Advertisement

ಗದಗ: ಸರ್ಕಾರಿ ಶಾಲೆ ಗೋಡೆಗೆ ಚಂದದ ಚಿತ್ತಾರ – ಬಂದಿದೆ ಜಿಲ್ಲಾಮಟ್ಟದ ಪ್ರಶಸ್ತಿ…

03:43 PM Jan 06, 2025 | Team Udayavani |

ಉದಯವಾಣಿ ಸಮಾಚಾರ
ನರೇಗಲ್ಲ: ಸರಕಾರಿ ಶಾಲೆಗಳೆಂದರೆ ಮೂಗು ಮುರಿಯುವವರೇ ಹೆಚ್ಚು. ಆದರೆ ನರೇಗಲ್ಲದಲ್ಲಿರುವ ಸರಕಾರಿ ಮಾದರಿ ಕೇಂದ್ರ ಹೆಣ್ಣು ಮಕ್ಕಳ ಶಾಲೆ ಇದಕ್ಕೆ ಅಪವಾದವಾಗಿದ್ದು, ತನ್ನ ಶೈಕ್ಷಣಿಕ ಚಟುವಟಿಕೆಗಳ ಮೂಲಕ ಈಗ ಎಲ್ಲರ ಗಮನ ಸೆಳೆದಿದೆ.

Advertisement

ಕೆಲವೇ ಕೆಲವು ವರ್ಷಗಳ ಕೆಳಗೆ ಈ ಶಾಲೆಯಲ್ಲಿ ದಾಖಲಾತಿ ಕೊರತೆ ಇತ್ತು. ಆದರೆ ಈಗಿರುವ ಸಿಬ್ಬಂದಿಯ ಸತತ ಪ್ರಯತ್ನ, ಪ್ರಾಮಾಣಿಕ ಪರಿಶ್ರಮ ಮತ್ತು ಶಾಲಾ ಅಭಿವೃದ್ಧಿ ಸಮಿತಿಯವರ ಸಂಪೂರ್ಣ ಸಹಕಾರದಿಂದ ಶಾಲೆಯಲ್ಲಿನ ಮಕ್ಕಳ ದಾಖಲಾತಿ ಸಂಖ್ಯೆ ಹೆಚ್ಚಾಗುತ್ತ ನಡೆದಿದೆ. ಈಗ ಒಟ್ಟು 302 ಮಕ್ಕಳಿದ್ದಾರೆ. 130 ಬಾಲಕರು, 172 ಬಾಲಿಕೆಯರು ಓದುತ್ತಿದ್ದಾರೆ.

ಈ ಶಾಲೆಯ ವಾತಾವರಣ ಗಮನಿಸಿದರೆ ಇಲ್ಲಿ ಕಲಿಕೆಗೆ ಪೂರಕ ಅನೇಕ ಅಂಶಗಳಿವೆ. ಶಿಕ್ಷಕರಿಗೆ ಮಕ್ಕಳ ಬಗ್ಗೆ, ಅವರ ಶೈಕ್ಷಣಿಕ ಅಭಿವೃದ್ಧಿ ಬಗ್ಗೆ ವಿಶೇಷ ಕಾಳಜಿ ಇದೆ. ಶಿಕ್ಷಕರು ಹೆಚ್ಚಾಗಿ ವರ್ಗ ಕೋಣೆಯಲ್ಲಿದ್ದು ಪಾಠ ಬೋಧನೆಯಲ್ಲಿರುತ್ತಾರೆ. ಚಟುವಟಿಕೆ ಆಧಾರಿತ ಶಿಕ್ಷಣ ನೀಡುತ್ತಿರುವುದರಿಂದ ವಿದ್ಯಾರ್ಥಿಗಳಲ್ಲಿ ಕಲಿಕೆ ಬಗ್ಗೆ ಹೆಚ್ಚಿನ ಆಸಕ್ತಿ ಇದೆ. ಮುಖ್ಯ ಶಿಕ್ಷಕರು, ಸಹೋದ್ಯೋಗಿಗಳು ಒಂದೇ ಮನೆಯವರಂತೆ ಕಾರ್ಯ ನಿರ್ವಹಿಸುತ್ತಿರುವುದು ಇಲ್ಲಿ ಎದ್ದು ಕಾಣುತ್ತದೆ. ಈ ಶಾಲೆಗೆ ಜಿಲ್ಲಾಮಟ್ಟದ ಉತ್ತಮ ಶಾಲಾ ಪ್ರಶಸ್ತಿಯೂ ದೊರಕಿದೆ.

ಶಾಲೆಯ ಪ್ರಗತಿ ಕಂಡು ಟಾಟಾ ಪವರ್‌ ಕಮ್ಯುನಿಟಿ ಡೆವಲಪ್‌ಮೆಂಟ್‌ ಟ್ರಸ್ಟ್‌ನವರು ಈ ಶಾಲೆಯ ಎಲ್ಲ ಕೋಣೆಗಳ ಹೊರಗಿನ ಗೋಡೆಗಳಿಗೆ ಚಂದದ ಚಿತ್ತಾರ ಬಿಡಿಸಿ ಶಾಲೆಯನ್ನು ಇನ್ನಷ್ಟು ಚಂದಗೊಳಿಸಿದ್ದಾರೆ. ಅಂದಾಜು 1ಲಕ್ಷ ರೂ.ಗಳ ವೆಚ್ಚದಲ್ಲಿ ಅವರು ಬಿಡಿಸಿರುವ ಚಿತ್ರಗಳು ಸೂಜಿಗಲ್ಲಿನಂತೆ ಎಲ್ಲರನ್ನೂ ಸೆಳೆಯುತ್ತಿವೆ. ಕೋಣೆ ಒಳಗಡೆ ಅಷ್ಟೇ ಅಲ್ಲ ಹೊರಗಡೆಯೂ ಚಿತ್ರಗಳು ವಿದ್ಯಾರ್ಥಿಗಳಿಗೆ ಕಲಿಸುತ್ತಿವೆ.

Advertisement

ಪ್ರತಿ ವಿದ್ಯಾರ್ಥಿಯ ಶೈಕ್ಷಣಿಕ ಪ್ರಗತಿಗೆ ಗಮನ, ಚಟುವಟಿಕೆ ಆಧಾರಿತ ಶಿಕ್ಷಣ, ಪ್ರತಿ ವರ್ಷದ ಶ್ರಾವಣ ಮಾಸದಲ್ಲಿ ಮಕ್ಕಳಿಗೆ ಸಿಹಿಯೂಟದ ಅಮೃತ ಯೋಜನೆ, ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಳಕ್ಕೆ ಶ್ರಮಿಸಿರುವುದು ದಾಖಲಾತಿಗೆ ಕಾರಣವಾಗಿದೆ-
ಬಿ.ಬಿ.ಕುರಿ, ಮುಖ್ಯ ಶಿಕ್ಷಕ

ಸಿಬ್ಬಂದಿ ವಿದ್ಯಾರ್ಥಿಗಳಿಗೆ ವಿಶೇಷ ಸಮವಸ್ತ್ರ ವ್ಯವಸ್ಥೆ ಮಾಡಿರುವುದು, ಮಕ್ಕಳಿಗೆ ಕ್ಷೇತ್ರ ಭೇಟಿ ಮಾಡಿಸಿರುವುದು, ಮಕ್ಕಳ ಸಂತೆ, ವಸ್ತು ಪ್ರದರ್ಶನ ಮಾಡಲು ಯೋಜಿಸಿರುವುದು ಶಾಲಾ ದಾಖಲಾತಿ ಹೆಚ್ಚಾಗಲು ಕಾರಣವಾಗಿದೆ.
ಆನಂದ ಕೊಟಗಿ,
ಅಧ್ಯಕ್ಷ ಶಾಲಾಭಿವೃದ್ಧಿ ಸಮಿತಿ

ಶಾಲೆಯ ಪರಿಸರವು ಶೈಕ್ಷಣಿಕ ಅಭಿವೃದ್ಧಿಗೆ ಬೇಕಾದ ಎಲ್ಲ ಅಂಶಗಳನ್ನೊಳಗೊಂಡಿದೆ. ಚಟುವಟಿಕೆ ಆಧಾರಿತ ಶಿಕ್ಷಣ, ಪ್ರತಿ ವಿದ್ಯಾರ್ಥಿಯ ವೈಯಕ್ತಿಕ ಕಾಳಜಿ, ಸಮರ್ಪಣಾ ಮನೋಭಾವದ ಶಿಕ್ಷಕರು, ಕ್ರಿಯಾಶೀಲ ಮುಖ್ಯೋಪಾಧ್ಯಾಯರು ಈ ಬೆಳವಣಿಗೆಗೆ ಕಾರಣರಾಗಿದ್ದಾರೆ. ಅವರೆಲ್ಲರನ್ನು, ಶಾಲಾಭಿವೃದ್ಧಿ ಸಮಿತಿಯವರನ್ನೂ ನಾನು ಅಭಿನಂದಿಸುತ್ತೇನೆ.
ಆರ್‌.ಎಸ್‌. ಬುರಡಿ, ಡಿಡಿಪಿಐ, ಗದಗ

*ಅರುಣ ಬಿ. ಕುಲಕರ್ಣಿ

Advertisement

Udayavani is now on Telegram. Click here to join our channel and stay updated with the latest news.

Next