Advertisement

ಆಶ್ವಾಸನೆ ಸಾಕು,ಮಂದಿರ ಬೇಕು

06:00 AM Nov 06, 2018 | |

ಫೈಜಾಬಾದ್‌: ಅಯೋಧ್ಯೆಯ ವಿವಾದಿತ ಜಾಗದಲ್ಲಿ ರಾಮಮಂದಿರ ನಿರ್ಮಾಣ ವಾಗಬೇಕು ಎಂಬ ಕೂಗಿಗೆ ಈಗ ಸ್ಥಳೀಯರೂ ಧ್ವನಿಗೂಡಿಸಿದ್ದಾರೆ. ಈವರೆಗೆ ರಾಜಕೀಯ ಪಕ್ಷಗಳೆಲ್ಲ ಮಂದಿರ ನಿರ್ಮಾಣದ ಆಶ್ವಾಸನೆಗಳನ್ನಷ್ಟೇ ಕೊಡುತ್ತಾ ಬಂದಿದ್ದಾರೆ. ಇನ್ನು ಇಂಥ ಆಶ್ವಾಸನೆಗಳನ್ನು ಬಿಟ್ಟು, ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಮಂದಿರ ನಿರ್ಮಿಸಲಿ ಎಂದು ಅಯೋಧ್ಯೆಯ ಜನ ಆಗ್ರಹಿಸತೊಡಗಿದ್ದಾರೆ.

Advertisement

ಈ ಬಾರಿಯ ಬೆಳಕಿನ ಹಬ್ಬದಲ್ಲಿ ಉತ್ತರಪ್ರದೇಶ ಸರಕಾರವು ಅದ್ಧೂರಿ ದೀಪೋತ್ಸವವನ್ನು ಆರಂಭಿಸಿರುವುದು ಪ್ರವಾಸಿಗರನ್ನು ಆಕರ್ಷಿಸುತ್ತಿದೆ ನಿಜ. ಆದರೆ, ನಮಗೆ ಬೇಕಾಗಿರುವುದು ರಾಮಮಂದಿರ ನಿರ್ಮಾಣ. ಸರಕಾರವು ಶ್ರೀರಾಮನ ಬೃಹತ್‌ ಪ್ರತಿಮೆ ನಿರ್ಮಾಣಕ್ಕೆ ಹೊರಟಿದೆ. ಪ್ರತಿಮೆಯ ಮೂಲಕ ನಮ್ಮ ಗಮನ ಬೇರೆಡೆಗೆ ಸೆಳೆಯದೇ, ಮಂದಿರ ನಿರ್ಮಾಣದ ಆಶ್ವಾಸನೆಯನ್ನು ಸರಕಾರ ಪೂರೈಸಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ. ಈ ದೀಪಾವಳಿಯು ನಮ್ಮಲ್ಲಿ ರಾಮಮಂದಿರದ ಹೊಸ ಭರವಸೆ ಮೂಡಿಸಿದೆ. 

ಸಿಎಂ ಯೋಗಿ ಆದಿತ್ಯನಾಥ್‌ ಅವರು ಖಂಡಿತಾ ಈ ನಿಟ್ಟಿನಲ್ಲಿ ಹೆಜ್ಜೆಯಿಡುತ್ತಾರೆ ಎಂಬ ವಿಶ್ವಾಸ ನಮಗಿದೆ. ಒಂದು ವೇಳೆ, ಬಿಜೆಪಿ ಮಂದಿರ ನಿರ್ಮಿಸದೇ ಇದ್ದರೆ ಜನರ ಆಕ್ರೋಶಕ್ಕೆ ಕಾರಣವಾದೀತು. ಮೊದಲು ಯಾವಾಗ ನಿರ್ಮಾಣ ಕಾಮಗಾರಿ ಆರಂಭವಾಗುತ್ತದೆ ಎಂದು ದಿನಾಂಕವನ್ನು ಘೋಷಿಸಲಿ ಎಂದು ರಾಮಜನ್ಮಭೂಮಿ ದೇವಾಲಯದ ಪ್ರಮುಖ ಅರ್ಚಕ ಮಹಾಂತ ಸತ್ಯೇಂದ್ರ ದಾಸ್‌ ಹೇಳಿದ್ದಾರೆ.

ರಾಮ ಇರಬೇಕಾದ್ದು ದೇಗುಲದಲ್ಲಿ:ಇದೇ ವೇಳೆ, ಶ್ರೀರಾಮನ ಬೃಹತ್‌ ಪ್ರತಿಮೆ ನಿರ್ಮಾಣದ ಕುರಿತು ಪ್ರತಿಕ್ರಿಯಿಸಿರು ಸತ್ಯೇಂದ್ರ ದಾಸ್‌, “ರಾಮ ಇರಬೇಕಾದ್ದು ದೇವಾಲಯದಲ್ಲೇ ಹೊರತು, ಬಯಲಲ್ಲಿ ಅಲ್ಲ. ಮುಕ್ತವಾದ ಬಯಲಲ್ಲಿ ರಾಮನ ಪ್ರತಿಮೆ ನಿರ್ಮಿಸುವುದನ್ನು ಒಪ್ಪಲಾಗದು. ಪ್ರತಿಮೆ ನಿರ್ಮಿಸಿದರೆ ಅದರ ನಿರ್ವಹಣೆ ಮಾಡುವವರು ಹಾಗೂ ಪ್ರತಿದಿನ ಪೂಜೆ ಮಾಡುವವರು ಯಾರು ಎಂದು ಪ್ರಶ್ನಿಸಿದ್ದಾರೆ. ಅದೊಂದು ರಾಜಕೀಯ ಪ್ರತಿಮೆ ಆಗಬಾರದು. ದೇಶಾದ್ಯಂತ ಹಲವು ರಾಜಕೀಯ ಮುಖಂಡರ ಪ್ರತಿಮೆಗಳಿವೆ. ಅವುಗಳ ಪರಿಸ್ಥಿತಿ ಹೇಗಿದೆ ಎಂಬುದು ನಮಗೆ ಗೊತ್ತು. ಶ್ರೀರಾಮನ ಪ್ರತಿಮೆಗೆ ಆ ಸ್ಥಿತಿ ಬರಬಾರದು ಎಂಬುದು ನಮ್ಮ ಕಳಕಳಿ ಎಂದೂ ಅವರು ತಿಳಿಸಿದ್ದಾರೆ.

ರಾಮನಿಗಾಗಿ ದೇಗುಲ ಕಾಯುತ್ತಿದೆ: ಮೌರ್ಯ
ರಾಮಜನ್ಮಭೂಮಿ ವಿವಾದ ಸಂಬಂಧ ನೀಡುವ ತೀರ್ಪು ಸುಪ್ರೀಂ ಕೋರ್ಟ್‌ನ ವಿಶೇಷಾಧಿಕಾರವಷ್ಟೆ. ಅದೇನೇ ಆದರೂ, ರಾಮ್‌ಲಲ್ಲಾ ಜಾಗದಲ್ಲಿ ಮಂದಿರ ಬಂದೇ ಬರುತ್ತದೆ. ರಾಮಮಂದಿರವು ಶ್ರೀರಾಮನಿಗಾಗಿ ಕಾಯುತ್ತಿದೆ ಎಂದು ಉ.ಪ್ರದೇಶದ ಉಪಮುಖ್ಯಮಂತ್ರಿ ಕೇಶವ್‌ ಪ್ರಸಾದ್‌ ಮೌರ್ಯ ಸೋಮವಾರ ಹೇಳಿದ್ದಾರೆ.

Advertisement

ರಾಮಮಂದಿರ, ರಾಮಸೇತುವಿನ ಅಸ್ತಿತ್ವವನ್ನು ನಿರಾಕರಿಸುವ ಮೂಲಕ ಸಂಚು ರೂಪಿಸಿದ ಕಾಂಗ್ರೆಸ್‌ ಈಗ ದೇಶದ ಜನರಲ್ಲಿ ಕ್ಷಮೆ ಕೋರಬೇಕು. ಸಂತರು ಜನಸಾಮಾನ್ಯರ ಪ್ರತಿಧ್ವನಿಯಾಗಿ ಮಾತನಾಡಿದ್ದಾರೆ. ಮೋದಿ ಮತ್ತೂಮ್ಮೆ ಅಧಿಕಾರಕ್ಕೆ ಬರುವುದನ್ನು ತಡೆಯಲು ಸಾಧ್ಯವಿಲ್ಲ ಎಂಬುದನ್ನು ಅದು ಸೂಚಿಸಿದೆ.
– ನಿತ್ಯಾನಂದ ರಾಯ್‌, 
ಬಿಹಾರ ಬಿಜೆಪಿ ಘಟಕದ ಅಧ್ಯಕ್ಷ

ರಾಮಮಂದಿರ ವಿವಾದವನ್ನು ಹಿಂದೂಗಳು ಮತ್ತು ಮುಸ್ಲಿಮರು ಮಾತುಕತೆ ನಡೆಸಿ ಪರಿಹರಿಸಿ ಕೊಳ್ಳಬೇಕೇ ಹೊರತು, ಅದಕ್ಕೆ ಅಧ್ಯಾದೇಶ ತರಬೇಕಾದ ಅಗತ್ಯವಿಲ್ಲ. ಸುಪ್ರೀಂ ಕೋರ್ಟ್‌ ತೀರ್ಪು ಬರುವವರೆಗೆ ಯಾರೂ, ಕಾನೂನು ಕೈಗೆತ್ತಿಕೊಂಡು ಮಂದಿರ ನಿರ್ಮಾಣ ಕಾರ್ಯ ಆರಂಭಿಸಬಾರದು.
– ರಾಮದಾಸ್‌ ಅಠಾವಳೆ, ಕೇಂದ್ರ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next