Advertisement

Fraud: ಆಂಧ್ರ ಮಾಜಿ ಸಿಎಂ ಆಪ್ತನ ಹೆಸರ‌ಲ್ಲಿ ವಂಚನೆ

10:45 AM Dec 31, 2024 | Team Udayavani |

ಬೆಂಗಳೂರು: ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ ಆಪ್ತ ಸಹಾಯಕನ ಹೆಸರಿನಲ್ಲಿ ಕರೆ ಮಾಡಿ ಯುವ ಕ್ರಿಕೆಟಿಗನಿಗೆ ಪ್ರಾಯೋಜಕತ್ವದ ನೆಪದಲ್ಲಿ ಸಂಗೀತಾ ಮೊಬೈಲ್‌ ಕಂಪನಿಗೆ 10.40 ಲಕ್ಷ ರೂ. ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ.

Advertisement

ಈ ಸಂಬಂಧ ಬನಶಂಕರಿ 2ನೇ ಹಂತದ ಸಂಗೀತಾ ಮೊಬೈಲ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿ ವ್ಯವಸ್ಥಾಪಕ ಕೆ.ಬಿ.ರಾಜೇಶ್‌ ಎಂಬುವರು ನೀಡಿದ ದೂರಿನ ಮೇರೆಗೆ ಅಪರಿಚಿತ ವ್ಯಕ್ತಿಯ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಎಫ್ಐಆರ್‌ ದಾಖಲಾಗಿದೆ.

ಏನಿದು ದೂರು?: ದೂರುದಾರ ಕೆ.ಬಿ. ರಾಜೇಶ್‌ ಮೊಬೈಲ್‌ಗೆ ಇತ್ತೀಚೆಗೆ ಅಪರಿಚಿತ ಸಂಖ್ಯೆಯಿಂದ ಕರೆ ಮಾಡಿದ್ದ ವ್ಯಕ್ತಿ ತಾನು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ ಅವರ ಆಪ್ತ ಸಹಾಯಕ ಕೆ.ನಾಗೇಶ್ವರ ರೆಡ್ಡಿ ಎಂದು ಪರಿಚಯಿಸಿ ಕೊಂಡಿದ್ದಾನೆ. ಬಳಿಕ ಆಂಧ್ರಪ್ರದೇಶ ಕ್ರಿಕೆಟ್‌ ಸಂಸ್ಥೆಯಿಂದ ಆಟವಾಡುತ್ತಿರುವ ರಿಕಿ ಭುವಿ ಎಂಬ ಆಟಗಾರನಿಗೆ ಪ್ರಾಯೋಜಕತ್ವದ ಅಗತ್ಯವಿದ್ದು, ಆತನಿಗೆ ನಿಮ್ಮ ಕಂಪನಿಯಿಂದ 2 ಕ್ರಿಕೆಟ್‌ ಸೆಟ್‌ ಪ್ರಾಯೋಜಕತ್ವ ನೀಡುವಂತೆ ಕೇಳಿಕೊಂಡಿದ್ದಾನೆ. ಈ 2 ಸೆಟ್‌ ಕಿಟ್‌ಗೆ 10.40 ಲಕ್ಷ ರೂ. ವೆಚ್ಚವಾಗಲಿದೆ. ಹಣವನ್ನು ಬ್ಯಾಂಕ್‌ ಖಾತೆಗೆ ವರ್ಗಾಯಿಸುವಂತೆ ಬ್ಯಾಂಕ್‌ ಖಾತೆ ವಿವರ ನೀಡಿದ್ದಾನೆ.

ಅದನ್ನು ನಂಬಿದ ದೂರುದಾರ ರಾಜೇಶ್‌, 2022ರ ಮೇ 10 ಮತ್ತು ಮೇ 11ರಂದು 5.20 ಲಕ್ಷ ರೂ.ನಂತೆ ಒಟ್ಟು 10.40 ಲಕ್ಷ ರೂ.ಅನ್ನು ಬ್ಯಾಂಕ್‌ ಖಾತೆಗೆ ವರ್ಗಾಯಿಸಿದ್ದಾರೆ. ಬಳಿಕ ಇನ್‌ ವಾಯ್ಸ್ ಕೊಡುವಂತೆ ಕೇಳಿದಾಗ ಒಂದೊಂದು ಕಾರಣ ನೀಡಿದ್ದಾನೆ. ಬಳಿಕ ಹಲವು ಬಾರಿ ಕರೆ ಮಾಡಿದರೂ ಕರೆ ಸ್ವೀಕರಿಸಿಲ್ಲ.  ಈ ಬಗ್ಗೆ ಅನುಮಾನಗೊಂಡು ವಿಚಾರಿಸಿದಾಗ, ಅಪರಿಚಿ ವ್ಯಕ್ತಿಯು ಆಂಧ್ರಪ್ರದೇಶದ ಮುಖ್ಯಮಂತ್ರಿಯ ಆಪ್ತ ಸಹಾಯಕ ಕೆ.ನಾಗೇಶ್ವರ ರೆಡ್ಡಿ ಅವರ ಹೆಸರು ದುರ್ಬಳಕೆ ಮಾಡಿಕೊಂಡಿರುವುದು ಗೊತ್ತಾಗಿದೆ.

ಹೀಗಾಗಿ ಅಪರಿಚಿತ ವಂಚಕನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ. ಆರೋಪಿ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next