Advertisement

INDIA ಕೂಟದಿಂದ ಕಾಂಗ್ರೆಸ್‌ ಹೊರಗಿಡಲು ಆಪ್‌ ಒತ್ತಾಯ!

09:35 PM Dec 26, 2024 | Team Udayavani |

ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ಇಂಡಿಯಾ ಕೂಟದಲ್ಲಿನ ಬಿರುಕು ಹೆಚ್ಚತೊಡಗಿದೆ. ಆಪ್‌ ಹಾಗೂ ಅರವಿಂದ್‌ ಕೇಜ್ರಿವಾಲ್‌ ವಿರುದ್ಧ ಆರೋಪ ಮಾಡಿರುವ ನಾಯಕರ ವಿರುದ್ಧ 24 ಗಂಟೆಯಲ್ಲಿ ಕಾಂಗ್ರೆಸ್‌ ಶಿಸ್ತು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ “ಇಂಡಿಯಾ ಕೂಟ’ದಿಂದ ಕಾಂಗ್ರೆಸ್‌ ಹೊರ ಹಾಕುವ ಬಗ್ಗೆ ಒತ್ತಾಯಿಸಲಾಗುವುದು ಎಂದು ಆಮ್‌ ಆದ್ಮಿ ಪಕ್ಷ (ಆಪ್‌) ಗುರುವಾರ ಹೇಳಿದೆ.

Advertisement

ಬಿಜೆಪಿ ವಿರುದ್ಧ ಮಾತನಾಡುವ ಬದಲು ಕಾಂಗ್ರೆಸ್‌ನ ಅಜಯ್‌ ಮಾಕೇನ್‌ ಮತ್ತು ಸಂದೀಪ್‌ ದೀಕ್ಷಿತ್‌ ಅವರು ಆಪ್‌ ವಿರುದ್ಧವೇ ಆರೋಪಗಳನ್ನು ಮಾಡುತ್ತಿದ್ದಾರೆಂದು ಪತ್ರಿಕಾಗೋಷ್ಠಿಯಲ್ಲಿ ದೆಹಲಿ ಮುಖ್ಯಮಂತ್ರಿ ಆತಿಶಿ ಹಾಗೂ ರಾಜ್ಯಸಭಾ ಸದಸ್ಯ ಸಂಜಯ್‌ ಸಿಂಗ್‌ ಆರೋಪಿಸಿದ್ದಾರೆ.

ಕಾಂಗ್ರೆಸ್‌ನ ಅಜಯ್‌ ಮಾಕೇನ್‌ ಅವರು, 2013ರಲ್ಲಿ ಆಪ್‌ಗೆ ಬೆಂಬಲ ನೀಡುವ ನಿರ್ಧಾರವು ಪಕ್ಷದ ಅವನತಿಗೆ ಕಾರಣವಾಯಿತು. ಆ ತಪ್ಪನ್ನು ಇತ್ತೀಚೆಗೆ ಮುಕ್ತಾಯವಾದ ಲೋಕಸಭೆ ಚುನಾವಣೆ ಸರಿಪಡಿಸಿಕೊಳ್ಳಲಿಲ್ಲ ಎಂದು ಹೇಳಿದ್ದರು. ಜತೆಗೆ, ಅಸ್ತಿತ್ವದಲ್ಲಿ ಇಲ್ಲದ ಯೋಜನೆಗಳಿಗೆ ಸಂಬಂಧಿಸಿದಂತೆ ಆಪ್‌ ಮುಖ್ಯಸ್ಥ ಕೇಜ್ರಿವಾಲ್‌ ವಿರುದ್ಧ ದಿಲ್ಲಿ ಯುವ ಕಾಂಗ್ರೆಸ್‌ ದೂರು ಕೂಡ ನೀಡಿದೆ. ಈ ಮಧ್ಯೆ, ಸಂದೀಪ್‌ ದೀಕ್ಷಿತ್‌ ಅವರ ಹೇಳಿಕೆಗಳು ಆಪ್‌ ಮತ್ತು ಕಾಂಗ್ರೆಸ್‌ ನಡುವಿನ ವಿರಸಕ್ಕೆ ಕಾರಣವಾಗಿದೆ.

ಆಪ್‌ ಆರೋಪ ಏನು?
ಹರ್ಯಾಣ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್‌ ಜತೆ ಮೈತ್ರಿ ಸಾಧಿಸಲು ಆಪ್‌ ಪ್ರಾಮಾಣಿಕ ಪ್ರಯತ್ನ ಮಾಡಿತು. ಅಲ್ಲದೇ, ನಮ್ಮ ನಾಯಕರಾರೂ ಪ್ರಚಾರದ ವೇಳೆ ಕಾಂಗ್ರೆಸ್‌ ವಿರುದ್ಧ ಮಾತನಾಡಲಿಲ್ಲ. ಆದರೆ, ದಿಲ್ಲಿಯಲ್ಲಿ ಮಾತ್ರ ಕಾಂಗ್ರೆಸ್‌ ನಾಯಕರು ಬಿಜೆಪಿಯ ಸ್ಕ್ರಿಪ್ಟ್ನಂತೆ ನಡೆದುಕೊಳ್ಳುತ್ತಿದ್ದಾರೆ. ಕಾಂಗ್ರೆಸ್‌ ಪ್ರಕಟಿಸಿರುವ ಅಭ್ಯರ್ಥಿಗಳ ಪಟ್ಟಿಯನ್ನು ನೋಡಿದರೆ, ಅದು ಬಿಜೆಪಿ ಕಚೇರಿಯಲ್ಲಿ ಅಂತಿಮವಾದಂತಿದೆ ಎಂದು ಆತಿಶಿ ಹಾಗೂ ಸಂಜಯ್‌ ಸಿಂಗ್‌ ಆರೋಪಿಸಿದ್ದಾರೆ.

ಕೇಜ್ರಿವಾಲರನ್ನು ರಾಷ್ಟ್ರ ವಿರೋಧಿ ಎಂದು ಕರೆಯುವ ಮೂಲಕ ಸಂಸದ ಅಜಯ್‌ ಮಾಕೇನ್‌ ಮಿತಿ ಮೀರುತ್ತಿದ್ದಾರೆ. ಈ ಹಿಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್‌ ಪರ ಪ್ರಚಾರ ಮಾಡಿದ್ದ ಹೊರತಾಗಿಯೂ ಕೇಜ್ರಿವಾಲ್‌ ಈಗ ಪ್ರಕರಣಗಳನ್ನು ಎದುರಿಸುವಂತಾಗಿದೆ. ಬಿಜೆಪಿ ವಿರುದ್ಧ ಕಾಂಗ್ರೆಸ್‌ ಒಂದೇ ಒಂದು ಪ್ರಕರಣ ದಾಖಲಿಸಿಲ್ಲ ಎಂದೂ ನಾಯಕರಿಬ್ಬರು ಹೇಳಿದ್ದಾರೆ.

Advertisement

ಕಾಂಗ್ರೆಸ್‌ ಅಭ್ಯರ್ಥಿಗಳಾದ ಸಂದೀಪ್‌ ದೀಕ್ಷಿತ್‌ ಹಾಗೂ ಫ‌ರ್ಹಾದ್‌ ಸೂರಿ ಅವರಿಗೆ ಬಿಜೆಪಿಯಿಂದ ಬೆಂಬಲ ದೊರೆಯುತ್ತಿದೆ. ಈ ನಡೆಗಳು ಇಂಡಿಯಾ ಕೂಟದೆಡೆಗಿನ ಕಾಂಗ್ರೆಸ್‌ನ ಬದ್ಧತೆ ಬಗ್ಗೆ ಅನುಮಾನ ಹುಟ್ಟುವಂತೆ ಮಾಡಿದೆ ಎಂದು ಅವರು ಆರೋಪಿಸಿದ್ದಾರೆ.

ಏಕೆ ಜಟಾಪಟಿ?
– 2013ರ ದಿಲ್ಲಿ ವಿಧಾನಸಭೆ ಎಲೆಕ್ಷನ್‌ ವೇಳೆ ಆಪ್‌ ಜತೆಗಿನ ಮೈತ್ರಿಯಿಂದ ಕಾಂಗ್ರೆಸ್‌ಗೆ ನಷ್ಟ
– ಕಾಂಗ್ರೆಸ್‌ ನಾಯಕ ಅಜಯ್‌ ಮಾಕೇನ್‌ ಈ ಹೇಳಿಕೆಗೆ ಆಮ್‌ ಆದ್ಮಿ ಪಾರ್ಟಿ ಫ‌ುಲ್‌ ಗರಂ
– ಅಸ್ತಿತ್ವದಲ್ಲಿಲ್ಲದ ಯೋಜನೆ ಜಾಹೀರಾತು ಬಗ್ಗೆ ದಿಲ್ಲಿ ಯುವ ಕಾಂಗ್ರೆಸ್‌ನಿಂದ ಕೇಜ್ರಿವಾಲ್‌ ವಿರುದ್ಧ ದೂರು
– ಆಪ್‌ ಹಾಗೂ ಕೇಜ್ರಿವಾಲ್‌ ವಿರುದ್ಧ ಮತ್ತೂಬ್ಬ ನಾಯಕ ಸಂದೀಪ್‌ ದೀಕ್ಷಿತ್‌ ವಾಗ್ಧಾಳಿ
– ಆಪ್‌ಗೆ ಅನನುಕೂಲವಾಗುವ ರೀತಿಯಲ್ಲಿ ಕಾಂಗ್ರೆಸ್‌ ಪಕ್ಷದಿಂದ ಅಭ್ಯರ್ಥಿಗಳ ಆಯ್ಕೆ
– ಬಿಜೆಪಿ ವಿರುದ್ಧ ಮಾತನಾಡುವ ಬದಲು ಆಪ್‌ ವಿರುದ್ಧ ಟೀಕೆ ಎಂಬ ಆಪ್‌ ನಾಯಕರ ಆರೋಪ
– ಆಪ್‌ಗೆ ಹಿನ್ನಡೆಯುಂಟು ಮಾಡಲು ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಬಿಜೆಪಿ ನೆರವು: ಆಪ್‌ ಆರೋಪ

Advertisement

Udayavani is now on Telegram. Click here to join our channel and stay updated with the latest news.

Next