ ಭೂಮಿಗೆ ಕಣ್ಣು ಹಾಕಿದೆ. ವಕ್ಫ್ ಆಸ್ತಿಯೆಂದು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನೆ ಮಾಡದಂತೆ ಅದಕ್ಕೊಂದು ಪರಮೋಚ್ಚ ಅಧಿಕಾರ ಕೊಟ್ಟಿದ್ದು ಕಾಂಗ್ರೆಸ್‌ ಸರಕಾರ ಎಂದು ಬ್ರಿಜೇಶ್‌ ಚೌಟ ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next