Advertisement

By-election: 3 ಕ್ಷೇತ್ರದಲ್ಲೂ ಮತದಾನಕ್ಕೆ ಮತದಾರರ ಹುಮ್ಮಸ್ಸು

11:05 PM Nov 13, 2024 | Team Udayavani |

ಹುಬ್ಬಳ್ಳಿ/ಬೆಂಗಳೂರು: ಸಂಡೂರು, ಶಿಗ್ಗಾಂವಿ ಹಾಗೂ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳಿಗೆ ಬುಧವಾರ ನಡೆದ ಉಪಚುನಾವಣೆ ಶಾಂತಿಯುತವಾಗಿತ್ತಲ್ಲದೆ. ಈ ಬಾರಿ ಮತದಾನಕ್ಕೆ ಮತದಾರ ಹೆಚ್ಚಿನ ಉತ್ಸುಕತೆ ತೋರಿದ್ದು ಕಂಡುಬಂತು. ಕೆಲವೆಡೆ ಮಾತಿನ ಚಕಮಕಿ, ಮತಯಂತ್ರದಲ್ಲಿ ಸಣ್ಣಪುಟ್ಟ ದೋಷ ಹೊರತುಪಡಿಸಿದರೆ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ.

Advertisement

ಹೈವೋಲ್ಟೇಜ್‌ ಕ್ಷೇತ್ರವೆಂದೇ ಗುರುತಿಸಲ್ಪಟ್ಟ ಚನ್ನಪಟ್ಟಣದಲ್ಲಿ ಶೇ. 92ರಷ್ಟು ಮಂದಿ ಮತದಾನ ಮಾಡುವ ಮೂಲಕ ದಾಖಲೆ ಬರೆದಿದ್ದಾರೆ. 2023ರಲ್ಲಿ ನಡೆದ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಶೇ. 85.04 ಮತದಾನ ನಡೆದಿದ್ದು, ಈ ಹಿಂದಿನ ಎಲ್ಲ ಚುನಾವಣೆಗಳ ದಾಖಲೆಯನ್ನು ಈ ಚುನಾವಣೆ ಮುರಿದಿದೆ. ವೃದ್ಧರು ಹುಮ್ಮಸ್ಸಿನಿಂದ ಬಂದು ಮತಗಟ್ಟೆಯಲ್ಲಿ ಮತ ಚಲಾಯಿಸಿದ್ದು ವಿಶೇಷ.

ವಿಶೇಷ ಚೇತನ ಮತದಾರರು ಸಹ ಮತದಾನ ಮಾಡಲು ಉತ್ಸಾಹ ತೋರಿದರು. ಕೆಲವು ಮತಗಟ್ಟೆಗಳಲ್ಲಿ ಮತಯಂತ್ರದಲ್ಲಿ ತಾಂತ್ರಿಕ ದೋಷವುಂಟಾದ ಪರಿಣಾಮ ಕೆಲಕಾಲ ಮತದಾನ ಸ್ಥಗಿತಗೊಂಡಿತ್ತು. ಸ್ಥಳಕ್ಕೆ ತಂತ್ರಜ್ಞರು ಆಗಮಿಸಿ ದೋಷ ಸರಿಪಡಿಸಿ ಮತದಾನ ಸುಗಮವಾಗಿ ನಡೆಯುವಂತೆ ಮಾಡಿದರು.

ಶಿಗ್ಗಾಂವಿ, ಸಂಡೂರು ಶಾಂತಿಯುತ
ಸಂಡೂರು, ಶಿಗ್ಗಾಂವಿ ಕ್ಷೇತ್ರದ ಉಪಚುನಾವಣೆ ಸಣ್ಣ ಪುಟ್ಟ ಘಟನೆ ಹೊರತುಪಡಿಸಿ ಬಹುತೇಕ ಶಾಂತಿಯುತವಾಗಿ ಮುಗಿದಿದೆ. ಎಸ್‌ಟಿ ಮೀಸಲು ಕ್ಷೇತ್ರವಾಗಿರುವ ಸಂಡೂರಿನಲ್ಲಿ ಮತದಾನ ಬೆಳಗ್ಗೆಯಿಂದ ನೀರಸವಾಗಿತ್ತು. ಮಧ್ಯಾಹ್ನದ ಬಳಿಕ ಚುರುಕುಗೊಂಡಿದ್ದು ಸಂಜೆ ವೇಳೆಗೆ ಶೇ. 76.24 ಮತದಾನವಾಗಿದೆ. ವಡ್ಡು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಮತಗಟ್ಟೆ ಸಂಖ್ಯೆ 94ರಲ್ಲಿ ವಿವಿಪ್ಯಾಟ್‌ ಯಂತ್ರದಲ್ಲಿ ದೋಷ ಕಂಡುಬಂದಿದ್ದರಿಂದ 20 ನಿಮಿಷ ತಡವಾಗಿ ಮತದಾನ ಆರಂಭಿಸಲಾಯಿತು.

ಶಿಗ್ಗಾಂವಿ ಕ್ಷೇತ್ರದಲ್ಲಿ 80.48 ಮತದಾನವಾಗಿದೆ. 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಶೇ.79.94 ಮತದಾನವಾಗಿತ್ತು. ಪಟ್ಟಣದ ಮಾಮಲೇ ದೇಸಾಯಿ ಶಾಲೆಯಲ್ಲಿ ಸ್ಥಾಪಿಸಲಾಗಿದ್ದ ಮತಗಟ್ಟೆಗೆ ಸುನೀಲ್‌ ಎಂಬ ರೌಡಿಶೀಟರ್‌ ಆಗಾಗ ನಿರ್ಬಂಧಿತ ಪ್ರದೇಶದಲ್ಲಿ ಬಂದು ಮತಗಟ್ಟೆ ಪ್ರವೇಶಿಸಲು ಯತ್ನಿಸಿ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ ಹಿನ್ನೆಲೆಯಲ್ಲಿ ಲಾಠಿ ರುಚಿ ತೋರಿಸಿ ಶಿಗ್ಗಾಂವಿ ಠಾಣೆಗೆ ಕರೆದೊಯ್ದರು. ಶಿಗ್ಗಾಂವಿ ತಾಲೂಕಿನ ತೆವರಮೆಳ್ಳಿಹಳ್ಳಿ ಗ್ರಾಮದ ಅಂಧ ಮತದಾರರೊಬ್ಬರ ಮತಚಲಾಯಿಸಲು ಅಪರಿಚಿತ ವ್ಯಕ್ತಿಯೊಬ್ಬ ಮುಂದಾದ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ವಾಕ್ಸಮರ ನಡೆಯಿತು.

Advertisement

ಜೆಡಿಎಸ್‌-ಕೈ: ಮಾತಿನ ಚಕಮಕಿ
ಚನ್ನಪಟ್ಟಣದಲ್ಲಿ ಕೆಲವೆಡೆ ಮಾತಿನ ಚಕಮಕಿ, ಅಲ್ಲಲ್ಲಿ ತಳ್ಳಾಟ ನೂಕಾಟ ನಡೆಯಿತು. ದೊಡ್ಡಮಳೂರು, ಮಂಗಳವಾರ ಪೇಟೆ, ಕೋಡಂಬಹಳ್ಳಿ, ಸುಳ್ಳೇರಿ, ಅಕ್ಕೂರು ಹೊಸಹಳ್ಳಿಯಲ್ಲಿ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದ ಬಗ್ಗೆ ವರದಿಯಾಗಿದೆ. ಮತದಾರನನ್ನು ಮತಗಟ್ಟೆಗೆ ಕರೆತರುವುದಕ್ಕೆ ಸಂಬಂಧಿಸಿದಂತೆ 2 ಪಕ್ಷದ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಯಾರು ಎಲ್ಲಿ ಮತ ಚಲಾವಣೆ?
-ಚನ್ನಪಟ್ಟಣ ಕಾಂಗ್ರೆಸ್‌ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್‌ ಹಾಗೂ ಪತ್ನಿ ಶೀಲಾ ಯೋಗೇಶ್ವರ್‌ ಚಕ್ಕರೆ ಗ್ರಾಮದ ಮತಗಟ್ಟೆಯಲ್ಲಿ ಹಕ್ಕು ಚಲಾವಣೆ
-ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣಾ ಅವರು ಪತಿ, ಸಂಸದ ಈ. ತುಕಾರಾಂ, ಮಕ್ಕಳ ಜತೆ ಸಂಡೂರಿನ 67ನೇ ಮತಗಟ್ಟೆಯಲ್ಲಿ ಮತದಾನ
-ಶಿಗ್ಗಾಂವಿ ಬಿಜೆಪಿ ಅಭ್ಯರ್ಥಿ ಭರತ್‌ ಬೊಮ್ಮಾಯಿ, ಸಂಸದ ಬಸವರಾಜ ಬೊಮ್ಮಾಯಿ ಶಿಗ್ಗಾಂವಿ ಪಟ್ಟಣದ ಸರಕಾರಿ ಶಾಲೆ ನಂ-1ನಲ್ಲಿ ಮತದಾನ
-ಚನ್ನಪಟ್ಟಣ ಜೆಡಿಎಸ್‌ ಅಭ್ಯರ್ಥಿ ನಿಖೀಲ್‌ ಕುಮಾರಸ್ವಾಮಿಗೆ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹಕ್ಕು ಇರದ ಕಾರಣ ಅವರು ಮತ ಹಾಕಿಲ್ಲ

Advertisement

Udayavani is now on Telegram. Click here to join our channel and stay updated with the latest news.

Next