Advertisement

Language Communication: ನಾಪತ್ತೆಯಾಗಿದ್ದ ಮಹಿಳೆ “ಕನ್ನಡ’ದಿಂದಾಗಿ ಪತ್ತೆ!

04:02 AM Dec 24, 2024 | Team Udayavani |

ಬಳ್ಳಾರಿ: ಸುಮಾರು 2 ದಶಕಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆಯೊಬ್ಬರು ಉತ್ತರ ಭಾರತದ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ “ಕನ್ನಡ’ ಭಾಷಾ ಸಂವಹನದಿಂದ ಪತ್ತೆಯಾಗಿದ್ದಾರೆ. ಎರಡು ದಶಕಗಳಿಂದ ದೂರವಾಗಿದ್ದ ಕುಟುಂಬಸ್ಥರು, ಮಕ್ಕಳನ್ನು ಈಕೆ ಇನ್ನೆರಡು ದಿನಗಳಲ್ಲಿ ಸೇರಲಿದ್ದಾರೆ.

Advertisement

ಸುಮಾರು 60 ವರ್ಷದ ಸಾಕಮ್ಮ ಮಂಡಿಯಲ್ಲಿ ಪತ್ತೆಯಾಗಿರುವ ಮಹಿಳೆ. ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕು ಪೋತಲಕಟ್ಟೆ ನಿವಾಸಿಯಾಗಿರುವ ಇವರು, ಎರಡು ದಶಕಗಳ ಹಿಂದೆ ಕಂಪ್ಲಿಯಲ್ಲಿ ಸಂಬಂಧಿ ಕರ ಸಮಾರಂಭವೊಂದರಲ್ಲಿ ನಾಪತ್ತೆಯಾಗಿದ್ದರು. ಎಷ್ಟು ಹುಡುಕಾಡಿದರೂ ಸಿಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಆಕೆ ಮೃತಪಟ್ಟಿದ್ದಾರೆ ಎಂದು ಭಾವಿಸಿ ತಿಥಿ ಕಾರ್ಯ ಕೂಡ ಮುಗಿಸಿದ್ದರು. ಆದರೆ, ಎರಡು ದಶಕಗಳ ಬಳಿಕ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಪತ್ತೆಯಾಗಿದ್ದಾರೆ.

ಅಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹಾಸನದ ಐಪಿಎಸ್‌ ಅಧಿಕಾರಿ ರವಿನಂದನ್‌ ಅವರು, ಸಾಕಮ್ಮ ಕನ್ನಡ ಮಾತನಾಡುವುದನ್ನು ನೋಡಿ ವಿಚಾರಿಸಿದಾಗ ಅವರು ತಮ್ಮ ಕುಟುಂಬದ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನು ವೀಡಿಯೋ ಮಾಡಿದ ಐಪಿಎಸ್‌ ಅಧಿಕಾರಿ ರವಿನಂದನ್‌, ಬೆಂಗಳೂರಿನ ತಮ್ಮ ಸ್ನೇಹಿತರೊಬ್ಬರಿಗೆ ಕಳುಹಿಸಿದ್ದು, ಅವರು ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದರು.

ಇದನ್ನು ಗಮನಿಸಿದ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್‌ ಅವರು, ಬಳ್ಳಾರಿ ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆಗೆ ಆ ವೀಡಿಯೋ ಕಳುಹಿಸಿದ್ದಾರೆ. ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆಯು ಸಾಕಮ್ಮಳ ಸಂಬಂಧಿಕರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ. ಮಂಡಿ ಜಿಲ್ಲೆಯ ಬಾಲಕೋಟ್‌ ವೃದ್ಧಾಶ್ರಮದಲ್ಲಿ ವಾಸವಾಗಿರುವ ಸಾಕಮ್ಮಳನ್ನು ಕರೆತರಲು ಕಾರ್ಯಪ್ರವೃತ್ತರಾಗಿರುವ ಅಧಿಕಾರಿಗಳ ತಂಡ ಅಲ್ಲಿಗೆ ತೆರಳಿದೆ. ಶನಿವಾರ ಬೆಳಗ್ಗೆ ವೃದ್ಧಾಶ್ರಮಕ್ಕೆ ತಲುಪಿ ಸಾಕಮ್ಮಳನ್ನು ಮಾತನಾಡಿಸಿದ್ದಾರೆ. ಸಾಕಮ್ಮ ಅವರೊಂದಿಗೆ ತಂಡ ಡಿ.25ರಂದು ಬಳ್ಳಾರಿ ತಲುಪುವ ನಿರೀಕ್ಷೆ ಇದೆ.

ಭಾವುಕರಾದ ಮಕ್ಕಳು
ಸಾಕಮ್ಮ ನಾಪತ್ತೆಯಾದಾಗ ಅವರು ಮೂವರು ಮಕ್ಕಳು ಕ್ರಮವಾಗಿ 8, 10, 12 ವರ್ಷದವರಾಗಿದ್ದರು. ಎರಡು ದಶಕಗಳ ಬಳಿಕ ತಾಯಿ ಜೀವಂತವಾಗಿದ್ದಾಳೆ ಎಂದು ಗೊತ್ತಾಗಿ ವೀಡಿಯೋ ಕಾಲ್‌ನಲ್ಲಿ ಮಾತನಾಡಿದ ಮಕ್ಕಳು ಭಾವುಕರಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next