Advertisement

ಕರ್ನಾಟಕ-ಆಂಧ್ರ ಗಡಿ ಪತ್ತೆಗೆ ಮತ್ತೂಮ್ಮೆ ಸರ್ವೇ

06:00 AM Jul 27, 2018 | |

ಬಳ್ಳಾರಿ: ಕರ್ನಾಟಕ-ಆಂಧ್ರಪ್ರದೇಶದ ಅಂತಾರಾಜ್ಯ ಗಡಿ ಗುರುತು ಪತ್ತೆಗಾಗಿ ಸರ್ವೇ ಆಫ್‌ ಇಂಡಿಯಾದಿಂದ ಮತ್ತೂಮ್ಮೆ ಸರ್ವೇ ಕಾರ್ಯ ನಡೆಯಲಿದೆ.

Advertisement

ಈಗಾಗಲೇ ಒಮ್ಮೆ ಸರ್ವೇ ನಡೆಸಿರು ಡೆಹರಾಡೂನ್‌ನ ಸರ್ವೇ ಜನರಲ್‌ ಆಫ್‌ ಇಂಡಿಯಾದ ಅಧಿಕಾರಿಗಳು ಇದೀಗ ಇನ್ನಷ್ಟು ಗಡಿ
ಗುರುತುಗಳನ್ನು ಪತ್ತೆಹಚ್ಚಲು ಮತ್ತೂಮ್ಮೆ ಸರ್ವೇ ನಡೆಸಲು ಬಳ್ಳಾರಿಗೆ ಆಗಮಿಸುವ ಸಾಧ್ಯತೆಯಿದೆ.

ಡೆಹರಾಡೂನ್‌ನಲ್ಲಿ ಈಚೆಗೆ ನಡೆದ ಸಭೆಯಲ್ಲಿ ಆಂಧ್ರ ಪ್ರದೇಶದ ಅಧಿಕಾರಿಗಳು ಕೆಲ ಪ್ರಮುಖ ಗಡಿಗುರುತುಗಳಿಗೆ ಸಂಬಂಧಿಸಿದ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸರ್ವೇ ಜನರಲ್‌ ಆಫ್‌ ಇಂಡಿಯಾದ ಅಧಿಕಾರಿಗಳು ಮತ್ತೂಮ್ಮೆ ಸರ್ವೇ ನಡೆಸಲು ಸಮ್ಮತಿ ಸೂಚಿಸಿದ್ದಾರೆಂದು ತಿಳಿದು ಬಂದಿದೆ.

ಗಣಿಗಾರಿಕೆ ನಡೆಸಿದ ಸಂದರ್ಭದಲ್ಲಿ ಗಡಿ ನಾಶ ಆಗಿದೆ ಎಂಬ ಆರೋಪ ಮೊದಲಿನಿಂದಲೂ ಇದೆ. ನೆರೆಯ ಆಂಧ್ರದ ಓಬುಳಾಪುರಂ ಗಣಿ ಕಂಪನಿ ಪ್ರದೇಶದಲ್ಲಿ ಕರ್ನಾಟಕ-ಆಂಧ್ರಕ್ಕೆ ಸಂಬಂಧಿಸಿದ  ಅಂತಾರಾಜ್ಯ ಗಡಿನಾಶ ವಿವಾದ ದಶಕದಿಂದ ಇದೆ. ಈ ವಿವಾದವನ್ನು ಅಂತಾರಾಜ್ಯಗಳ ಟ್ರೈಜಂಕ್ಷನ್‌, ಬೈಜಂಕ್ಷನ್‌ ಅಥವಾ ಎರಡೂ ರಾಜ್ಯಗಳ ಗ್ರಾಮ ನಕ್ಷೆಗಳಿಂದ ಸರ್ವೇ ನಡೆಸಿ ಗಡಿಗುರುತುಗಳನ್ನು ಪತ್ತೆ ಹಚ್ಚುವಂತೆ ಸುಪ್ರೀಂ ಕೋರ್ಟ್‌ ಈಗಾಗಲೇ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ಸರ್ವೇ ಜನರಲ್‌ ಆಫ್‌ ಇಂಡಿಯಾದ ಅಧಿಕಾರಿಗಳು 2 ತಿಂಗಳ ಹಿಂದೆ, ಅಂತಾರಾಜ್ಯಗಳ ಅರಣ್ಯ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಜಂಟಿಯಾಗಿ ಸರ್ವೇ ನಡೆಸಿದ್ದರು.

ಬಳ್ಳಾರಿ ರಕ್ಷಿತಾರಣ್ಯ ಪ್ರದೇಶ (ಮೀಸಲು ಅರಣ್ಯ) ವ್ಯಾಪ್ತಿಯಲ್ಲಿ ಬರುವ ಆಂಧ್ರಪ್ರದೇಶದ ಅನಂತಪುರ ಜಿಲ್ಲಾ ಡಿ.ಹಿರೇಹಾಳ್‌ ಮಂಡಲದ ಓಬಳಾಪುರಂ,ಮಲಪನಗುಡಿ, ಎಚ್‌.ಸಿದ್ದಾಪುರಂ ಗ್ರಾಮಗಳು ಮತ್ತು ಕರ್ನಾಟಕದಲ್ಲಿನ ಬಳ್ಳಾರಿ ಜಿಲ್ಲೆಯಲ್ಲಿನ 6
ಕಂದಾಯ ಗ್ರಾಮಗಳ ವ್ಯಾಪ್ತಿ ಪ್ರದೇಶದಲ್ಲಿ ಸರ್ವೇ ನಡೆಸಿದ್ದರು. ಆಯಾ ಗ್ರಾಮಗಳಲ್ಲಿ ಇದ್ದ ಸರ್ವೇ ಗುರುತುಗಳನ್ನು ಆಧರಿಸಿ ಗಡಿಯನ್ನು ಪತ್ತೆ ಹಚ್ಚಲು ಅಧಿಕಾರಿಗಳು ಪ್ರಯತ್ನಿಸಿದ್ದರು.

Advertisement

ಆದರೆ, ಗಡಿ ಭಾಗದಲ್ಲಿ ಗಣಿಗಾರಿಕೆ ನಡೆಸಿದ ಗಣಿ ಕಂಪನಿಗಳ ಮಾಲೀಕರು ಗಡಿಗುರುತುಗಳನ್ನು ಧ್ವಂಸ ಮಾಡಿದ್ದು, ಇದರಿಂದ ಅವುಗಳನ್ನು ಪತ್ತೆ ಹಚ್ಚಲು ಅಧಿಕಾರಿಗಳಿಗೆ ಕಷ್ಟವಾಗುತ್ತಿದೆ ಎಂದು ತಿಳಿದು ಬಂದಿದೆ.

ಗಡಿ ಗುರುತಿಗೆ ಸಂಬಂಧಿಸಿದಂತೆ ಪ್ರಮುಖವಾಗಿ ಅಧಿಕಾರಿಗಳು ಜಿಪಿಎಸ್‌ ಮೂಲಕ ಸರ್ವೇ ನಡೆಸಲು ಮುಂದಾಗಿದ್ದರು. ನಂತರ ಕಳೆದ ಜೂನ್‌ 25, 26 ರಂದು ಡೆಹರಾಡೂನ್‌ನ ಸರ್ವೇ ಜನರಲ್‌ ಆಫ್‌ ಇಂಡಿಯಾದ ಮುಖ್ಯ ಕಚೇರಿಯಲ್ಲಿ ಕರ್ನಾಟಕ,
ಆಂಧ್ರ ಪ್ರದೇಶದ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆಯಲ್ಲಿ ಸರ್ವೇ ಜನರಲ್‌ ಆಫ್‌ ಇಂಡಿಯಾದ ಅಧಿಕಾರಿಗಳು, ತಾವು ಪತ್ತೆ ಹಚ್ಚಿದ್ದ ಗಡಿ ಗುರುತುಗಳ ಬಗ್ಗೆ ಉಭಯ ರಾಜ್ಯಗಳ ಅಧಿಕಾರಿಗಳು ಸಭೆಯಲ್ಲಿ ವಿವರಿಸಿದ್ದಾರೆ. ಈ ಮಾಹಿತಿಯನ್ನು ಸ್ವೀಕರಿಸಿದ ಸರ್ವೇ ಜನರಲ್ ಇಂಡಿಯಾದ ಅಧಿಕಾರಿಗಳು ಪುನಃ ಮತ್ತೂಮ್ಮೆ ಸಭೆ ನಡೆಸಿ ಮುಂದಿನ ನಿರ್ಣಯ ಕೈಗೊಳ್ಳುವ ಬಗ್ಗೆ
ಚಿಂತಿಸುವುದಾಗಿ ತಿಳಿಸಿದ್ದಾರೆಂದು ತಿಳಿದು ಬಂದಿದೆ.

– ವೆಂಕೋಬಿ ಸಂಗನಕಲ್ಲು

Advertisement

Udayavani is now on Telegram. Click here to join our channel and stay updated with the latest news.

Next