ಸುರಪುರ: ಕೆಲಸದ ವಿಷಯದಲ್ಲಿ ತಮ್ಮಲ್ಲಿಯೇ ವಾಗ್ಧಾವಾದ ಮಾಡಿಕೊಂಡಿದ್ದ ನಗರದ ಹೊರವಲಯದ ವೆಂಕಟಾಪುರ ಹತ್ತಿರದ ಆಹಾರ ನಾಗರಿಕ ಸರಬರಾಜು ಗೋದಾಮ ಹಮಾಲರ ಸಮಸ್ಯೆಯನ್ನು ತಹಶೀಲ್ದಾರ್ ನಿಂಗಣ್ಣ ಬಿರಾದಾರ ಬಗೆಹರಿಸಿದರು.
ಹಮಾಲರ ನಡುವೆ ತಕರಾರು ನಡೆದು ಬೆಳಗಿನಿಂದ ಮಧ್ಯಾಹ್ನ 12:00ರ ವರೆಗೆ ಲೋಂಡಿಂಗ್ ಸ್ಥಗಿತಿಗೊಂಡಿತ್ತು. ಗೋದಾಮು ವ್ಯವಸ್ಥಾಪಕರು ಸಾಕಷ್ಟು ತಿಳಿ ಹೇಳಿ ದರು ಕೂಡ ಹಮಾಲರು
ಕೆಲಸಕ್ಕೆ ಮುಂದಾಗದೆ ಪ್ರತಿಭಟನೆಗೆ ಮುಂದಾಗಿದ್ದರು. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ನಿಂಗಣ್ಣ ಬಿರಾದಾರ ಮತ್ತು ಸಿಪಿಐ ಎಸ್.ಎಂ. ಪಾಟೀಲ ಹಮಾಲರ ಸಮಸ್ಯೆ ಆಲಿಸಿದರು. ಈ ರೀತಿ ನಿಮ್ಮನಿಮ್ಮಲ್ಲಿಯೇ ಕಚ್ಚಾಡುವುದು ಸರಿಯಲ್ಲ. ಏನೇ ಸಮಸ್ಯೆ ಇದ್ದರು ಅದನ್ನು ಬಗೆಹರಿಸುತ್ತೇವೆ. ನಿಮ್ಮಿಂದ ಆಗದೆ ಇದ್ದರೆ ಹೇಳಿ ಬೇರಡೆಯಿಂದ ಹಮಾಲರನ್ನು ಕರೆತಂದು ಕೆಲಸ ಮಾಡಿಸುತ್ತೇವೆ. ಯಾವುದೇ ಕಾರಣಕ್ಕೆ ಕೆಲಸ ಸ್ಥಗಿತಗೊಳಿಸುವಂತಿಲ್ಲ ಎಂದು ತಾಕೀತು ಮಾಡಿದರು.
ಲಾಕ್‌ಡೌನ್‌ನಿಂದ ಕೆಲಸವಿಲ್ಲದೆ ಮನೆಯಲಿಯೇ ಕುಳಿತಿದ್ದೇವೆ. ಉಪಜೀವನಕ್ಕೆ ತೊಂದರೆಯಾಗಿದೆ. ಒಂದೇ ಕುಟುಂಬದಲ್ಲಿ ಮೂರು ನಾಲ್ಕು ಜನರನ್ನು ಕೆಲಸಕ್ಕೆ ತೆಗೆದುಕೊಂಡರೆ ಹೇಗೆ? ನಮಗೂ ಕೆಲಸ ನೀಡಿ ಸಾಮಾಜಿಕ ನ್ಯಾಯ ಕಲ್ಪಿಸಿಕೊಡಬೇಕು ಎಂದು ಕೆಲ ಹಮಾಲರು ಅಳಲು ತೋಡಿಕೊಂಡರು. 20-30 ವರ್ಷಗಳಿಂದ ಕೆಲಸ ಮಾಡಿದ್ದೇವೆ. ಹೊಸದಾಗಿ ಬಂದವರನ್ನು ಕೆಲಸಕ್ಕೆ ತೆಗೆದುಕೊಂಡರೆ ಹೇಗೆ? ಮೊದಲಿನಿಂದ ಮಾಡಿಕೊಂಡು ಬಂದವರನ್ನು ಪರಿಗಣಿಸುವಂತೆ ಆಗ್ರಹಿಸಿದರು.
ಎಲ್ಲರಿಗೂ ಕೆಲಸ ನೀಡಲು ಆಗುವುದಿಲ್ಲ. ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಕೆಲಸ ನೀಡಲಾಗುವುದು. ಎಲ್ಲ ಹಮಾಲರಿಗೆ ಗುರುತಿನ ಚೀಟಿ ನೀಡುತ್ತೇವೆ. ಚೀಟಿ ಹೊಂದಿದ ಹಮಾಲರು ಮಾತ್ರ ಕೆಲಸ ಮಾಡಬೇಕು. ಕೆಲಸ ಮಾಡುವ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದಕೊಳ್ಳಬೇಕು ಎಂದು ಸೂಚಿಸಿದರು. ಬಳಿಕ ಹಮಾಲರು ಪ್ರತಿಭಟನೆ ಕೈಬಿಟ್ಟು ಕೆಲಸ ಆರಂಭಿಸಿದರು. ಗೋದಾಮು ವ್ಯವಸ್ಥಾಪಕ ಕಲ್ಲಪ್ಪ, ಹಮಾಲರ ಸಂಘದ ಅಧ್ಯಕ್ಷ ಹಣಮಂತ ನಾಯಕ, ಉಪಾಧ್ಯಕ್ಷ ಗಿರೆಪ್ಪ ನಾಯಕ ಇದ್ದರು.