ಬೆಂಗಳೂರು: ರಾಜ್ಯ 3 ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರು ಕೊಳ್ಳೆ ಹೊಡೆದ ಗರಿಷ್ಠ ಹಣವನ್ನು ಬಳಸುವ ಪ್ರಯತ್ನ ನಡೆಸುತ್ತಿದ್ದು ಇದನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಬೇಕೆಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಮನವಿ ಮಾಡಿದರು.
ವಾಲ್ಮೀಕಿ ನಿಗಮದ ಹಗರಣದಲ್ಲಿ ಭಾಗಿಯಾಗಿ ಇತ್ತೀಚೆಗಷ್ಟೇ ಜೈಲಿನಿಂದ ಹೊರಬಂದಿರುವ ಮಾಜಿ ಸಚಿವ ಬಿ.ನಾಗೇಂದ್ರ ಅವರು ಸಂಡೂರಿನಲ್ಲಿ ಕಾಂಗ್ರೆಸ್ ಚುನಾವಣಾ ಉಸ್ತುವಾರಿಯಾಗಿದ್ದಾರೆ. ಅದೇ ರೀತಿ ವಕ್ಫ್ ಮಂಡಳಿ ನೋಟಿಸ್ ಮೂಲಕ ರೈತರ ಜಮೀನು ಕಬಳಿಸಲು ಯತ್ನಿಸುತ್ತಿರುವ ಸಚಿವ ಜಮೀರ್ ಶಿಗ್ಗಾವಿಯಲ್ಲಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದು, ಚನ್ನಪಟ್ಟಣ ಉಸ್ತುವಾರಿ ನೋಡಿಕೊಳ್ಳುತ್ತಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಬಗ್ಗೆ ಹೇಳುವುದೇ ಬೇಡ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ವ್ಯಂಗ್ಯವಾಡಿದರು.
ಕಾಂಗ್ರೆಸ್ ಪಕ್ಷದ ಈ ಮೂವರು ಚುನಾವಣಾ ಉಸ್ತುವಾರಿಗಳ ಮೇಲೆ ಗಂಭೀರವಾದ ನಿಗಾ ವಹಿಸಬೇಕು. ಚುನಾವಣಾ ಆಯೋಗಕ್ಕೆ ಬೇಕಾದ ಮಾಹಿತಿಗಳನ್ನು ನೀಡಲು ನಾವು ಸಿದ್ಧರಿದ್ದೇವೆ. ನಿಗಾ ಇಲ್ಲದಿದ್ದರೆ, ಈ ಚುನಾವಣೆಯನ್ನು ಹಣದ ಪ್ರಭಾವದ ಚುನಾವಣೆಯಾಗಿ ಪರಿವರ್ತಿಸಲಿದ್ದಾರೆ ಎಂದು ಆರೋಪಿಸಿದರು.
ಎಲ್ಲ ಕಡೆಯಿಂದ ಚಕ್ರವ್ಯೂಹವನ್ನು ಪ್ರವೇಶಿಸಿದ ರೀತಿಯಲ್ಲಿ ಕಾಂಗ್ರೆಸ್ಸಿಗರು ಈ ಬಾರಿಯ ಉಪ ಚುನಾವಣೆಯನ್ನು ಎದುರಿಸುತ್ತಿದ್ದಾರೆ. ಕರ್ನಾಟಕದ ಬೊಕ್ಕಸ ಲೂಟಿಯಲ್ಲಿ ನಿಸ್ಸೀಮರಾದ 3 ಜನ ಕಾಂಗ್ರೆಸ್ಸಿಗರು ಉಪ ಚುನಾವಣೆ ಉಸ್ತುವಾರಿ ತೆಗೆದುಕೊಂಡಿದ್ದಾರೆ. ಅವರು ಸಾಕಷ್ಟು ಹಣಬಲದಿಂದ ಚುನಾವಣೆ ಗೆಲ್ಲುವ ಮಾನಸಿಕತೆ ಉಳ್ಳವರು ಎಂದು ದೂಷಿಸಿದರು. ಬಿಜೆಪಿ ರಾಜ್ಯ ವಕ್ತಾರರಾದ ಕು. ಸುರಭಿ ಹೊದಿಗೆರೆ, ರಾಜ್ಯ ಮಾಧ್ಯಮ ಸಮಿತಿ ಸದಸ್ಯ ಶ್ರೀನಾಥ್ ಯು ಅವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.
“ಜನರು ಹಣದ ಪ್ರಭಾವಕ್ಕೆ ಒಳಗಾದರೆ, ರಾಜ್ಯದಲ್ಲಿ ಕಾಂಗ್ರೆಸ್ಸಿನ ಅಭಿವೃದ್ಧಿ ಶೂನ್ಯ ಆಡಳಿತ ಮುಂದುವರಿಯುತ್ತದೆ. ಹಗರಣಗಳ ಸರ್ಕಾರ, ರೈತರ ಭೂಮಿ ಕಬಳಿಕೆ, ಮಳೆ ಹಾನಿಯ ಪರಿಹಾರ ಕೊಡಲಾಗದ ದಯನೀಯ ಸ್ಥಿತಿ ಮತ್ತೆ ಮುಂದುವರೆಯಲಿದೆ. ರಾಜ್ಯದಲ್ಲಿ 3ಕ್ಕೆ 3 ಸ್ಥಾನಗಳನ್ನು ಎನ್ಡಿಎ ಗೆಲ್ಲಲಿದೆ. ಅದರಲ್ಲಿ ಯಾವುದೇ ಸಂದೇಹವಿಲ್ಲ. ಹಣದ ಪ್ರಭಾವವನ್ನು ನಿಲ್ಲಿಸಬೇಕಿದೆ. ಈ ಗೆಲುವಿನಿಂದ ರಾಜ್ಯದ ದುರಾಡಳಿತದ ವಿರುದ್ಧ ಒಂದು ಸಂದೇಶ ನೀಡಬೇಕಿದೆ.”
– ಡಿ.ವಿ. ಸದಾನಂದಗೌಡ, ಮಾಜಿ ಮುಖ್ಯಮಂತ್ರಿ