Advertisement

ಎಲಿಮಿನೇಟರ್‌ ಪಂದ್ಯ: ಕೆಕೆಆರ್‌ ಅದೃಷ್ಟ ದೊಡ್ಡದಿತ್ತು…

03:50 AM May 19, 2017 | Team Udayavani |

ಬೆಂಗಳೂರು: ಬುಧವಾರ ರಾತ್ರಿ ಆರಂಭಗೊಂಡ ಹೈದರಾಬಾದ್‌-ಕೋಲ್ಕತಾ ನಡುವಿನ ಎಲಿಮಿನೇಟರ್‌ ಪಂದ್ಯ ಬಿರುಗಾಳಿ, ಮಳೆಯ ಅಬ್ಬರಕ್ಕೆ ಸಿಲುಕಿ ಕೊನೆಗೂ ಮುಕ್ತಾಯ ಕಾಣುವಾಗ ಗಡಿಯಾರದ ಮುಳ್ಳು ಮಧ್ಯರಾತ್ರಿ ದಾಟಿ ಗುರುವಾರದ 1.45 ತೋರಿಸುತ್ತಿತ್ತು! ಆಗ 6 ಓವರ್‌ಗಳ ಟಾರ್ಗೆಟ್‌ ಮೂಲಕ ನಿರ್ಧರಿಸಲಾದ ಪಂದ್ಯದ ಫ‌ಲಿತಾಂಶ ಕೋಲ್ಕತಾ ನೈಟ್‌ರೈಡರ್ ಪರವಾಗಿ ಬಂತು; ಗಂಭೀರ್‌ ಬಳಗದ ಅದೃಷ್ಟ ಅನಾವರಣಗೊಂಡಿತು. ಅದು 7 ವಿಕೆಟ್‌ ಜಯ ಸಾಧಿಸಿ ಹಾಲಿ ಚಾಂಪಿಯನ್‌ ಸನ್‌ರೈಸರ್ ಹೈದಾರಬಾದ್‌ ತಂಡವನ್ನು ಮನೆಗಟ್ಟಿತು.

Advertisement

ಕೆಕೆಆರ್‌ ಈ ಕೂಟದಲ್ಲೇ ಅತ್ಯಂತ ಬಿಗುವಾದ ದಾಳೆ ಸಂಣಘಟಿಸಿ ಹೈದರಾಬಾದಿಗೆ ಕಡಿವಾಣ ಹಾಕಿದ್ದು ಈ ಪಂದ್ಯದ ವೈಶಿಷ್ಟé. ವಾರ್ನರ್‌ ಬಳಗದಿಂದ ಗಳಿಸಲು ಸಾಧ್ಯವಾದದ್ದು 7ಕ್ಕೆ 128 ರನ್‌ ಮಾತ್ರ. ಈ ಇನ್ನಿಂಗ್ಸ್‌ ಮುಗಿಯುತ್ತಿದ್ದಂತೆಯೆ ಜೋರು ಮಳೆ ಸುರಿಯತೊಡಗಿತು. ಜತೆಗೆ ಬಿರುಗಾಳಿ ಕೂಡ ತಾಂಡವವಾಡಿತು. ಮಳೆ ನಿಂತೀತು, ಪಂದ್ಯ ಆರಂಭವಾದೀತು ಎಂಬ ನಿರೀಕ್ಷೆಯಲ್ಲೇ ಮಧ್ಯರಾತ್ರಿ ದಾಟಿತು. ಪಂದ್ಯ ರದ್ದುಗೊಳ್ಳಲು ರಾತ್ರಿ 1.25ರ ಗಡುವು ನಿಗದಿಗೊಂಡಿತು.

6 ಓವರ್‌, 48 ರನ್‌ ಟಾರ್ಗೆಟ್‌
ಆದರೆ ಕೆಕೆಆರ್‌ ಅದೃಷ್ಟ ದೊಡ್ಡದಿತ್ತು. 12.45ರ ಬಳಿಕ ಮಳೆ ನಿಂತಿತು. 12.55ರ ವೇಳೆ 6 ಓವರ್‌ಗಳ ಆಟಕ್ಕೆ ವೇದಿಕೆ ಸಿದ್ಧಗೊಂಡಿತು. ಕೋಲ್ಕತಾಕ್ಕೆ ಲಭಿಸಿದ ಗುರಿ 48 ರನ್‌. ಆದು 5.2 ಓವರ್‌ಗಳಿಂದ 3 ವಿಕೆಟ್‌ ನಷ್ಟದಲ್ಲಿ ಗುರಿ ಮುಟ್ಟಿ ಮುಂಬೈ ವಿರುದ್ಧ 2ನೇ ಕ್ವಾಲಿಫ‌ಯರ್‌ ಆಡಲು ಅಣಿಯಾಯಿತು. ಅಕಸ್ಮಾತ್‌ ಈ ಪಂದ್ಯ ರದ್ದುಗೊಂಡಲ್ಲಿ ಆಗ ಲೀಗ್‌ ಹಂತದಲ್ಲಿ ಕೋಲ್ಕತಾಗಿಂತ ಮೇಲಿನ ಸ್ಥಾನದಲ್ಲಿದ್ದ ಹೈದರಾಬಾದ್‌ ಮುನ್ನಡೆಯುತ್ತಿತ್ತು. ವಾರ್ನರ್‌ ಪಡೆಯನ್ನು 128ಕ್ಕೆ ನಿಯಂತ್ರಿಸಿಯೂ ಹೊರಬೀಳಬೇಕಾದ ಸಂಕಟ ಕೆಕೆಆರ್‌ನದ್ದಾಗುತ್ತಿತ್ತು. ಹೀಗಾಗಲಿಲ್ಲ, ಗಂಭೀರ್‌ ತಂಡದ ಅದೃಷ್ಟ ಚೆನ್ನಾಗಿತ್ತು!

ಚೇಸಿಂಗ್‌ ವೇಳೆ ಕೆಕೆಆರ್‌ ಆರಂಭ ಅತ್ಯಂತ ಆಘಾತಕಾರಿಯಾಗಿತ್ತು. ಮೊದಲ ಓವರಿನ 3-4ನೇ ಎಸೆತಗಳಲ್ಲಿ ಲಿನ್‌ ಮತ್ತು ಪಠಾಣ್‌ ವಿಕೆಟ್‌ ಬಿತ್ತು. ಮುಂದಿನ ಓವರಿನ ಮೊದಲ ಎಸೆತದಲ್ಲೇ ಉತ್ತಪ್ಪ ಆಟ ಮುಗಿಸಿದರು.

ಸ್ಕೋರ್‌ 3 ವಿಕೆಟಿಗೆ 12 ರನ್‌!
ಕೋಲ್ಕತಾವನ್ನು ಈ ಆತಂಕದಿಂದ ಪಾರುಗೊಳಿಸಿ, ತಂಡವನ್ನು ದಡ ಮುಟ್ಟಿಸಿದ ಸಂಪೂರ್ಣ ಶ್ರೇಯಸ್ಸು ನಾಯಕ ಗೌತಮ್‌ ಗಂಭೀರ್‌ಗೆ ಸಲ್ಲುತ್ತದೆ. ಅವರು 19 ಎಸೆತಗಳಿಂದ 32 ರನ್‌ ಬಾರಿಸಿ ಅಜೇಯರಾಗಿ ಉಳಿದರು. ಕಪ್ತಾನನ ಈ ಆಟದ ವೇಳೆ 2 ಸಿಕ್ಸರ್‌, 2 ಬೌಂಡರಿ ಸಿಡಿಯಿತು. ನಾಟೌಟ್‌ ಆಗಿ ಉಳಿದ ಮತ್ತೂಬ್ಬ ಆಟಗಾರ ಇಶಾಂಕ್‌ ಜಗ್ಗಿ (5).

Advertisement

ಕೆಕೆಆರ್‌ ಮತ್ತೆ ಬೆಂಗಳೂರು ಅಂಗಳದಲ್ಲೇ ಮುಂಬೈ ವಿರುದ್ಧ 2ನೇ ಕ್ವಾಲಿಫ‌ಯರ್‌ ಪಂದ್ಯ ಆಡಲಿದೆ. ಇದರಲ್ಲಿ ಮಳೆಯ ಪಾತ್ರವೇನು ಎಂಬುದು ಶುಕ್ರವಾರ ರಾತ್ರಿಯ ಕುತೂಹಲಗಳಲ್ಲೊಂದು!

ಸ್ಕೋರ್‌ಪಟ್ಟಿ
ಸನ್‌ರೈಸರ್ ಹೈದರಾಬಾದ್‌
20 ಓವರ್‌ಗಳಲ್ಲಿ 7 ವಿಕೆಟಿಗೆ 128
* ಕೋಲ್ಕತಾ ನೈಟ್‌ರೈಡರ್
(ಗೆಲುವಿನ ಗುರಿ: 6 ಓವರ್‌ಗಳಲ್ಲಿ 48 ರನ್‌)
ರಾಬಿನ್‌ ಉತ್ತಪ್ಪ    ಸಿ ಧವನ್‌ ಬಿ ಜೋರ್ಡನ್‌    1
ಕ್ರಿಸ್‌ ಲಿನ್‌    ಸಿ ಓಜಾ ಬಿ ಭುವನೇಶ್ವರ್‌    6
ಯೂಸುಫ್ ಪಠಾಣ್‌    ರನೌಟ್‌    0
ಗೌತಮ್‌ ಗಂಭೀರ್‌    ಔಟಾಗದೆ    32
ಇಶಾಂಕ್‌ ಜಗ್ಗಿ    ಔಟಾಗದೆ    5
ಇತರ        4
ಒಟ್ಟು  (5.2 ಓವರ್‌ಗಳಲ್ಲಿ 3 ವಿಕೆಟಿಗೆ)        48
ವಿಕೆಟ್‌ ಪತನ: 1-7, 2-7, 3-12.
ಬೌಲಿಂಗ್‌:
ಭುವನೇಶ್ವರ್‌ ಕುಮಾರ್‌        1-0-11-1
ಕ್ರಿಸ್‌ ಜೋರ್ಡನ್‌        1-0-9-1
ರಶೀದ್‌ ಖಾನ್‌        2-0-11-0
ಸಿದ್ಧಾರ್ಥ್ ಕೌಲ್‌        1-0-14-0
ಬಿಪುಲ್‌ ಶರ್ಮ        0.2-0-2-0

ಪಂದ್ಯಶ್ರೇಷ್ಠ: ನಥನ್‌ ಕೋಲ್ಟರ್‌ ನೈಲ್‌

ಎಕ್ಸ್‌ಟ್ರಾ ಇನ್ನಿಂಗ್ಸ್‌
* ಐಪಿಎಲ್‌ ಇತಿಹಾಸದಲ್ಲಿ ಮೊದಲ ಬಾರಿಗೆ ಪ್ಲೇ-ಆಫ್/ನಾಕೌಟ್‌ ಪಂದ್ಯಗಳ ವೇಳೆ ಓವರ್‌ ಕಡಿತಗೊಳಿಸಲಾಯಿತು. ಈವರೆಗೆ ಈ ಹಂತದ ಪಂದ್ಯಗಳು ಮಳೆಯಿಂದ ರದ್ದುಗೊಂಡ ದೃಷ್ಟಾಂತಗಳೂ ಕಾಣಸಿಗುವುದಿಲ್ಲ. 2014ರ ಕೆಕೆಆರ್‌-ಪಂಜಾಬ್‌ ನಡುವಿನ ಮೊದಲ ಕ್ವಾಲಿಫ‌ಯರ್‌ ಪಂದ್ಯವನ್ನು ಮಳೆಯಿಂದಾಗಿ ಮೀಸಲು ದಿನದಂದು ಆಡಲಾಗಿತ್ತು.
* ವೃತ್ತಿಪರ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ಕೇನ್‌ ವಿಲಿಯಮ್ಸನ್‌-ಟ್ರೆಂಟ್‌ ಬೌಲ್ಟ್ ಪರಸ್ಪರ ವಿರುದ್ಧ ತಂಡಗಳಲ್ಲಿ ಆಡಿದರು.
* ಶಿಖರ್‌ ಧವನ್‌ ಅವರ ಐಪಿಎಲ್‌ ಪ್ಲೆ-ಆಫ್/ನಾಕೌಟ್‌ ಸರಾಸರಿ 12.38. ಇದು ಉಳಿದೆಲ್ಲ ಆಟಗಾರರಿಗಿಂತ ಕಡಿಮೆ. ಈ ಹಂತದಲ್ಲಿ ಅವರು 8 ಇನ್ನಿಂಗ್ಸ್‌ಗಳಿಂದ ಗಳಿಸಿದ್ದು ಕೇವಲ 99 ರನ್‌.
* ಗೌತಮ್‌ ಗಂಭೀರ್‌ ಐಪಿಎಲ್‌ ಪ್ಲೆ-ಆಫ್/ನಾಕೌಟ್‌ ಪಂದ್ಯದಲ್ಲಿ ಸರ್ವಾಧಿಕ ವೈಯಕ್ತಿಕ ರನ್‌ ದಾಖಲಿಸಿದರು (ಔಟಾಗದೆ 32). ಈ ಹಂತದಲ್ಲಿ ಅವರು 8 ಇನ್ನಿಂಗ್ಸ್‌ಗಳಿಂದ 101 ರನ್‌ ಮಾಡಿದ್ದಾರೆ.
* ಗಂಭೀರ್‌ ಕೆಕೆಆರ್‌ ಪರ ಆಡುತ್ತ 3 ಸಾವಿರ ರನ್‌ ಪೂರ್ತಿಗೊಳಿಸಿದರು (3,023 ರನ್‌). ಅವರು ಒಂದೇ ತಂಡದ ಪರ 3 ಸಾವಿರ ರನ್‌ ಗಳಿಸಿದ ಐಪಿಎಲ್‌ನ 4ನೇ ಆಟಗಾರ. ಉಳಿದವರೆಂದರೆ ರೈನಾ (ಚೆನ್ನೈ), ಕೊಹ್ಲಿ (ಆರ್‌ಸಿಬಿ) ಮತ್ತು ಗೇಲ್‌ (ಆರ್‌ಸಿಬಿ).
* ಭುವನೇಶ್ವರ್‌ ಕುಮಾರ್‌ 26 ವಿಕೆಟ್‌ ಉರುಳಿಸಿದರು. ಇದು ಐಪಿಎಲ್‌ ಋತುವೊಂದರಲ್ಲಿ ಭಾರತೀಯ ಬೌಲರ್‌ನ ಅತ್ಯುತ್ತಮ, ಒಟ್ಟಾರೆಯಾಗಿ 3ನೇ ಅತ್ಯುತ್ತಮ ಸಾಧನೆಯಾಗಿದೆ. ಡ್ವೇನ್‌ ಬ್ರಾವೊ (2013ರಲ್ಲಿ 32 ವಿಕೆಟ್‌), ಲಸಿತ ಮಾಲಿಂಗ ಮತ್ತು ಜೇಮ್ಸ್‌ ಫಾಕ್ನರ್‌ (2011 ಮತ್ತು 2013ರಲ್ಲಿ ತಲಾ 28 ವಿಕೆಟ್‌) ಮೊದಲೆರಡು ಸ್ಥಾನದಲ್ಲಿದ್ದಾರೆ.
* ಭುವನೇಶ್ವರ್‌ ಕುಮಾರ್‌ 2013ರ ಬಳಿಕ ಐಪಿಎಲ್‌ನಲ್ಲಿ 100 ವಿಕೆಟ್‌ ಕಿತ್ತರು. ಇದು ಈ ಅವಧಿಯಲ್ಲಿ ಬೌಲರ್‌ ಓರ್ವನ ಅತ್ಯುತ್ತಮ ಸಾಧನೆಯಾಗಿದೆ. ಅನಂತರದ ಸ್ಥಾನದಲ್ಲಿರುವವರು ಮೋಹಿತ್‌ ಶರ್ಮ (83 ವಿಕೆಟ್‌).
* ಡೇವಿಡ್‌ ವಾರ್ನರ್‌ ಅತ್ಯಂತ ಕಡಿಮೆ, 114 ಇನ್ನಿಂಗ್ಸ್‌ಗಳಿಂದ ಐಪಿಎಲ್‌ನಲ್ಲಿ 4 ಸಾವಿರ ರನ್‌ ಪೂರ್ತಿಗೊಳಿಸಿದರು. ಹಿಂದಿನ ದಾಖಲೆ ವಿರಾಟ್‌ ಕೊಹ್ಲಿ ಹೆಸರಲ್ಲಿತ್ತು (128 ಇನ್ನಿಂಗ್ಸ್‌).
* ವಾರ್ನರ್‌ ಐಪಿಎಲ್‌ನಲ್ಲಿ 4 ಸಾವಿರ ರನ್‌ ಬಾರಿಸಿದ ಮೊದಲ ವಿದೇಶಿ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾದರು. ಒಟ್ಟಾರೆಯಾಗಿ 5ನೇ ಬ್ಯಾಟ್ಸ್‌ಮನ್‌.

Advertisement

Udayavani is now on Telegram. Click here to join our channel and stay updated with the latest news.

Next