Advertisement

Congress vs JDS; ನನ್ನಿಂದಾಗಿ ಸಿದ್ದರಾಮಯ್ಯ ವಿತ್ತ ಸಚಿವರಾಗಿದ್ದು: ದೇವೇಗೌಡ

11:55 PM Nov 11, 2024 | Team Udayavani |

ರಾಮನಗರ: 14 ಬಜೆಟ್‌ ಮಂಡನೆ ಮಾಡಿದ್ದೇನೆ ಎಂದು ಹೇಳುವ ಸಿದ್ದರಾಮಯ್ಯ ಅವರನ್ನು ಹಣಕಾಸು ಸಚಿವರ ನ್ನಾಗಿ ಮಾಡಿದ್ದೇ ಈ ದೇವೇಗೌಡ. ಮತ್ತೆ ಅವರೇನು ಮಾಡಿದರು ಎಂದು ನಾನು ಹೇಳಲು ಹೋಗುವುದಿಲ್ಲ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯಗೆ ಮಾಜಿ ಪ್ರಧಾನಿ ದೇವೇಗೌಡ ತಿರುಗೇಟು ನೀಡಿದರು.
ಚನ್ನಪಟ್ಟಣದಲ್ಲಿ ಸೋಮವಾರ ನಡೆದ ಕಾಂಗ್ರೆಸ್‌ ಸಮಾವೇಶದಲ್ಲಿ ಸಿದ್ದರಾಮಯ್ಯ ಅವರು ಎಚ್‌.ಡಿ.ದೇವೇಗೌಡರನ್ನು ಸಿಎಂ ಮಾಡಿದ್ದೇ ನಾನು ಎಂದು ಹೇಳಿದ್ದರು. ಸಂಜೆ ನಡೆದ ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ದೇವೇಗೌಡರು ಈ ರೀತಿ ತಿರುಗೇಟು ನೀಡಿದರು. ಕುಮಾರಸ್ವಾಮಿ ಬಜೆಟ್‌ ಪುಸ್ತಕ ತೆಗೆದರೆ, ಇವನ ಬಜೆಟ್‌ ಕೇಳಬೇಕಾ ಎಂದು ಎದ್ದು ಹೋಗುತ್ತಾರೆ, ನಾನು ಯಡಿಯೂರಪ್ಪ ಹಿಂದೆ ಕಿತ್ತಾಡಿರಬಹುದು, ನಾವಿಬ್ಬರೂ ಇದೀಗ ಒಂದಾಗಿರುವುದು ಈ ಭ್ರಷ್ಟ ಸರಕಾರವನ್ನು ಕಿತ್ತೂಗೆಯಲು ಎಂದು ಘೋಷಿಸಿದರು.
ರಾಜ್ಯ ಸರಕಾರ ಜನವರಿ ಒಳಗೆ ಬಿದ್ದು ಹೋಗುತ್ತದೆ ಎಂದು ಸಚಿವ ಸೋಮಣ್ಣ ಹೇಳಿದ್ದಾರೆ. ಅವರಿಗೂ ನನ್ನಂತೆ ಜೋತಿಷ ಕೇಳುವ ಅಭ್ಯಾಸವಿರಬಹುದು. ಆದರೆ ಸೋಮಣ್ಣ ಹೇಳಿದ್ದು ಭವಿಷ್ಯವಲ್ಲ ಸತ್ಯ. ಈ ಸರಕಾರ ಬಹಳ ದಿನ ಇರುವುದಿಲ್ಲ. ಡಿಸಿಎಂ ಡಿ.ಕೆ. ಶಿವಕುಮಾರ್‌ ಸೊಕ್ಕು ಮುರಿಯಲು ಚನ್ನಪಟ್ಟಣದ ಜನತೆ ನಿಖೀಲ್‌ ಕುಮಾರಸ್ವಾಮಿ ಅವರನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.

Advertisement

ಕಾಂಗ್ರೆಸ್‌ ನಂಬಿಕೆಗೆ ಅರ್ಹವಲ್ಲ
ಹಾಸನದ ಪ್ರಕರಣವನ್ನು ಬಳಸಿಕೊಂಡು, ಇಡೀ ದೇವೇಗೌಡರ ಕುಟುಂಬ ಮುಗಿಸಲು ಹುನ್ನಾರ ನಡೆದಿತ್ತು. ಕುಮಾರಸ್ವಾಮಿ ಅವರನ್ನು ಚನ್ನಪಟ್ಟಣದ ಜನತೆ ಎರಡು ಬಾರಿ ಗೆಲ್ಲಿಸಿದ್ದೀರಿ. ಅವರು 2 ಬಾರಿ ಮುಖ್ಯಮಂತ್ರಿಯಾಗಿದ್ದರು. ಯಡಿಯೂರಪ್ಪನ ಜತೆ ಮುಖ್ಯಮಂತ್ರಿಯಾದಾಗ ನನ್ನನ್ನು ಕೇಳಲಿಲ್ಲ. ಆದರೆ ಕಾಂಗ್ರೆಸ್‌ ಜತೆ ಸರಕಾರ ಮಾಡಿದಾಗ ನಾನು ಬೇಡ, ಕಾಂಗ್ರೆಸ್‌ನವರು ನಂಬಿಕೆಗೆ ಅರ್ಹರಲ್ಲ ಎಂದು ಹೇಳಿದ್ದೆ. ಆದರೆ ಕಾಂಗ್ರೆಸ್‌ ನವರು ಅವನ ಮೇಲೆ ಒತ್ತಡ ಹಾಕಿ ಮುಖ್ಯಮಂತ್ರಿ ಮಾಡಿದರು ಎಂದು ವಾಗ್ಧಾಳಿ ನಡೆಸಿದರು.

ಡಿಕೆಶಿ ವಿರುದ್ಧ ಗುಡುಗಿದ ಗೌಡರು
ನನ್ನ ಸಮಾಜದ ಮಹಾನುಭಾವ ಮಹಾರಾಷ್ಟ್ರ ಚುನಾವಣೆಗೆ ಸಂಬಂಧಿಸಿ ಮೋದಿ ಮತ್ತು ಕುಮಾರಸ್ವಾಮಿ ಅವರನ್ನು ಬಂಧಿಸಬೇಕೆಂದು ಹೇಳುತ್ತಿದ್ದಾರೆ. 5 ಸಾವಿರ ಕೋಟಿ ರೂ. ನೀಡಿದ್ದಾರೆ ಎಂದು ಆರೋಪಿಸಿದ್ದಾರೆ ಎಂದು ಡಿ.ಕೆ. ಶಿವಕುಮಾರ್‌ ನೀಡಿರುವ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ದೇವೇಗೌಡರು, ಡಿಕೆಶಿ ಅವರಿಗೆ ಅವರ ಮಾತುಗಳೇ ಮುಳುವಾಗಲಿವೆ. ತಮ್ಮ ಮಗನನ್ನು ಚುನಾವಣೆಗೆ ನಿಲ್ಲಿಸಲು 50 ಕೋಟಿ ಹಣಕ್ಕಾಗಿ ಮಹಾನುಭಾವನೊಬ್ಬನಿಗೆ ಬೆದರಿಕೆ ಹಾಕಿದ್ದಾರೆಂಬ ಆರೋಪಿ ಸ್ಥಾನದಲ್ಲಿ ಕುಮಾರಸ್ವಾಮಿ ಇದ್ದಾರೆ ಎಂದು ಡಿ.ಕೆ.ಶಿವಕುಮಾರ್‌ ವಿರುದ್ಧ ವ್ಯಂಗ್ಯವಾಡಿದರು.

6 ತಿಂಗಳಿಂದ ಅಭ್ಯರ್ಥಿ ಎಂದವರು ಎಲ್ಲಿ ಹೋದರು?
6 ತಿಂಗಳ ಹಿಂದೆ ಚನ್ನಪಟ್ಟಣಕ್ಕೆ ನಾನೇ ಅಭ್ಯರ್ಥಿ ಎಂದು ಬಂದವರು ಏನಾದರು. ಡಿ.ಕೆ. ಶಿವಕುಮಾರ್‌ಗೆ ಈಗ ಏನಾಗಿದೆ. ಅವರ ಬದಲು ಮತ್ತೂಬ್ಬರು ಇದೀಗ ಅಖಾಡದಲ್ಲಿದ್ದಾರೆ. ನಿಖೀಲ್‌ ಕುಮಾರಸ್ವಾಮಿ ಅವರು ನಮ್ಮ ಅಭ್ಯರ್ಥಿ ಎಂದು 11 ದಿನದ ಹಿಂದೆ ಯಾರೂ ಹೇಳಿರಲಿಲ್ಲ. ಮಂಡ್ಯದಲ್ಲಿ ಕುಮಾರಸ್ವಾಮಿ ನಿಲ್ಲಿಸಿ ಅವರನ್ನು ಕೇಂದ್ರ ಮಂತ್ರಿ ಮಾಡುತ್ತೇನೆಂದು ಪ್ರಧಾನಿ ಮೋದಿ ಅವರೇ ಹೇಳಿದ್ದರು. ಇನ್ನು ಡಾ| ಮಂಜುನಾಥ್‌ ಅಭ್ಯರ್ಥಿಯಾಗಿಸುವಂತೆ ಅಮಿತ್‌ ಶಾ ಹೇಳಿದ್ದರು. ಈ ರೀತಿ ನಮ್ಮದೂ ಮತ್ತು ಬಿಜೆಪಿ ಸಂಬಂಧ ಇದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next